ಲೋಹಿಯಾ ಚಿಂತನೆ-ನಿರಾಶೆಯ ಕಾಲದ ಕರ್ತವ್ಯಗಳು

Update: 2017-11-15 18:29 GMT

ಲೋಹಿಯಾ ವಾದಿಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿರಬಹುದು, ಆದರೆ ಲೋಹಿಯಾ ಚಿಂತನೆಗಳು ಮಾತ್ರ ಈ ಸಂದರ್ಭಕ್ಕೆ ಹೆಚ್ಚು ಹೆಚ್ಚು ಪ್ರಸ್ತುತವಾಗುತ್ತಿದೆ. ಬಂಡವಾಳ ಶಾಹಿಗೆ ಪರ್ಯಾಯವಾಗಿ ಕಮ್ಯುನಿಸಂ ಎನ್ನುವ ಸಂದರ್ಭದಲ್ಲಿ ಕ್ರೌರ್ಯ ಮತ್ತು ದಬ್ಬಾಳಿಕೆಯನ್ನು ಅಲ್ಲಗಳೆದು ರೂಪಿತವಾದುದು ಸಮಾಜವಾದ. ಲಂಕೇಶರು ಹೇಳುವಂತೆ ‘‘ಕಮ್ಯುನಿಸಂನ ಸಮಾನತೆಯ ಅಂಶಗಳನ್ನಿಟ್ಟುಕೊಂಡು, ಬಂಡವಾಳ ಶಾಹಿ ವ್ಯವಸ್ಥೆಯಲ್ಲಿದ್ದ ಪ್ರಜಾಪ್ರಭುತ್ವದ ಸ್ವಾತಂತ್ರದ ವೌಲ್ಯಗಳನ್ನು ಬಳಸಿಕೊಂಡು ಸಮಾಜವಾದವನ್ನು ಸೃಷ್ಟಿಸಲಾಯಿತು. ಕಾರ್ಲ್‌ಮಾರ್ಕ್ಸ್‌ನ ಮೂಲ ಸಿದ್ಧಾಂತದ ಮಾನವೀಯತೆ, ವಿಕೇಂದ್ರೀಕರಣ, ಸ್ವಾತಂತ್ರವೆಲ್ಲ ರಶ್ಯಾದ ಆಡಳಿತ ರೂಪದಲ್ಲಿ ಮಾಯವಾದಾಗ, ಸಮಾಜವಾದದ ಆವಶ್ಯಕತೆ ಉಂಟಾಯಿತು...’’ ಈ ಮಾತು ಇಂದಿಗೂ ಪ್ರಸ್ತುತವೇ ಆಗಿದೆ.

  ಪಲ್ಲವ ಪ್ರಕಾಶನ ಹೊರತಂದಿರುವ ಲೋಹಿಯಾ ಚಿಂತನ ಮಾಲಿಕೆಯ ಭಾಗವಾಗಿ ‘ನಿರಾಶೆಯ ಕಾಲದ ಕರ್ತವ್ಯಗಳು’ ಲೋಹಿಯಾ ಚಿಂತನೆಯನ್ನು ಹಸನ್ ನಯೀಂ ಸುರಕೋಡ ಅವರು ಕನ್ನಡಕ್ಕೆ ತಂದಿದ್ದಾರೆ. ಖ್ಯಾತ ಲೇಖಕ ನಟರಾಜ್ ಹುಳಿಯಾರ್ ಈ ಮಾಲಿಕೆಯ ಸಂಪಾದಕರು. ಈ ಮಾಲಿಕೆಯ ಪುಸ್ತಕಗಳಲ್ಲಿ ಲೋಹಿಯಾ ಅವರ ಬದುಕು ಹಾಗೂ ಚಿಂತನೆಗಳ ಸಂಕ್ಷಿಪ್ತ ಪರಿಚಯ ಹಾಗೂ ಲೋಹಿಯಾ ಅವರ ಬರಹಗಳಿವೆ. ರಾಮಮನೋಹರ ಲೋಹಿಯಾ ನಡೆದು ಬಂದ ದಾರಿ ಮೊದಲ ಅಧ್ಯಾಯವಾದರೆ, ಲೋಹಿಯಾ ಅವರು ಬರೆದ ಲೇಖನ ‘ನಿರಾಶೆಯ ಕಾಲದ ಕರ್ತವ್ಯಗಳು’ ಎರಡನೆಯ ಅಧ್ಯಾಯವಾಗಿದೆ. ವರ್ತಮಾನದಲ್ಲಿ ಪ್ರಗತಿಪರರ ನಡುವಿನ ಹತಾಶೆ, ನಿರಾಶೆಗಳಿಗೆ ಉತ್ತರವೆಂಬಂತೆ ಈ ಲೇಖನವಿದೆ. ‘ಇಂದಿನ ದಿನಗಳಲ್ಲಿ ಒಳ್ಳೆಯವರಿದ್ದಾರೆ. ಆದರೆ ಅವರು ಆಲಸಿಗಳಾಗಿದ್ದಾರೆ’ ಎನ್ನುವ ಲೋಹಿಯಾ ಈ ಜನರ ಕುರಿತಂತೆ ಸಿನಿಕರಾಗುವುದಿಲ್ಲ. ಬದಲಿಗೆ ಈ ಒಳ್ಳೆಯ ಆಲಸಿ ಜನರೇ ನಮ್ಮ ಆಶಾವಾದ ಎಂದು ಹೇಳುತ್ತಾರೆ. ಹಾಗೆಯೇ ವಿದ್ಯಾರ್ಥಿ ಸಂಘಟನೆ ಹೇಗೆ ಒಂದು ಆಂದೋಲನಕ್ಕೆ ಹಿನ್ನೆಲೆಯಾಗಿ ನಿಲ್ಲಬಹುದು ಎನ್ನುವುದರ ಬಗ್ಗೆಯೂ ಮಾತನಾಡುತ್ತಾರೆ. ಹಲವು ದಶಕಗಳ ಹಿಂದೆ ಬರೆದಿರುವ ಅವರ ನಿರಾಶೆ, ಖಿನ್ನತೆ ಮತ್ತು ಅದರೊಳಗಿಂದಲೇ ಹೊಮ್ಮಿ ಬರುವ ಆಶಾವಾದ ಇಂದಿನ ಅಗತ್ಯವಾಗಿದೆ. ಎಲ್ಲೆಲ್ಲೋ ಮೋದಿಯ ಭಕ್ತರ ಆರ್ಭಟ, ಚೀರಾಟ ಜೋರಾಗಿರುವಾಗ, ಸಜ್ಜನರ ವೌನವನ್ನೇ ಬಳಸಿಕೊಂಡು ಮುಂದೆ ಹೋಗಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಎಂದೂ ಭರವಸೆ ಕಳೆದುಕೊಳ್ಳಬಾರದು ಎನ್ನುವ ಎಚ್ಚರಿಕೆಯನ್ನು ಈ ಕೃತಿ ನಮಗೆ ನೀಡುತ್ತದೆ. 70 ಪುಟಗಳ ಈ ಕೃತಿಯ ಮುಖಬೆಲೆ 40 ರೂಪಾಯಿ. ಆಸಕ್ತರು 94803 53507 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News