ಕರ್ನಾಟಕದ ಉದಯಕ್ಕೆ ಕಾರಣವಾದ ಅಂಬೇಡ್ಕರ್ ಚಿಂತನೆಗಳು

Update: 2017-11-14 18:39 GMT

ಕರ್ನಾಟಕ 1956 ನವೆಂಬರ್ 1ರಂದು ಕನ್ನಡ ಮಾತಾಡುವ ಜನರನ್ನೊಳಗೊಂಡ ಪ್ರತ್ಯೇಕ ಭಾಷಾವಾರು ರಾಜ್ಯವಾದದ್ದು ಎಲ್ಲರಿಗೂ ತಿಳಿದದ್ದೆ. ಆ ಕಾರಣಕ್ಕೆ ಪ್ರತೀ ವರ್ಷ ನವೆಂಬರ್ 1ರಂದು ನಾವು ಕನ್ನಡ ರಾಜ್ಯೋತ್ಸವ ಆಚರಿಸುತ್ತೇವೆ. ನವೆಂಬರ್ ತಿಂಗಳು ಪೂರ್ತಿ ಕನ್ನಡದ ಕಹಳೆ ಮೊಳಗುತ್ತದೆ. ಆ ಪರಿ ರಾಜ್ಯೋತ್ಸವಕ್ಕೆ ಮಹತ್ವ ಕೊಡಲಾಗುತ್ತದೆ. ಹಾಗಿದ್ದರೆ ಇಲ್ಲಿ ಅಂಬೇಡ್ಕರ್ ಹೇಗೆ ಪ್ರಾಮುಖ್ಯತೆ ಪಡೆಯುತ್ತಾರೆ ಎಂದು ಕೆಲವರಿಗಾದರೂ ಆಶ್ಚರ್ಯವಾಗಬಹುದು. ಆದರೆ ಅಂಬೇಡ್ಕರ್ ಪ್ರಾಮುಖ್ಯತೆ ಪಡೆಯುತ್ತಾರೆ. ಏಕೆಂದರೆ ರಾಜ್ಯಗಳ ಪುನಾರಚನೆಗೆ ಸಂಬಂಧಿಸಿದಂತೆ 1955ರಲ್ಲಿ ರಚನೆಯಾಗಿದ್ದ ಆಯೋಗದ ಮುಂದೆ ಬಾಬಾಸಾಹೇಬರು ತಮ್ಮ ಚಿಂತನೆಗಳನ್ನು ಪ್ರಸ್ತಾಪಿಸಿದ್ದಾರೆ. ಆ ಮೂಲಕ ಭಾಷಾವಾರು ರಾಜ್ಯಗಳ ರಚನೆಗೆ ತಮ್ಮ ಪ್ರಬಲ ವಾದ ಮಂಡಿಸಿದ್ದಾರೆ.

ಈ ನಿಟ್ಟಿನಲ್ಲಿ ಅಂಬೇಡ್ಕರ್‌ರವರ ಮತ್ತು ಅವರ ಹಾಗೆಯೇ ವಾದ ಮಂಡಿಸಿದ ಇತರರ ವಾದದ ಆಧಾರದ ಮೇಲೆ ರಾಜ್ಯ ಪುನರ್‌ವಿಂಗಡಣಾ ಆಯೋಗ ಭಾಷಾವಾರು ರಾಜ್ಯಗಳ ರಚನೆಗೆ ಶಿಫಾರಸು ಮಾಡುತ್ತದೆ. ಹಾಗೆ ಶಿಫಾರಸುಗೊಂಡು ರಚಿತವಾದ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಮತ್ತು ಕನ್ನಡ ರಾಜ್ಯೋತ್ಸವದ ಈ ಹಿನ್ನೆಲೆಯಲ್ಲಿ ಅಂಬೇಡ್ಕರರು ಕೂಡ ಪ್ರಾಮುಖ್ಯತೆ ಪಡೆಯುತ್ತಾರೆ ಎಂಬುದು ಗಮನಿಸತಕ್ಕ ಅಂಶ.

ಕರ್ನಾಟಕ ಮತ್ತು ಆ ತರಹದ ಅನೇಕ ಭಾಷಾವಾರು ರಾಜ್ಯಗಳ ರಚನೆಯ ಹಿನ್ನೆಲೆಯಲ್ಲಿ ಅಂಬೇಡ್ಕರರ ವಿಚಾರಗಳನ್ನು ನೇರ ದಾಖಲಿಸುವುದಾದರೆ, ಅಂಬೇಡ್ಕರರು ಬರೆಯುತ್ತಾರೆ ‘‘ಒಂದು ಭಾಷೆ- ಒಂದು ರಾಜ್ಯ ಎಂಬುದು ಬಹುತೇಕ ದೇಶಗಳ ಆಡಳಿತ ವ್ಯವಸ್ಥೆಯ ಸರ್ವ ಸಾಮಾನ್ಯ ಲಕ್ಷಣವಾಗಿದೆ. ಉದಾಹರಣೆಗೆ ಜರ್ಮನಿಯ ಸಂವಿಧಾನವನ್ನು ಗಮನಿಸಿ, ಫ್ರಾನ್ಸ್‌ನ ಸಂವಿಧಾನವನ್ನು ಗಮನಿಸಿ, ಇಟಲಿಯ ಸಂವಿಧಾನ, ಇಂಗ್ಲೆಂಡ್‌ನ ಸಂವಿಧಾನ ಮತ್ತು ಅಮೆರಿಕದ ಸಂವಿಧಾನ ಹೀಗೆ ಸಂವಿಧಾನಗಳನ್ನು ಗಮನಿಸಿ. ಒಂದು ಭಾಷೆ- ಒಂದು ರಾಜ್ಯ ಎಂಬುದು ಕಡ್ಡಾಯ ನಿಯಮವಾಗಿದೆ ಮತ್ತು ಈ ನಿಯಮದಿಂದ ಎಲ್ಲೆಲ್ಲಿ ವಿಮುಖತೆಯು ನಡೆದಿದೆಯೋ ಅಲ್ಲೆಲ್ಲ ಆಡಳಿತ ವ್ಯವಸ್ಥೆಗೆ ಅಪಾಯ ಒದಗಿದೆ. ಅಂದಹಾಗೆ ಹಳೆಯ ಟರ್ಕಿಷ್ ಸಾಮ್ರಾಜ್ಯ ಮತ್ತು ಆಸ್ಟ್ರಿಯನ್ ಸಾಮ್ರಾಜ್ಯಗಳಲ್ಲಿ ನಾವು ಇಂತಹ ಮಿಶ್ರ ಭಾಷಾ ರಾಜ್ಯಗಳನ್ನು ಕಾಣಬಹುದು.

ಈ ನಿಟ್ಟಿನಲ್ಲಿ ಬಹುಭಾಷಾ ರಾಜ್ಯಗಳು ಎಂಬುದರ ಅರ್ಥವನ್ನು ನಾವು ಹುಡುಕುವುದಾದರೆ ಸದರಿ ರಾಜ್ಯಗಳು (ಹಳೆಯ ಟರ್ಕಿ ಮತ್ತು ಆಸ್ಟ್ರಿಯಾ ರಾಜ್ಯಗಳು) ಬಹುಭಾಷೆಯ ತಮ್ಮ ಕಾರಣಕ್ಕಾಗಿಯೇ ಛಿದ್ರಗೊಂಡು ನಾಶವಾದವು. ಭಾರತ ಕೂಡ ಹೀಗೆ ಮಿಶ್ರ ಭಾಷೆಗಳ ರಾಜ್ಯಗಳ ಸಮುದಾಯವಾಗಿಯೇ ಮುಂದುವರಿದರೆ ಅದೂ ಕೂಡ (ಆಸ್ಟ್ರಿಯಾ ಮತ್ತು ಟರ್ಕಿ ದೇಶಗಳು ಅನುಭವಿಸಿದ) ಅಂತಹ ದುರಂತ ಪರಿಸ್ಥಿತಿ ತಪ್ಪಿಸಿಕೊಳ್ಳುವುದು ಅಸಾಧ್ಯ’’ ಎಂದು ಬಾಬಾಸಾಹೇಬರು ಸ್ಪಷ್ಟ ಪಡಿಸುತ್ತಾರೆ. ಅವರು ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್, ಇಟಲಿ ಸಂವಿಧಾನ ಗಳ ಉದಾಹರಣೆ ಕೊಡುತ್ತಾರೆ ಹಾಗೆಯೇ ಬಹುಭಾಷೆಗಳ ರಾಜ್ಯವಾಗಿ ಆಸ್ಟ್ರಿಯಾ ಮತ್ತು ಟರ್ಕಿ ನಾಶವಾದದ್ದನ್ನು ಕೂಡ ಉಲ್ಲೇಖಿಸುತ್ತಾರೆ.

ಹಾಗಿದ್ದರೆ ಬಹು ಭಾಷೆಗಳ ರಾಜ್ಯ ಏಕೆ ಅಸ್ಥಿರ ಮತ್ತು ಏಕ ಭಾಷೆಯ ರಾಜ್ಯ ಏಕೆ ಸ್ಥಿರ? ಈ ಪ್ರಶ್ನೆಗೆ ಅಂಬೇಡ್ಕರರು ನೀಡುವ ಉತ್ತರ, ‘‘ರಾಜ್ಯ ಎಂಬುದು ನಾವು ಮತ್ತು ನಮ್ಮವರು ಎಂಬ ಸಹ ಭಾವನೆಯ ಆಧಾರದ ಮೇಲೆ ಕಟ್ಟಲ್ಪಟ್ಟಿದೆ ಎಂದು.’’ ಹಾಗಿದ್ದರೆ ನಾವು ಮತ್ತು ನಮ್ಮವರು, ಈ ಭಾವನೆ ಹಾಗೆಂದರೇನು? ಹೀಗೆ ಪ್ರಶ್ನಿಸುತ್ತಾ ಅಂಬೇಡ್ಕರರ ಮಾತನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ‘‘ಅದೊಂದು ರೀತಿ ನಾವೆಲ್ಲ ಒಂದೇ ಎಂಬ ಸಾಂಸ್ಥಿಕ ಭಾವನೆಯನ್ನು ಅನುಭವಿಸುವುದು ಮತ್ತು ಅಂತಹ ಅನುಭವ ಅಥವಾ ಭಾವ ಅವರಲ್ಲಿ ತಾವು ಪರಸ್ಪರ ಬಂಧುಗಳು ಎಂಬ ಭಾವವನ್ನು ಸೃಜಿಸುತ್ತದೆ.

ಈ ನಿಟ್ಟಿನಲ್ಲಿ ಈ ಭಾವ ಇದೊಂದು ರೀತಿ ಎರಡು ಅಲಗಿನ ಕತ್ತಿಯ ಮಾದರಿಯದು. ಯಾಕೆಂದರೆ ಒಂದೆಡೆ ಇದು ತನ್ನ ಬಂಧು ಬಳಗದವರಲ್ಲಿ ಒಂದು ರೀತಿಯ ತನ್ನವರು ಎಂಬ ಭಾವ ಸೃಜಿಸುತ್ತದೆ ಮತ್ತೊಂದೆಡೆ ತನ್ನ ಬಂಧು ಬಳಗದವರಲ್ಲದವರೆಡೆ ತನ್ನವರಲ್ಲ ಎಂಬ ಭಾವ ಸೃಜಿಸುತ್ತದೆ. ಈ ಕಾರಣಕ್ಕಾಗಿ ಇದೊಂದು ರೀತಿ ನಾವೆಲ್ಲ ಒಂದೇ ಎಂಬ ಭಾವ. ಈ ದಿಸೆಯಲ್ಲಿ ಇಂತಹ ಭಾವ ಹಾಗೆ ಪರಸ್ಪರ ಪ್ರಬಲ ಭಾವನೆಯುಳ್ಳವರನ್ನು ಅದು ಸಾಮಾಜಿಕ ತಾರತಮ್ಯ ಮತ್ತು ಆರ್ಥಿಕ ಸಂಕಷ್ಟಗಳ ಹೊರತಾಗಿಯೂ ಪರಸ್ಪರ ಕಟ್ಟುತ್ತದೆ ಮತ್ತು ತಮ್ಮವರಲ್ಲದವರನ್ನು ಅದು ದೂರ ತಳ್ಳುತ್ತದೆ. ಒಟ್ಟಾರೆ ಅದು ಬೇರೆ ಯಾವುದೇ ಗುಂಪುಗಳಿಗೆ ಸೇರದೆ ಪರಸ್ಪರ ಬೆರೆಯಲು ಹಾತೊರೆಯುವುದಾಗಿದೆ.

ಅಂಬೇಡ್ಕರರು ಭಾಷಾವಾರು ರಾಜ್ಯಗಳು ಮತ್ತು ಅಂತಹ ರಾಜ್ಯಗಳಲ್ಲಿ ಒಂದೇ ಭಾಷೆಯವರು ಒಂದೇ ಎಂಬ ಭಾವದಲ್ಲಿ ಬೆರೆಯುವುದನ್ನು ತಮ್ಮ ಉತ್ಕೃಷ್ಟ ಬರವಣಿಗೆಯಲ್ಲಿ ಉಪಮೆಗಳಲ್ಲಿ ಹಿಡಿದಿರುತ್ತಾರೆ. ಹಾಗಿದ್ದರೆ ನಾವು ನಮ್ಮವರು ಎಂಬ ಈ ಭಾವ ತಪ್ಪಲ್ಲವೇ? ಯಾಕೆಂದರೆ ಅಂಬೇಡ್ಕರರ ಈ ಮಾತಿನಂತೆ ನಾವು ಕನ್ನಡಿಗರು, ಅವರು ತಮಿಳಿನವರು ಎಂದು ನಾವು ಈಗಲೂ ಹೇಳುತ್ತೇವಲ್ಲ ಅದು ತಪ್ಪುಎಂಬುದಲ್ಲವೆ ಎನ್ನುವುದಾದರೆ ಇದಕ್ಕೆ ಬಾಬಾಸಾಹೇಬರು ಹೇಳುವುದು ‘‘ನಾವು ನಮ್ಮವರು ಎಂಬ ಈ ಭಾವದ ಅಸ್ತಿತ್ವವೇ ಸ್ಥಿರ ಮತ್ತು ಪ್ರಜಾಪ್ರಭುತ್ವ ಮಾದರಿಯ ರಾಜ್ಯದ ಪ್ರಮುಖ ಲಕ್ಷಣ’’ ಎಂದು. (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.1, ಪು.143 ಮತ್ತು 144) ಪ್ರಜಾಪ್ರಭುತ್ವದ ಪ್ರಬಲ ಪ್ರತಿಪಾದಕರಾದ ಬಾಬಾ ಸಾಹೇಬರು ಹೇಳುವುದು ಅಥವಾ ಏಕಭಾಷೆಯ ರಾಜ್ಯಗಳ ಅಸ್ತಿತ್ವಕ್ಕೆ ಅವರು ನೀಡುವ ಎರಡು ಕಾರಣಗಳಲ್ಲಿ ಪ್ರಮುಖವಾದದ್ದು ಅಥವಾ ಮೊದಲನೆಯದು ಪ್ರಜಾಪ್ರಭುತ್ವ.

ಅಂದರೆ ಬಾಬಾಸಾಹೇಬರು ಹೇಳುವುದು ಘರ್ಷಣೆ ಇಲ್ಲದೆ ಪ್ರಜಾಪ್ರಭುತ್ವವಿಲ್ಲ. ಆದ್ದರಿಂದ ನಾವು ನಮ್ಮವರು ಎಂಬ ಭಾವವಿಲ್ಲದೆ ಪ್ರಜಾಪ್ರಭುತ್ವ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು. ಇನ್ನು ಎರಡನೆಯ ಕಾರಣ ಅವರು ನೀಡುವುದು ಜನಾಂಗೀಯ ಮತ್ತು ಸಾಂಸ್ಕೃತಿಕ ಸಿಕ್ಕುಗಳನ್ನು ಪರಿಹರಿಸಲು ಏಕ ಭಾಷೆ ರಾಜ್ಯ ಅಗತ್ಯ ಎಂದು. ಯಾಕೆಂದರೆ ಇದಕ್ಕೆ ಬಾಬಾಸಾಹೇಬರೇ ಉದಾಹರಣೆ ನೀಡುತ್ತಾರೆ ಅದೆಂದರೆ ಆಂಧ್ರ ಮತ್ತು ತಮಿಳಿಗರ ಕಚ್ಚಾಟ, ಆಂಧ್ರ ಮತ್ತು ಮಹಾರಾಷ್ಟ್ರಿಗರ ಕಚ್ಚಾಟ, ಗುಜರಾತ್ ಮತ್ತು ಮಹಾರಾಷ್ಟ್ರಿಗರ ಕಚ್ಚಾಟ... ಇತ್ಯಾದಿ (ಗಮನಿಸಿ, ಅಂಬೇಡ್ಕರರು ತಮಿಳಿಗರು ಮತ್ತು ಕನ್ನಡಿಗರ ಕಚ್ಚಾಟ ಪ್ರಸ್ತಾಪಿಸಿಲ್ಲ! ಯಾಕೆಂದರೆ ಆಗಿನ್ನೂ ಸಮಗ್ರ ಕರ್ನಾಟಕ ಅಸ್ತಿತ್ವಕ್ಕೆ ಬಂದಿರಲಿಲ್ಲವಲ್ಲ!)

ಒಟ್ಟಾರೆ ಬಾಬಾಸಾಹೇಬ್ ಅಂಬೇಡ್ಕರ್‌ರವರು ಒಂದೇ ಭಾಷೆ - ಒಂದೇ ರಾಜ್ಯ ಹಿನ್ನೆಲೆಯಲ್ಲಿ ಪ್ರತ್ಯೇಕ ಭಾಷಾವಾರು ರಾಜ್ಯಗಳ ರಚನೆಯನ್ನು ಪ್ರತಿಪಾದಿಸಿದ್ದಾರೆ. ಅಂದಹಾಗೆ ಅಂಬೇಡ್ಕರರು ಅಂದು ಪ್ರಸ್ತಾಪಿಸಿದ ಕರ್ನಾಟಕ ರಾಜ್ಯದಲ್ಲಿ ಅಂದು 1.90 ಕೋಟಿ ಜನರಿದ್ದರು (1951ರ ಗಣತಿ) ಮತ್ತು ಕರ್ನಾಟಕದ ಪ್ರಸ್ತಾಪಿತ ವಿಸ್ತೀರ್ಣ 72,730 ಚ.ಮೈಲುಗಳು ಇತ್ತು. ಅದರ ಆಧಾರದಲ್ಲಿ ಕರ್ನಾಟಕ ರಾಜ್ಯ 1956 ನವೆಂಬರ್ 1ರಂದು ಅಸ್ತಿತ್ವಕ್ಕೆ ಬಂತು. ಈ ಹಿನ್ನೆಲೆಯಲ್ಲಿ ನವೆಂಬರ್ ಮಾಸದ ಪ್ರತೀ ವರ್ಷದ ಸಂದರ್ಭ ದಲ್ಲಿ ಕನ್ನಡಿಗರು ಬಾಬಾಸಾಹೇಬರನ್ನು ಸ್ಮರಿಸಿಕೊಳ್ಳಬೇಕು. ಭಾಷಾ ಆಧಾರದಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಉದಯಕ್ಕೆ ಭಾಷಾವಾರು ರಾಜ್ಯ ರಚನೆಯ ಉದ್ದೇಶದ ಅವರ ಚಿಂತನೆಗಳು ಕಾರಣ ಎಂಬುದನ್ನು ಅರಿಯಬೇಕು.

Writer - ರಘೋತ್ತಮ ಹೊ.ಬ., ಮೈಸೂರು

contributor

Editor - ರಘೋತ್ತಮ ಹೊ.ಬ., ಮೈಸೂರು

contributor

Similar News