ನೋಟ್ ಬ್ಯಾನ್ ನಿಂದ ಕಪ್ಪು ಹಣ ನಿಯಂತ್ರಿಸಲು ಅಸಾಧ್ಯ: ಮನಮೋಹನ್ ಸಿಂಗ್

Update: 2017-11-18 14:35 GMT

 ಕೊಚ್ಚಿ, ನ. 17: ನಗದು ನಿಷೇಧ ಹಾಗೂ ಸರಕು, ಸೇವಾ ತೆರಿಗೆಯ ಆತುರದ ಅನುಷ್ಠಾನ ಆಘಾತಗಳಿಂದ ಭಾರತದ ಆರ್ಥಿಕತೆ ಚೇತರಿಸಿಕೊಳ್ಳಲು ಕನಿಷ್ಠ ವರ್ಷ ಬೇಕಾಗಬಹುದು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂದಾಜಿಸಿದ್ದಾರೆ.

 ದೇಶದಲ್ಲಿ ಕಪ್ಪು ಹಣ ನಿಯಂತ್ರಿಸುವುದು ಹೇಗೆ ಎಂಬುದಕ್ಕೆ ಸಿದ್ಧ ಉತ್ತರವಿಲ್ಲ ಎಂದು ಹೇಳಿದ ಅವರು, ಕಪ್ಪು ಹಣ ನಿಯಂತ್ರಿಸಲು ನಗದು ನಿಷೇಧಿಸಿರು ವುದು ಸಮರ್ಪಕ ವಿಧಾನವಲ್ಲ. ದೇಶದಲ್ಲಿ ಕಪ್ಪು ಹಣ ನಿಯಂತ್ರಿಸಲು ನಮ್ಮ ತೆರಿಗೆ ವ್ಯವಸ್ಥೆ, ಭೂನೋಂದಣಿ ವ್ಯವಸ್ಥೆ ಹಾಗೂ ಆಡಳಿತ ಸರಳಗೊಳಿಸು ವುದು ಉತ್ತಮ ಮಾರ್ಗ ಎಂದು ಹೇಳಿದರು.

  ಎರ್ನಾಕುಳಂನ ಸಂತ ತೆರೆಸಾ ಕಾಲೇಜಿನಲ್ಲಿ ಮ್ಯಾಕ್ರೋ ಇಕನಾಮಿಕ್ಸ್ ಡೆವಲಪ್‌ಮೆಂಟ್ ಇನ್ ಇಂಡಿಯಾ: ಪಾಲಿಸಿ ಪರ್ಸ್ಪೆಕ್ಟಿವ್ ಕುರಿತು ಮಾತನಾಡಿದ ಬಳಿಕ ಮನಮೋಹನ್ ಸಿಂಗ್ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

 ಕಪ್ಪು ಹಣ ನಿಯಂತ್ರಿಸಲು ನಗದು ನಿಷೇಧ ಯಾಕೆ ವಿಫಲವಾಯಿತು ಎಂದು ವಿವರಿಸಿದ ಸಿಂಗ್, ದೊಡ್ಡ ಮೊತ್ತದ ಕಪ್ಪು ಹಣವನ್ನು ಕರೆನ್ಸಿ ರೂಪದಲ್ಲಿ ಶೇಖರಿಸಿ ಇರಿಸಿಲ್ಲ. ನಗದು ನಿಷೇಧದಿಂದ ನಮ್ಮ ರೈತರು, ಸಣ್ಣ ವ್ಯಾಪಾರಿಗಳು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ತೀವ್ರ ತೊಂದರೆ ಅನುಭವಿಸಿದವು ಎಂದರು.

ನಗದು ನಿಷೇಧದ ಪರಿಣಾಮ 2015-16ರಲ್ಲಿ ಶೇ. 7.2 ಇದ್ದ ಆರ್ಥಿಕ ಬೆಳವಣಿಗೆಯ ಮಟ್ಟ 2017-18ರ ಮೊದಲ ಕಾಲು ವಾರ್ಷಿಕದಲ್ಲಿ ಶೇ. 5.7ಕ್ಕೆ ಇಳಿಕೆಯಾಯಿತು. ಆರ್ಥಿಕತೆ ಸಾಮಾನ್ಯ ಬೆಳವಣಿಗೆಯ ಮಟ್ಟಕ್ಕೆ ಬರಲಿದೆ ಎಂದು ಜನರು ನಂಬಿದ್ದಾರೆ. ಆದರೆ, ನನ್ನ ಪ್ರಕಾರ ಆರ್ಥಿಕತೆ ಮುಂದಿನ ಒಂದು ವರ್ಷ ಮಂದಗತಿಯಲ್ಲಿ ಸಾಗಲಿದೆ ಎಂದು ಸಿಂಗ್ ಹೇಳಿದರು.

ಅಂತಾರಾಷ್ಟ್ರೀಯ ರೇಟಿಂಗ್ ಸಂಸ್ಥೆ ಮೂಡಿಯಲ್ಲಿ ದೇಶದ ರೇಟಿಂಗ್‌ನಲ್ಲಿ ಏರಿಕೆಯಾಗಿರುವುದನ್ನು ಸ್ವಾಗತಿಸಿರುವ ಮನಮೋನಹ್ ಸಿಂಗ್, ನಮ್ಮ ಆರ್ಥಿಕತೆ ಸಮಸ್ಯೆಯಿಂದ ಹೊರಬಂದಿದೆ ಎಂಬ ತಪ್ಪು ನಂಬಿಕೆಯಲ್ಲಿ ನಾವು ಬೀಳಬಾರದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News