ಮುನ್ನುಡಿ ಎಂಬ ಕನ್ನಡಿ

Update: 2017-11-17 18:44 GMT

 ಮುನ್ನುಡಿ ಎನ್ನುವುದು ಒಂದು ಕೃತಿಗೆ ಬೇರೆ ಬೇರೆ ನೆಲೆಗಳಲ್ಲಿ ನೆರವಾಗುತ್ತದೆ. ಒಬ್ಬ ಹಿರಿಯ ಲೇಖಕರ ಸಂಕೀರ್ಣ ಕೃತಿಯಾಗಿದ್ದರೆ ಅದನ್ನು ತನ್ನದಾಗಿಸಿಕೊಳ್ಳಲು ಓದುಗರಿಗೆ ನೆರವಾಗುವ ಭಾಗವಾಗಿ ವಿಮರ್ಶಕರು ಅದಕ್ಕೆ ಮುನ್ನುಡಿ ಬರೆಯುವುದಿದೆ. ಒಂದು ಸಂಕೀರ್ಣವಾದ ಕೃತಿಯ ಒಳಹೋಗಲು ಮುನ್ನುಡಿ ಅವರಿಗೆ ಕೈಮರವಾಗುತ್ತದೆ. ಇದೇ ಸಂದರ್ಭದಲ್ಲಿ ಓದುಗನಿಗಷ್ಟೇ ಅಲ್ಲದೆ ಲೇಖಕನಿಗೂ ಕೆಲವೊಮ್ಮೆ ಅದು ನೆರವಾಗುತ್ತದೆ. ಉದಯೋನ್ಮುಖ ಲೇಖಕರ ಕೃತಿಯಾಗಿದ್ದರೆ ಅದರ ಕುರಿತಂತೆ ಹಿರಿಯ ಲೇಖಕರೊಬ್ಬರ ಮೆಚ್ಚುಗೆಯ ಮಾತುಗಳು ಮುನ್ನುಡಿ ರೂಪದಲ್ಲಿ ಬಂದರೆ, ಕಾರಣಕ್ಕಾಗಿ ಪುಸ್ತಕವನ್ನು ಬಿಡಿಸುವವರಿದ್ದಾರೆ. ಹೊಸ ಲೇಖಕನನ್ನು ಪರಿಚಯಿಸುವ ಕೆಲಸವನ್ನೂ ಮುನ್ನುಡಿ ಮಾಡುತ್ತಾ ಬರುತ್ತಿದೆ. ಕೆಲವೊಮ್ಮೆ ಮೂಲ ಲೇಖಕ ಬರೆದ ಕೃತಿಗಿಂತ ಮುನ್ನುಡಿಯು ಪ್ರತ್ಯೇಕ, ಸ್ವತಂತ್ರ ಲೇಖನವಾಗಿ ಬಿಡುವುದೂ ಇದೆ. ಬಹುಶಃ ಈ ಕಾರಣಕ್ಕೇ ಹಲವು ಲೇಖಕರು ತಮ್ಮ ಕೃತಿಗಳಿಗೆ ಮುನ್ನುಡಿಯನ್ನೇ ಬರೆಸುತ್ತಿರಲಿಲ್ಲ. ತಲೆಗಿಂತ ಮುಂಡಾಸು ದೊಡ್ಡದು ಎಂಬಂತೆ ಕೆಲವೊಮ್ಮೆ, ಕೃತಿ ಚೆನ್ನಾಗಿಲ್ಲದಿದ್ದರೂ ಅದಕ್ಕೆ ಬರೆದಿರುವ ಮುನ್ನುಡಿ ಚೆನ್ನಾಗಿದೆ ಎಂದು ಓದುಗರು ತೀರ್ಮಾನಕ್ಕೆ ಬರುವ ಅಪಾಯವಿರುತ್ತದೆ. ಕೆಲವೊಮ್ಮೆ ಮುನ್ನುಡಿಳನ್ನು ನಂಬಿ ಮೋಸ ಹೋಗುವ ಓದುಗರೂ ಇರುತ್ತಾರೆ. ಅದೇನೇ ಇರಲಿ, ಮುನ್ನುಡಿಗಳು ಈ ನಾಡಿನಲ್ಲಿ ಅಪಾರ ಸಂಖ್ಯೆಯ ಲೇಖಕರನ್ನು ಬೆಳೆಸಿದೆ. ಆದುದರಿಂದಲೇ ಹಲವು ಲೇಖಕರು ತಾವು ಬರೆದಿರುವ ಮುನ್ನುಡಿಗಳನ್ನೇ ಕೃತಿಯ ರೂಪದಲ್ಲಿ ತಂದಿದ್ದಾರೆ. ಯು. ಆರ್. ಅನಂತಮೂರ್ತಿಯವರಿಂದ ಹಿಡಿದು ಜಯಂತ ಕಾಯ್ಕಿಣಿಯವರೆಗೆ ಈ ಪ್ರಯೋಗ ಮುಂದುವರಿದಿದೆ. ಇಲ್ಲಿ ಲೇಖಕ ಡಾ. ವಸಂತಕುಮಾರ್ ಪೆರ್ಲ ಅವರು ತಮ್ಮ ಕವಿ ಮನಸ್ಸಿಗೆ ತಕ್ಕಂತೆ ‘ಏರುತ್ತೇರುತ್ತ ಶಿಖರ’ ಎಂಬ ಮುನ್ನುಡಿಗಳ ಸಂಕಲನವನ್ನು ತಂದಿದ್ದಾರೆ.
ಈ ಕೃತಿಯ ವೈಶಿಷ್ಟವೆಂದರೆ, ಇಲ್ಲಿರುವ ಎಲ್ಲ ಮುನ್ನುಡಿಗಳು ಕವನಸಂಕಲನಗಳಿಗೆ ಬರೆದವುಗಳಾಗಿವೆ. ಇನ್ನೊಂದು ಹೆಗ್ಗಳಿಕೆಯೆಂದರೆ, ಮುನ್ನುಡಿ ಬರೆಸಿಕೊಂಡಿರುವ ಎಲ್ಲ ಕವಿಗಳು ಉದಯೋನ್ಮುಖರು. ಜೊತೆಗೆ ಯುವಕವಿಗಳ ಸಂಖ್ಯೆ ಹೆಚ್ಚಿವೆ. ಆದುದರಿಂದ ಹೊಸ ತಲೆಮಾರಿನ ಕಾವ್ಯ ಪರಿಮಳವನ್ನು ಪರಿಚಯಿಸಿಕೊಡುವ ಪ್ರಯತ್ನವನ್ನು ಪೆರ್ಲ ಅವರು ಮಾಡುತ್ತಾರೆ. ಸಾಧಾರಣವಾಗಿ ಕವನಸಂಕಲನವನ್ನು ಓದುವವರ ಸಂಖ್ಯೆ ಇಳಿದಿದೆೆ. ಹಿರಿ ಕವಿಗಳಂತೂ ಕಿರಿಕವಿಗಳ ಸಂಕಲನಗಳ ಕಡೆಗೆ ಕಣ್ಣಾಯಿಸಿಯೂ ನೋಡುವುದಿಲ್ಲ. ಇಂತಹ ಸಂದರ್ಭದಲ್ಲಿ 40ಕ್ಕೂ ಅಧಿಕ ಕವನ ಸಂಕಲನಗಳ ಕುರಿತಂತೆ ಸಹೃದಯ ಅಭಿಪ್ರಾಯವನ್ನು ಪೆರ್ಲ ಅವರು ಮಂಡಿಸಿದಂತಾಗಿದೆ. ಈ ಕೃತಿಯ ಮೂಲಕ ಕೆಲವು ಮಹತ್ವದ ಹೊಸ ತಲೆಮಾರಿನ ಕವಿಗಳ ಪರಿಚಯವಾದರೆ ಕೃತಿಯ ಉದ್ದೇಶ ಸಾರ್ಥಕವಾದಂತೆ. ಬೆನ್ನುಡಿಯಲ್ಲಿ ಹೇಳುವಂತೆ, ಆಯಾ ಪುಸ್ತಕವನ್ನು ಸಮಗ್ರವಾಗಿ ರಸವಿಮರ್ಶೆಯ ಮಾದರಿಯಲ್ಲಿ ಲೇಖಕರು ಪರಿಚಯಿಸಿದ್ದಾರೆ. ಸಾಹಿತ್ಯದ ಬಗೆಗಿನ ಡಾ. ಪೆರ್ಲ ಅವರ ಆಳ ಪಾಂಡಿತ್ಯವನ್ನು ಕಾಣಬಹುದಲ್ಲದೆ, ಹೊಸ ಲೇಖಕರನ್ನು ಬೆಳೆಸುವ ಅವರ ಒಳ್ಳೆಯ ಮನಸ್ಸಿಗೂ ಇದು ಕನ್ನಡಿ ಹಿಡಿದಿದೆ. ಯುವ ಕವಿಗಳು ಅವಶ್ಯವಾಗಿ ಈ ಕೃತಿಯನ್ನು ಕೊಂಡು ಓದಬೇಕು.
ಭೂಮಿಗೀತ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 180 ರೂ. ಆಸಕ್ತರು 094483 84391 ದೂರವಾಣಿಯನ್ನು ಸಂಪರ್ಕಿಸಬಹುದು.

 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News