‘ಪರಿಶಿಷ್ಟರ ಆರ್ಥಿಕ ಸಬಲೀಕರಣಕ್ಕೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಪತ್ಯೇಕ ಸಹಕಾರ ಸಂಘ ಸ್ಥಾಪಿಸಿ’

Update: 2017-11-17 15:11 GMT

ಬೆಳಗಾವಿ(ಸುವರ್ಣ ವಿಧಾನಸೌಧ) ನ. 17: ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರ ಆರ್ಥಿಕ ಸಬಲೀಕರಣ ದೃಷ್ಟಿಯಿಂದ ಎಲ್ಲ ಗ್ರಾ.ಪಂ.ಮಟ್ಟದಲ್ಲಿ ಪರಿಶಿಷ್ಟರಿಗಾಗಿ ಪ್ರತ್ಯೇಕ ಸಹಕಾರ ಸಂಘಗಳನ್ನು ಆರಂಭಿಸಬೇಕು ಎಂದು ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಮಹತ್ವದ ಶಿಫಾರಸ್ಸು ಮಾಡಿದೆ.

ಶುಕ್ರವಾರ ವಿಧಾನಸಭೆಯಲ್ಲಿ ಸಮಿತಿಯ ಆಧ್ಯಕ್ಷರೂ ಆಗಿರುವ ಶಾಸಕ ಶಿವಮೂರ್ತಿ ವರದಿಯನ್ನು ಮಂಡಿಸಿದರು. ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನ ಆ ವರ್ಗದ ಅಭಿವೃದ್ಧಿಗಲ್ಲದೆ ಯಾವುದೇ ಕಾರಣಕ್ಕೂ ಅನ್ಯಕಾರ್ಯಕ್ಕೆ ಬಳಕೆ ಮಾಡಬಾರದು. ಸಹಕಾರ ಸಂಘಗಳ ಶೇರು ಹಣವನ್ನು ರಾಜ್ಯ ಸರಕಾರವೇ ಭರಿಸಬೇಕು ಎಂದು ಹೇಳಿದೆ.

ವೃತ್ತಿಪರ ಕೋರ್ಸ್ ಪೂರ್ಣಗೊಳಿಸಿರುವ ಎಸ್ಸಿ-ಎಸ್ಟಿ ನಿರುದ್ಯೋಗಿ ಯುವಕ-ಯುವತಿಯರಿಗೆ ಪ್ರೊತ್ಸಾಹ ನೀಡಲು ಕೆಐಎಡಿಬಿಯಿಂದ ಸಣ್ಣ ಕೈಗಾರಿಕೆ ಆರಂಭಿಸಲು ನೆರವು ನೀಡಬೇಕು. ಜತೆಗೆ ಸ್ವಯಂ ಉದ್ಯೋಗ ಕಲ್ಪಿಸಲು ಸೂಕ್ತ ಯೋಜನೆಯನ್ನು ರೂಪಿಸಬೇಕು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

ರಾಜ್ಯದಲ್ಲಿ ಲಂಬಾಣಿ ತಾಂಡ, ಗೊಲ್ಲರಹಟ್ಟಿ, ಆದಿವಾಸಿಗಳ ಹಾಡಿ ಹಾಗೂ ಭೋವಿ ಕಾಲನಿಗಳಲ್ಲಿ ಸಂಚಾರಿ ಆರೋಗ್ಯ ಘಟಕಗಳನ್ನು ಆರಂಭಿಸಬೇಕು. ವೈದ್ಯಕೀಯ ವ್ಯಾಸಂಗ ಮಾಡುವ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಮತ್ತು ವಿದ್ಯಾರ್ಥಿ ವೇತನ ನೀಡಲು ವಿಧಿಸಿರುವ ವಾರ್ಷಿಕ 2.5 ಲಕ್ಷ ರೂ.ಆದಾಯ ಮಿತಿಯನ್ನು ರದ್ದುಗೊಳಿಸಬೇಕು.

ಖಾಸಗಿ ವಲಯ ಹಾಗೂ ಗುತ್ತಿಗೆ ಆಧಾರದ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸಬೇಕು. ಕಾಲೇಜುಗಳಿಂದ ಹೊರ ಗುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ನೆರವಿಗೆ ಹೊಸ ಯೋಜನೆ ರೂಪಿಸಬೇಕು. ಅಂಬೇಡ್ಕರ್ ಭವನ ನಿರ್ಮಾಣಕ್ಕೆ 25 ಲಕ್ಷ ರೂ.ಅನುದಾನ ನಿಗದಿಪಡಿಸಬೇಕು ಎಂಬುದು ಸೇರಿದಂತೆ ಹಲವು ಮಹತ್ವದ ಶಿಫಾರಸ್ಸುಗಳನ್ನು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News