ಗೋ.ಮಧುಸೂಧನ್ ಹೇಳಿಕೆ ಖಂಡಿಸಿ ನ.22ಕ್ಕೆ ಮೈಸೂರು ಬಂದ್

Update: 2017-11-18 15:01 GMT

ಮೈಸೂರು, ನ.18: ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ವಕ್ತಾರ ಗೋ.ಮಧುಸೂಧನ್ ಹೇಳಿಕೆ ಖಂಡಿಸಿ ನ.22 ರಂದು ಮೈಸೂರು ಬಂದ್‍ಗೆ ದಲಿತ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ.

ಈ ಬಗ್ಗೆ ಶನಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜ್ಞಾನ ಪ್ರಕಾಶ ಸ್ವಾಮೀಜಿ, ಖಾಸಗಿ ವಾಹಿನಿಯೊಂದರಲ್ಲಿ ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಮಾಜಿ ವಿಧಾನ ಪರಿಷತ್ ಸದಸ್ಯ ಗೋ.ಮದುಸೂಧನ್ ವಿರುದ್ಧ ಎಫ್‍ಐಆರ್ ದಾಖಲಿಸಬೇಕೆಂದು ಕಳೆದ ಐದು ದಿನಗಳಿಂದ ಪ್ರಗತಿ ಪರ ಸಂಘಟನೆಗಳು ನಗರದ ಕೆ.ಆರ್ ಠಾಣೆಯ ಎದುರು ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತ ಹಾಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ಪ್ರಶ್ನಿಸಲು ನ. 22 ರಂದು ಮೈಸೂರು ಬಂದ್‍ಗೆ ಕರೆ ನೀಡಿರುವುದಾಗಿ ಹೇಳಿದರು.

ಗೋ.ಮದುಸೂಧನ್ ವಿರುದ್ಧ ಎಫ್‍ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲು ನ.19ರವರೆಗೆ ಜಿಲ್ಲಾಡಳಿತಕ್ಕೆ ಕಾಲಾವಕಾಶ ನೀಡುತ್ತಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸರು ಗೋ.ಮದುಸೂಧನ್ ವಿರುದ್ಧ ಎಫ್‍ಐಆರ್ ದಾಖಲಿಸಿ ಕ್ರಮ ಕೈಗೊಂಡರೆ ಬಂದ್ ವಾಪಾಸ್ ತೆಗೆದುಕೊಳ್ಳುತ್ತೇವೆ. ಇಲ್ಲದಿದ್ದರೆ ನ.22 ರಂದು ಮೈಸೂರು ಬಂದ್ ನಡೆಸೆ ತೀರುತ್ತೇವೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಸಂವಿಧಾನ ಹೋರಾಟ ಸಂರಕ್ಷಣಾ ಸಮಿತಿ ಸಂಚಾಲಕ ಎನ್.ಭಾಸ್ಕರ್, ದಲಿತ ಸಂಘರ್ಷ ಸಮಿತಿಯ ಚೋರನಹಳ್ಳಿ ಶಿವಣ್ಣ, ಸೋಸಲೆ ಸಿದ್ದರಾಜು, ಎಸ್‍ಡಿಪಿಐ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಕಲೀಂ, ರೇವಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News