ಎಲ್ಲ 125 ಕೋಟಿ ಭಾರತೀಯರಿಗೆ ಉದ್ಯೋಗ ಕೊಡಲು ಸಾಧ್ಯವೇ? : ಅಮಿತ್ ಶಾ

Update: 2017-11-15 05:57 GMT

ಹೊಸದಿಲ್ಲಿ, ನ.15:‘‘ನೋಡಿ, ಎಲ್ಲ 125 ಕೋಟಿ ಭಾರತೀಯರಿಗೆ ಉದ್ಯೋಗ ಕೊಡಲು ಸಾಧ್ಯವಿಲ್ಲ. ನಿರುದ್ಯೋಗಕ್ಕೆ ಸ್ವ-ಉದ್ಯೋಗವೇ ಪರಿಹಾರ. ಕೇಂದ್ರದ ಮುದ್ರ ಯೋಜನೆಯ ಮೂಲಕ 9 ಕೋಟಿ ಜನರು ಲಾಭ ಪಡೆದಿದ್ದಾರೆ. ನೌಕರಿ ಹಾಗೂ ಉದ್ಯೋಗ ಎರಡು ಪ್ರತ್ಯೇಕ ವಿಷಯ’’ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಗುಜರಾತ್‌ನ ಯುವ ಜನತೆಗೆ ಸರಿಯಾದ ಉದ್ಯೋಗ ನೀಡಲಾಗಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ. ರಾಹುಲ್ ವಾಗ್ದಾಳಿಗೆ ಉತ್ತರವಾಗಿ ಶಾ ಉದ್ದಟನದ ಉತ್ತರ ನೀಡಿದ್ದಾರೆ.

ನೋಟು ನಿಷೇಧ ಹಾಗೂ ಸರಕುಗಳು ಹಾಗೂ ಸೇವಾ ತೆರಿಗೆ(ಜಿಎಸ್‌ಟಿ) ಬೆನ್ನುಬೆನ್ನಿಗೆ ಜಾರಿಗೆ ಬಂದ ಕಾರಣ ಜನರು ಸಮಸ್ಯೆ ಎದುರಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಗಳು ಜನರಿಗೆ ಉಪಯೋಗವಾಗಲಿದೆ ಎಂದರು.

ಗುಜರಾತ್‌ನಲ್ಲಿ ಕಾಂಗ್ರೆಸ್ ಜಾತಿ-ಜಾತಿಗಳ ಮಧ್ಯೆ ಒಡಕು ತರುವ ಕೆಲಸ ಮಾಡುತ್ತಿರುವುದು ದುರದೃಷ್ಟಕರ. ರಾಹುಲ್ ಗಾಂಧಿ ತನ್ನ ತಂದೆಯ ಹಾದಿ ಹಿಡಿದಿದ್ದಾರೆ. ಕ್ಷತ್ರೀಯ, ಹರಿಜನ, ಆದಿವಾಸಿ, ಮುಸ್ಲಿಂ ಜಾತಿಯನ್ನು ನಮ್ಮ ಪಕ್ಷದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಎಂದು ಶಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News