ಈ ಬಾರಿಯ ಅಧಿವೇಶನವಾದರೂ ಅರ್ಥ ಪೂರ್ಣವಾಗಲಿ

Update: 2017-11-15 18:33 GMT

ಮಾನ್ಯರೆ,

ಗಡಿ ಜಿಲ್ಲೆ ಕುಂದಾನಗರಿ ಬೆಳಗಾವಿಯಲ್ಲಿ 10 ದಿನಗಳ ಕಾಲ ನಡೆಯುತ್ತಿರುವ ಚಳಿಗಾಲದ ಅಧಿವೇಶನವು ಕೆಲಸಕ್ಕೆ ಬಾರದ ಅನಗತ್ಯ ಚರ್ಚೆಗಳಿಗೆ ಬಲಿಯಾಗುವ ಸಾಧ್ಯತೆಗಳೇ ಹೆಚ್ಚಾಗಿ ಕಂಡು ಬರುತ್ತಿವೆ. ಅಲ್ಲದೆ ಹೆಚ್ಚಿನ ಶಾಸಕರು, ಸಚಿವರು ಅಧಿವೇಶನದಲ್ಲಿ ಭಾಗವಹಿಸುವಂತೆ ಕಾಣುತ್ತಿಲ್ಲ. ಮೊದಲೆರಡು ದಿನದ ಅಧಿವೇಶನದಲ್ಲಿ ಹಾಜರಿದ್ದ ಜನಪ್ರತಿನಿಧಿಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.
ಕಳೆದ ಐದು ವರ್ಷಗಳಲ್ಲಿ ನಡೆದಂತಹ ಹಲವು ಅಧಿವೇಶನಗಳಲ್ಲಿ ವ್ಯರ್ಥ ಚರ್ಚೆಗಳಲ್ಲೇ ಕಾಲ ಹರಣ ಮಾಡಿರುವ ಜನಪ್ರತಿನಿಧಿಗಳು ಇಲ್ಲಿಯವರೆಗೂ, ರಾಜ್ಯದ ರೈತರು, ಬಡವರು ಎದುರಿಸುತ್ತಿರುವ ಹತ್ತು ಹಲವು ಸಂಕಷ್ಟಗಳು, ಮಹಿಳೆಯರ ಮತ್ತು ದಲಿತರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ಶೋಷಣೆ, ಅಸ್ಪೃಶ್ಯತೆ, ಸಮಾಜದಲ್ಲಿ ಸಂಪೂರ್ಣವಾಗಿ ಹಾಳಾಗಿರುವ ಕಾನೂನು ವ್ಯವಸ್ಥೆ, ಬಿಡದೆ ಸುರಿದ ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಗೊಳಗಾದ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಸೂಕ್ತ ಪರಿಹಾರ, ಬಡ ಅರ್ಹ ಫಲಾನುಭವಿಗಳಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳು, ಅವನತಿಯತ್ತ ಸಾಗುತ್ತಿರುವ ಸರಕಾರಿ ಶಾಲೆಗಳು, ಗ್ರಾಮಿಣ ಭಾಗಗಳಿಗೆ ಸರಿಯಾದ ಸಾರಿಗೆ ಕಲ್ಪಿಸುವುದರ ಬಗ್ಗೆ, ಸರಕಾರಿ ಉನ್ನತ ಹುದ್ದೆಯ ಅಧಿಕಾರಿಗಳ ನಿಗೂಢ ಸಾವಿನ ತನಿಖೆಯ ವೈಫಲ್ಯ, ಹೀಗೆ ನೂರಾರು ಸಮಸ್ಯೆಗಳು ರಾಜ್ಯದಲ್ಲಿವೆ. ಇವುಗಳ ಕುರಿತು ಸರಿಯಾದ ರೀತಿಯಲ್ಲಿ ಸರಕಾರದ ಜೊತೆಗೆ ಚರ್ಚೆ ಮಾಡಿ ಜನಸಾಮಾನ್ಯರಿಗೆ ನ್ಯಾಯ ಒದಗಿಸಲು ಪ್ರತಿಪಕ್ಷಗಳು ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ಅದನ್ನು ಬಿಟ್ಟು ದಿನವಿಡೀ ಅನವಶ್ಯಕ ವಿಷಯಗಳ ಬಗ್ಗೆ ಸದನದಲ್ಲಿ ಗದ್ದಲ ಸೃಷ್ಟಿಸಿ, ಸಭಾತ್ಯಾಗ ಮಾಡಿ ಆ ದಿನದ ಅಮೂಲ್ಯ ಸಮಯವನ್ನು ಹಾಳು ಮಾಡಲಾಗುತ್ತಿದೆ.
ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳು ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಕುರಿತು ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಸರಕಾರದ ಗಮನ ಸೆಳೆದು ಜನರಿಗೆ ಸೂಕ್ತ ಪರಿಹಾರ ಕಲ್ಪಿಸಿ ಕೊಡಬೇಕು. ಏಕೆಂದರೆ ಈ ಅಧಿವೇಶನವು ಈ ಸರಕಾರದ ಆಡಳಿತದ ಕೊನೆಯ ಅಧಿವೇಶನವಾಗಿದೆ. ಹಲವಾರು ಕೋಟಿ ರೂ. ವೆಚ್ಚದಲ್ಲಿ ನಡೆಸಲಾಗುತ್ತಿರುವ ಈ ಅಧಿವೇಶನವಾದರೂ ಅರ್ಥ ಪೂರ್ಣವಾಗಲಿ. ಇಲ್ಲದಿದ್ದರೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನಿಮಗೆ ಜನರು ತಕ್ಕ ಪಾಠ ಕಲಿಸುತ್ತಾರೆ.

Similar News