ಸಾಲಬಾಧೆ ತಾಳಲಾರದೆ ಕೆರೆಗೆ ಹಾರಿ ಆತ್ಮಹತ್ಯೆಗೈದ ವೃದ್ಧ

Update: 2017-11-17 15:28 GMT

ಮಂಡ್ಯ, ನ.17: ಸಾಲ ಬಾಧೆ ತಾಳಲಾರದೆ ರೈತನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ರಕ್ಷಣೆಗೆ ಕೆರೆಗೆ ಇಳಿದ ಮೊಮ್ಮಗನೂ ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ ಕೆ.ಆರ್.ಪೇಟೆ ತಾಲೂಕಿನ  ನಾಗರಘಟ್ಟ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಗ್ರಾಮದ ಬೋಜಯ್ಯ ಅವರ ಮಗ ಸುಬ್ಬಯ್ಯ(65) ಮತ್ತು ಸುಬ್ಬಯ್ಯ ಅವರ ಮೊಮ್ಮಗ,  ಗೋವಿಂದರಾಜೇಗೌಡ ಅವರ ಮಗ ರವಿಕುಮಾರ್(18) ಮೃತಪಟ್ಟವರು.

ಸುಬ್ಬಯ್ಯ ಮೂರು ಎಕರೆ ಜಮೀನಿನಲ್ಲಿ ಬದನೆ ಸೇರಿದಂತೆ ಇತರೆ ತರಕಾರಿ ಬೆಳೆಗಳನ್ನು ಬೆಳೆಯಲು ಅಘಲಯ ಗ್ರಾಮದ ಭಾರತೀಯ ಸ್ಟೇಟ್ ಬ್ಯಾಂಕ್‍ನಲ್ಲಿ 2 ಲಕ್ಷ ಬೆಳೆ ಸಾಲ, ಜತೆಗೆ ಒಂದು ಲಕ್ಷ ರೂ .ಕೈಸಾಲ ಮಾಡಿಕೊಂಡಿದ್ದರು.

ಮುಂಗಾರು ಮಳೆ ಕೈಕೊಟ್ಟ ಹಿನ್ನಲೆ ತರಕಾರಿ ಬೆಳೆಗಳು ಒಣಗಿ ಹೋಗಿ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಬೇಸತ್ತು ಜಮೀನಿಗೆ ಹೋಗುವ ಮಾರ್ಗಮಧ್ಯೆದ ಕರೆಗೆ ಹಾರಿದ್ದಾರೆ ಎನ್ನಲಾಗಿದೆ.

ತಾತನ ಹಿಂದೆ ಜಮೀನಿಗೆ ತೆರಳುತ್ತಿದ್ದ ರವಿಕುಮಾರ್ ತಾತ ಕರೆಗೆ ಹಾರಿದ್ದನ್ನು ಗಮನಿಸಿ ರಕ್ಷಿಸಲು ತಾನೂ ಹಾರಿದ್ದಾನೆ. ಇದನ್ನು ನೋಡಿದ ದನಗಾಹಿ ಮಹಿಳೆ ಕೂಗಿಕೊಂಡಾಗ ಸಾರ್ವಜನಿಕರು ದಾವಿಸಿ ನೋಡಿದಾಗ ತಾತ ಮೊಮ್ಮಗ ಇಬ್ಬರೂ ಮೃತಪಟ್ಟಿದ್ದರು.

ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಸಂಬಂಧ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News