ನ.22 ರಂದು ಜೂನಿಯರ್ ಶರೀಯತ್ ಕಾಲೇಜಿನಲ್ಲಿ 'ಮಜ್ಲಿಸುನ್ನೂರು, ದುಹಾ ಸಮ್ಮೇಳನ'

Update: 2017-11-20 12:21 GMT

ಮಡಿಕೇರಿ, ನ.20: ಸುಂಟಿಕೊಪ್ಪದ ಮೊಹಮ್ಮದ್ ಅಲಿ ಶಿಹಾಬ್ ತಙಳ್ ಜೂನಿಯರ್ ಶರೀಯತ್ ಕಾಲೇಜ್ ವತಿಯಿಂದ ನ.22 ರಂದು ಮಜ್ಲಿಸುನ್ನೂರು ಹಾಗೂ ದುಹಾ ಸಮ್ಮೇಳನ ನಡೆಯಲಿದೆ ಎಂದು ಕಾಲೇಜು ಸಮಿತಿಯ ಕಾರ್ಯದರ್ಶಿ ಸಿ.ಎಂ.ಹಮೀದ್ ಮೌಲವಿ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.22 ರಂದು ಸಂಜೆ 6.30ಕ್ಕೆ ನಡೆಯುವ ಸಮ್ಮೇಳನವನ್ನು ಕೊಡಗು ಜಿಲ್ಲಾ ಉಪ ಖಾಝಿ ಅಬ್ದುಲ್ಲ ಫೈಝಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮಾಜಿ ಶಾಸಕ ಕೆ.ಎಂ. ಇಬ್ರಾಹೀಂ ವಹಿಸಲಿದ್ದಾರೆ ಎಂದರು.

ಮುಖ್ಯ ಭಾಷಣವನ್ನು ಪ್ರಖ್ಯಾತ ವಾಗ್ಮಿ ಹಸನ್ ಸಖಾಫಿ ಪೂಕುಟೂರ್ ಮಾಡಲಿದ್ದು, ಅತಿಥಿಗಳಾಗಿ ಎಸ್‍ಕೆಐಎಂಎ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಎಸ್‍ಎಂಎಫ್ ಜಿಲ್ಲಾ ಅಧ್ಯಕ್ಷ ಉಸ್ಮಾನ್ ಹಾಜಿ, ಅಲ್ ಅಮೀನ್ ಸಮಿತಿ ಅಧ್ಯಕ್ಷ ಎಫ್.ಎ. ಮೊಹಮ್ಮದ್ ಹಾಜಿ, ಶಂಸುಲ್ ಉಲಮ ಟ್ರಸ್ಟ್ ಅಧ್ಯಕ್ಷ ಬಶೀರ್ ಹಾಜಿ, ಅಲ್ಪಸಂಖ್ಯಾತ ಕೊಡಗು ಜಿಲ್ಲಾ ಅಧ್ಯಕ್ಷ ಯಾಕೂಬ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪ್ರತಿಯೊಬ್ಬರ ಮನದಲ್ಲಿನ ಅಹಂ, ಅಹಂಕಾರ, ಕೆಡುಕಿನ ಮನೋಭಾವನೆಗಳನ್ನು ತೊಡೆಯುವ ನಿಟ್ಟಿನಲ್ಲಿ ಅಗತ್ಯ ಮಾರ್ಗದರ್ಶನ, ಧಾರ್ಮಿಕ ಚಿಂತನೆಗಳನ್ನು ಮೂಡಿಸುವ  ವೇದಿಕೆಯನ್ನು ಮಜ್ಲಿಸುನ್ನೂರು ಎನ್ನಲಾಗುತ್ತದೆ. ಇದನ್ನು ಪಾಣಕ್ಕಾಡ್ ಹೈದರಲಿ ಶಿಹಾಬ್ ತಙಳ್ ಅವರು ಆರಂಭಿಸಿದ್ದು, ಪ್ರಸ್ತುತ ಕರ್ನಾಟಕ, ಕೇರಳ ರಾಜ್ಯ ಸೇರಿದಂತೆ ಭಾರತದಾದ್ಯಂತ 5 ಸಾವಿರ ಕೇಂದ್ರಗಳಲ್ಲಿ ಮಜ್ಲಿಸುನ್ನೂರನ್ನು ಸ್ಥಾಪಿಸಲಾಗಿದೆಯೆಂದು ಎಂದು ವಿವರಿಸಿದರು.

ಕೊಡಗು ಜಿಲ್ಲಾ ವ್ಯಾಪ್ತಿಯ 30 ಮಹಲ್‍ಗಳಲ್ಲಿ ಮಜ್ಲಿಸುನ್ನೂರು ನಡೆಯುತ್ತಿದ್ದು, ನವೆಂಬರ್ 22 ರಂದು ಸುಂಟಿಕೊಪ್ಪದಲ್ಲಿ ನಡೆಯುವ ಸಮ್ಮೇಳನದ ನೇತೃತ್ವವನ್ನು ಕರ್ನಾಟಕ ರಾಜ್ಯದ ಅಮೀರಾಗಿ ನಿಯುಕ್ತಿಗೊಂಡಿರುವ ಕೋಯಿಕೋಡ್ ಖಾಝಿ ಸಯ್ಯದ್ ಮೊಹಮ್ಮದ್ ಜಮಲುಲೈ ತಙಳ್ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜು ಸಮಿತಿ ಅಧ್ಯಕ್ಷ ವೈ.ಎಂ. ಉಮ್ಮರ್ ಪೈಝಿ, ಉಪಾಧ್ಯಕ್ಷ ಎಫ್.ಎ. ಮೊಹಮ್ಮದ್ ಹಾಜಿ, ಖಜಾಂಚಿ ಹಾರೂನ್ ಹಾಜಿ,  ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಇಕ್ಬಾಲ್ ಮೌಲವಿ ಮತ್ತು ಹಸನ್ ಕುಂಞಿ ಹಾಜಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News