ಚೆಫ್ ವಿಕಾಸ್ ಖನ್ನಾರ ವಿಶಿಷ್ಟ ಕಲಿನರಿ ಮ್ಯೂಸಿಯಂ ಮಣಿಪಾಲದಲ್ಲಿ

Update: 2017-11-20 05:58 GMT

ಮುಂಬೈ,ನ.20 : ದೇಶದ ಖ್ಯಾತ ಪಾಕ ಪ್ರವೀಣ ವಿಕಾಸ್ ಖನ್ನಾ ಅವರು ತಾವು ಕಲಿತ ಸಂಸ್ಥೆಯಾದ ಮಣಿಪಾಲ ವಿಶ್ವವಿದ್ಯಾಲಯದ ವೆಲ್‍ಕಮ್ ಗ್ರೂಪ್ ಗ್ರಾಜುವೇಟ್ ಸ್ಕೂಲ್ ಆಫ್ ಹೋಟೆಲ್  ಅಡ್ಮಿನಿಸ್ಟ್ರೇಶನ್ ಇಲ್ಲಿ  ಅತ್ಯಪೂರ್ವ ಹಾಗೂ ಭಾರತದ ಪ್ರಪ್ರಥಮ ಕಲಿನರಿ ಮ್ಯೂಸಿಯಂ (ಪಾಕಶಾಲೆ ವಸ್ತುಸಂಗ್ರಹಾಲಯ) ಅನ್ನು ಸ್ಥಾಪಿಸಿದ್ದಾರೆ. ನಾಲ್ಕು ಮಿಲಿಯನ್ ಡಾಲರ್ ವೆಚ್ಚದ ಯೋಜನೆ ಇದಾಗಿದ್ದು 10,000ಕ್ಕೂ ಅಧಿಕ ಪಾಕಶಾಲೆಗೆ ಸಂಬಂಧಿಸಿದ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸಲಾಗುವುದು.

ಈ ವಸ್ತುಸಂಗ್ರಹಾಲಯದ ಕ್ಯುರೇಟರ್ ಕೂಡ ಆಗಿರುವ ಖನ್ನಾ ಇಲ್ಲಿ ಪ್ರದರ್ಶಿಸಲಾಗಿರುವ ಹಲವಾರು ವಸ್ತುಗಳು ಅದೆಷ್ಟು ಮಹತ್ವದ್ದೆಂದರೆ ಅವು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ, ಎಂದು ಹೇಳುತ್ತಾರೆ.

"ನಾನು ಅಮೆರಿಕಾದಲ್ಲಿ ವಾಸಿಸಲು ಆರಂಭಿಸಿದ ನಂತರ ಇಂತಹ ಒಂದು ಮ್ಯೂಸಿಯಂ ಅನ್ನು ಮಣಿಪಾಲದಲ್ಲಿ ಆರಂಭಿಸುವ ಯೋಚನೆ ನನಗೆ ಹೊಳೆಯಿತು. ಅಮೆರಿಕಾದಲ್ಲಿ 5,000ಕ್ಕೂ ಅಧಿಕ ಮ್ಯೂಸಿಯಂಗಳಿವೆ, ಕಂಪ್ಯೂಟರ್ ಹೇಗೆ ಆವಿಷ್ಕರಿಸಲ್ಪಟ್ಟಿತ್ತು ಎಂದು ವಿವರಿಸುವ ಮ್ಯೂಸಿಯಂ ಕೂಡ ಅಮೆರಿಕಾದಲ್ಲಿದೆ. ಗ್ಲಾಸ್ ತಯಾರಿಯ ಆರಂಭ ಹಾಗೂ ಅಭಿವೃದ್ಧಿಯ ಕುರಿತಾಗಿಯೂ ಒಂದು ಮ್ಯೂಸಿಯಂ ಅಲ್ಲಿದೆ. ತಮ್ಮ ಸಂಸ್ಕೃತಿ ಹಾಗೂ ಇತಿಹಾಸವನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಉದ್ದೇಶದಿಂದ ಅವರು ಮಿಲಿಯಗಟ್ಟಲೆ ಡಾಲರ್ ಖರ್ಚು ಮಾಡುತ್ತಾರೆ,'' ಎಂದು ಖನ್ನಾ ವಿವರಿಸುತ್ತಾರೆ.

ಭಾರತದ ಆಹಾರ  ಪದ್ಧತಿ ಹಾಗೂ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ವಿವರಿಸುವ ಉದ್ದೇಶದಿಂದ  ಈ ವಸ್ತುಸಂಗ್ರಹಾಲಯ ಆರಂಭಿಸಲಾಗುತ್ತಿದೆ. ನಾನು ಇಲ್ಲಿಯವರೆಗೆ ಹಲವಾರು ಪಾತ್ರೆಗಳನ್ನು ಸಂಗ್ರಹಿಸಿದ್ದೇನೆ ನ್ಯೂಯಾರ್ಕಿನ ನನ್ನ ಮನೆ ತುಂಬಾ ಎಲ್ಲಾ ಆಕಾರ ಮತ್ತು ಗಾತ್ರದ ಪಾತ್ರೆ ಪಗಡೆಗಳಿವೆ. ಮಣಿಪಾಲದ ಮ್ಯೂಸಿಯಂ ಒಂದು ಮಡಿಕೆಯ ಗಾತ್ರದಲ್ಲಿ ನಿರ್ಮಾಣವಾಗಿದ್ದು ಮುಂದಿನ ಎಪ್ರಿಲ್ ತಿಂಗಳಲ್ಲಿ ಇದು ಆರಂಭಗೊಳ್ಳಲಿದೆ. 

ಪೊರ್ಚುಗೀಸರು ಭಾರತದಲ್ಲಿ ತಯಾರಿಸಿದ ಪ್ಲೇಟುಗಳು, 110 ವರ್ಷ ಹಳೆಯದಾದ ಹಾಗೂ ದೇವಳಗಳಲ್ಲಿ ಉಪಯೋಗಿಸಲಾಗುವ ಸೌಟು, ಕೊಂಕಣ, ಉಡುಪಿ, ಚೆಟ್ಟಿನಾಡ್ ಪ್ರಾಂತ್ಯದ  ಪಾತ್ರೆಗಳು,  ಹರಪ್ಪನ್ ಕಾಲದ  ಪಾತ್ರೆಗಳು, ಅತ್ಯಂತ ಹಳೆಯ ಭಾರತೀಯ ಯಹೂದಿಗಳ ಸೆಡರ್ ಪ್ಲೇಟುಗಳು, ತೂಕ ಮಾಡುವ ಸಾಮಾನುಗಳು, ಪ್ಲೇಟು, ಮಡಿಕೆಗಳು, ಕಪ್ ಸಾಸರ್, ಟಿಫಿನ್, ಪ್ಯಾನ್,  ಚಮಚ, ಸೌಟು,  ಚೂರಿ, ಮಸಾಲೆ ಅರೆಯುವ ಸಾಧನ, ಲಟ್ಟಣಿಗೆ, ಕಾವಲಿ, ಸ್ಟೌ ಹೀಗೆ 17 ವಿಭಾಗದ ಅಪರೂಪದ ವಸ್ತುಗಳು ಈ ವಸ್ತುಸಂಗ್ರಹಾಲಯದಲ್ಲಿರುತ್ತವೆ. ಜನರು ಕೂಡ ತಮ್ಮಲ್ಲಿರುವ ವಿಶಿಷ್ಟ ಪಾತ್ರೆಗಳನ್ನು  ಇಲ್ಲಿಗೆ ನೀಡಬಹುದಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News