ಬೊಗಸೆಯಲ್ಲಿ ಬೆಳದಿಂಗಳು

Update: 2017-11-19 18:43 GMT

ವ್ಯಕ್ತಿ ಚಿತ್ರವೆಂದರೆ ವ್ಯಕ್ತಿಯ ಪರಿಚಯವೆಂಬ ಚೌಕಟ್ಟಿಗೆ ಸೀಮಿತಗೊಳಿಸಿ ಆ ಪ್ರಾಕಾರವನ್ನು ಕಿರಿದುಗೊಳಿಸಲಾಗಿದೆ. ಇವುಗಳ ನಡುವೆಯೂ ಈ ಪ್ರಾಕಾರವನ್ನು ತಮ್ಮ ಕೈಚಳಕದಿಂದ ಹಿಗ್ಗಿಸಿದವರಿದ್ದಾರೆ. ಜಿ. ಎನ್. ರಂಗನಾಥ ರಾವ್ ಅವರ ‘ಬೆಳದಿಂಗಳು-ಸಾಹಿತ್ಯ ಸಲ್ಲಾಪ’ ಓದುವಾಗ ಈ ಅನುಭವ ನಮ್ಮದಾಗುತ್ತದೆ. ವ್ಯಕ್ತಿ ಪರಿಚಯವೆನ್ನುವುದು ವ್ಯಕ್ತಿಯ ಒಳಗಿನ ವ್ಯಕ್ತಿತ್ವವನ್ನು ತೆರೆದಿಡುವುದು ಎನ್ನುವುದು ಇಲ್ಲಿರುವ ಪ್ರತೀ ಬರಹಗಳಿಂದ ನಮ್ಮ ಅರಿವಿಗೆ ತಂದುಕೊಳ್ಳಬಹುದು. ಸುಮಾರು 47 ವ್ಯಕ್ತಿಗಳ ಕುರಿತಂತೆ ಇಲ್ಲಿ ಪರಿಚಯವಿದೆ. ಇದು ಕೇವಲ ಹಿರಿಯರಿಗಷ್ಟೇ ಸಂಬಂಧಿಸಿದ್ದಲ್ಲ. ಸಾಧನೆಗೆ ಹಿರಿಕಿರಿಯ ಭೇದವಿಲ್ಲ ಎನ್ನುವಂತೆ ವಿವಿಧ ತಲೆಮಾರುಗಳ ಸಾಧಕರು ಈ ಕೃತಿಯಲ್ಲಿ ಒಂದು ಗೂಡಿದ್ದಾರೆ.

ವ್ಯಕ್ತಿಯನ್ನು ದೂರದಿಂದ ನೋಡಿ, ಆತನ ಬದುಕನ್ನು ಅಧ್ಯಯನ ಮಾಡಿ ಪರಿಚಯ ಕಟ್ಟಿಕೊಡುವುದು ಒಂದು ಬಗೆ. ಇಲ್ಲಿ ಜಿ. ಎನ್. ರಂಗನಾಥ ರಾವ್ ಅವರು ಹಲವು ವ್ಯಕ್ತಿಗಳೊಂದಿಗೆ, ಸಾಧಕರೊಂದಿಗೆ ಒಡನಾಡಿದವರು. ಅವರೊಂದಿಗೆ ಕೂಡಿ ಬೆರೆದವರು. ಆದುದರಿಂದ, ಪರಿಚಯ ಒಳಗಿನದಾಗಿ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಅವರ ಜೊತೆಗಿನ ಒಡನಾಟ, ವಿಶೇಷ ಅನುಭವಗಳು ಇವನ್ನೆಲ್ಲ ಇಟ್ಟುಕೊಂಡು ವ್ಯಕ್ತಿಯನ್ನು ಕಡೆದುನಿಲ್ಲಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಒಂದು ರೀತಿ, ಕಿರಿದರಲ್ಲಿ ದೊಡ್ಡದನ್ನು ಹೇಳುವ ಪ್ರಯತ್ನ ಇದು. ಕೆಲವು ಘಟನೆಗಳ ಮೂಲಕವೇ ಒಬ್ಬ ಸಾಧಕನ ವ್ಯಕ್ತಿತ್ವ ನಮ್ಮಿಳಗೆ ವಿಶಾಲವಾಗಿ ಹರಡುತ್ತಾ ಹೋಗುತ್ತದೆ. ಬಿಡಿ ಬಿಡಿ ಚಿತ್ರಣಗಳು ಕೊಡುವ ಒಳನೋಟಗಳು ಅವರ ಕುರಿತಂತೆ ಇನ್ನಷ್ಟು ಓದುವ ಆಸೆಯನ್ನು ಬಿತ್ತುತ್ತದೆ. ಕಥಾ ಪ್ರಶಸ್ತಿಯ ನೆಪದಲ್ಲಿ ಅನಂತಮೂರ್ತಿ, ಜಯಂತರನ್ನು ಕಟ್ಟಿಕೊಟ್ಟರೆ, ಅರವತ್ತರ ಹಿನ್ನೆಲೆಯಲ್ಲಿ ಸುಮತೀಂದ್ರ ನಾಡಿಗರನ್ನು ಕುತೂಹಲಕರವಾಗಿ ನಿರೂಪಿಸುತ್ತಾರೆ. ವಿಮರ್ಶೆಯ ಹಾದಿಯಲ್ಲಿ ಪರಿಮಳದ ಲಹರಿಯನ್ನು ಹರಡಿದ ನರಹಳ್ಳಿ, ಕವಿ ನಿಸಾರ್ ಅಹಮದ್ ಅವರ ಬದುಕು ಕಾವ್ಯವೂ ಲವಲವಿಕೆಯಿಂದ ಓದಿಸಿಕೊಂಡು ಹೋಗುತ್ತದೆ. ಎಚ್ಚೆಸ್ಕೆ, ಶೇಷಗಿರಿ ರಾವ್, ಚಂದ್ರಶೇಖರ ಪಾಟೀಲ, ಹಂಪನಾಗರಾಜ್, ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ, ಶಾಂತರಸ, ಜಿ. ವೆಂಕಟಸುಬ್ಬಯ್ಯ, ಶಾಂತರಸ, ಎಸ್. ದಿವಾಕರ್, ಗಿರಡ್ಡಿ ಗೋವಿಂದರಾಜ್, ಶಿವಮೊಗ್ಗ ಸುಬ್ಬಣ್ಣ, ಲಂಕೇಶ್, ಆರ್. ಕೆ. ನಾರಾಯಣ್, ಶಾಂತವೇರಿ, ಪ್ರೊ. ಯು. ಆರ್. ರಾವ್....ಪುಟ ತೆರೆದಂತೆಯೇ ಬೆರಳ ತುದಿಗೆ ಸಾಧಕರ ಬದುಕು ಭಾವ ಅಂಟಿಕೊಳ್ಳುತ್ತದೆೆ. ಲವಲವಿಕೆಯ ನಿರೂಪಣೆ ಎಲ್ಲ ವ್ಯಕ್ತಿ ಚಿತ್ರಣಗಳ ಹೆಗ್ಗಳಿಕೆಯಾಗಿದೆ.

ಸಪ್ನ ಬುಕ್ ಹೌಸ್ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 300. ಮುಖಬೆಲೆ 220.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News