ನಾಥೂರಾಮ್ ಗೋಡ್ಸೆ ಹೆಸರಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಹಿಂದೂ ಮಹಾಸಭಾ ನಿರ್ಧಾರ

Update: 2017-11-19 15:22 GMT

 ಗ್ವಾಲಿಯರ್/ಉಜ್ಜೈನ್, ನ.19: ಮುಂದಿನ ಕೆಲವೇ ದಿನಗಳಲ್ಲಿ ನಾಥೂರಾಮ್ ಗೋಡ್ಸೆ ಹೆಸರಲ್ಲಿ ದೇವಸ್ಥಾನವನ್ನು ನಿರ್ಮಾಣ ಮಾಡಲು ಹಿಂದೂ ಮಹಾಸಭಾ ನಿರ್ಧರಿಸಿದೆ.

ನಾಥೂರಾಮ್ ಗೋಡ್ಸೆಯ ಮೂರ್ತಿಯನ್ನು ಕಿತ್ತುಹಾಕಬೇಕೆಂದು ಕಾಂಗ್ರೆಸ್ ಒತ್ತಾಯಿಸುತ್ತಿರುವುದಕ್ಕೆ ಪ್ರತಿಭಟನೆ ವ್ಯಕ್ತಪಡಿಸಿದ್ದ ಬಲಪಂಥೀಯ ಸಂಘಟನೆ ಒಂದು ಹೆಜ್ಜೆ ಮುಂದೆ ಹೋಗಿದೆ.

 ‘‘ನಾವು ಜೈಪುರದಿಂದ ಗೋಡ್ಸೆ ಪ್ರತಿಮೆಯನ್ನು ತರಲಿದ್ದು, ಇದರ ಬೆಲೆ 21,000 ರೂ. ಆಗಿದೆ. ದೇವಾಲಯವನ್ನು ಇನ್ನು ಎರಡು-ಮೂರು ದಿನಗಳಲ್ಲಿ ಪೂರ್ಣಗೊಳಿಸಲಾಗುವುದು. ಜೈಸಿಂಗ್‌ಪುರದ ಅಖಂಡ ಮಹಾಕಾಲ್ ಕಾಲೋನಿಯ ಸಂಸ್ಥೆಯ ಕಚೇರಿಯ ಒಳಗೆ ದೇವಸ್ಥಾನದ ಸ್ಥಾಪನೆ ಮಾಡುತ್ತೇವೆ’’ ಎಂದು ಹಿಂದೂ ಮಹಾಸಭಾ ವಕ್ತಾರ ಮನೀಶ್ ಸಿಂಗ್ ಠಾಕೂರ್ ನ್ಯೂಸ್ 18ಕ್ಕೆ ತಿಳಿಸಿದ್ದಾರೆ.

‘‘ಗಾಂಧಿ ಹಂತಕನನ್ನು ವೈಭವೀಕರಿಸುವುದು ಸರಿಯಲ್ಲ’’ ಎಂದು ಶಿವರಾಜ್ ಸಿಂಗ್ ಚೌಹಾಣ್ ಸರಕಾರದ ಕಂದಾಯ ಸಚಿವ ಉಮಾಶಂಕರ್ ಗುಪ್ತಾ ಶನಿವಾರ ಪ್ರತಿಕ್ರಿಯೆ ನೀಡಿದ್ದರು.

ಮಹಾಸಭಾದ ಗ್ವಾಲಿಯರ್ ಘಟಕ ನ.15 ರಂದು ಗೋಡ್ಸೆಯ ಪ್ರತಿಮೆಯನ್ನು ಪ್ರತಿಷ್ಠಾಪಿಸಿತ್ತು. ಇದೀಗ ಉಜ್ಜೈನ್ ಘಟಕವು ತನ್ನ ಇತರ ಘಟಕಗಳಂತೆಯೇ ಆಡಳಿತಾತ್ಮಕ ಅನುಮತಿಯಿಲ್ಲದೇ ಗೋಡ್ಸೆಯ ದೇವಾಲಯ ನಿರ್ಮಿಸಲು ನಿರ್ಧರಿಸಿದೆ.

‘‘ನಾವು ಭೋಪಾಲ್, ಇಂದೋರ್, ಗ್ವಾಲಿಯರ್ ಹಾಗೂ ಉಜ್ಜೈನ್ ಸಹಿತ ಇತರ ನಗರಗಳಿಗೆ ಕರಪತ್ರ ಹಂಚಿ, ಗ್ವಾಲಿಯರ್ ಕಚೇರಿಯಲ್ಲಿರುವ ಗೋಡ್ಸೆ ಮೂರ್ತಿ ತೆಗೆದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದೇವೆ’’ ಎಂದು ಅಖಿಲ ಭಾರತೀಯ ಮಹಾಸಭಾದ ಉಪಾಧ್ಯಕ್ಷ ಜೈಸ್‌ವೀರ್ ಭಾರದ್ವಾಜ್ ಹೇಳಿದ್ದಾರೆ.

ನಾಥೂರಾಮ್ ಗೋಡ್ಸೆ 1948ರ ಜ.30 ರಂದು ರಾಷ್ಟ್ರಪಿತ ಮಹಾತ್ಮಗಾಂಧಿಯವರನ್ನು ಗುಂಡಿಕ್ಕಿ ಸಾಯಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News