ಬೆಳೆ ಸಮೀಕ್ಷೆ: ಇನ್ನಷ್ಟು ಪ್ರಗತಿಗೆ ಡಿಸಿ ಸೂಚನೆ

Update: 2017-11-20 18:35 GMT

ಮಡಿಕೇರಿ, ನ.20: ಸರಕಾರದ ಮಹತ್ವಾಂಕಾಕ್ಷಿ ತಂತ್ರಜ್ಞಾನ ಆಧಾರಿತ ಬೆಳೆ ಸಮೀಕ್ಷೆ ಕಾರ್ಯಕ್ಕೆ ರೈ       

ತರು ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಮನವಿ ಮಾಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳೆ ಸಮೀಕ್ಷೆ ಪ್ರಗತಿ ಸಂಬಂಧಿಸಿದಂತೆ ರೈತರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆಯು ಶೇ.52ರಷ್ಟು ಪ್ರಗತಿಯಾಗಿದ್ದು,ಶೇ.100ರಷ್ಟು ಪ್ರಗತಿ ಸಾಧಿಸಬೇಕಿದೆ. ಬೆಳೆ ಸಮೀಕ್ಷೆಯಲ್ಲಿ ರೈತರ ಸಹಕಾರ ಅತ್ಯಗತ್ಯವಾಗಿದೆ. ರೈತರು ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು.

ಮೊಬೈಲ್ ಆ್ಯಪ್ ಆಧಾರಿತ ಬೆಳೆ ಸಮೀಕ್ಷೆ ಮಾಡಬೇಕಿದ್ದು, ಸ್ಮಾರ್ಟ್‌ಪೋನ್ ಇರುವವರು, ಅಂತರ್ಜಾಲ ಬಳಸಿ ಬೆಳೆ ಸಮೀಕ್ಷೆ ಕೈಗೊಳ್ಳಬಹುದಾಗಿದೆ. ಪ್ರತೀ ಗ್ರಾಮವಾರು ಸರ್ವೇ ನಂಬರ್‌ವಾರು ಬೆಳೆಗಳ ವಿವರಗಳನ್ನು ದಾಖಲಿಸಿ ತಂತ್ರಾಂಶದಲ್ಲಿ ಫೋಟೊಗಳನ್ನು ಅಪ್‌ಲೋಡ್ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯ 529 ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲಾಗಿದೆ. ಗ್ರಾಮ ಸಹಾಯಕರು, ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು, ತೋಟಗಾರಿಕೆ ಮತ್ತು ಕೃಷಿ ಅಧಿಕಾರಿಗಳನ್ನು ಬೆಳೆ ಸಮೀಕ್ಷೆಗೆ ನಿಯೋಜಿಸಲಾಗಿದೆ. ರೈತರ ಸಹಕಾರ ಪಡೆದು ಬೆಳೆ ಸಮೀಕ್ಷೆ ಪ್ರಗತಿಗೆ ಮುಂದಾಗಬೇಕಿದೆ ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಜಮೀನು ಕ್ಷೇತ್ರವನ್ನು ವಿವಿಧ ಬೆಳೆ ಸ್ವರೂಪಗಳಿಗೆ ಸಮೀಕರಿಸುವುದು, ವಿವಿಧ ಬೆಳೆಗಳಿಗೆ ಸರಿಯಾದ ಮೊತ್ತದ ಸಹಾಯಧನದ ಅಂದಾಜು ಪ್ರಕ್ರಿಯೆ, ಪ್ರಾಕೃತಿಕ ವಿಕೋಪಗಳ ಸಂದಭರ್ದಲ್ಲಿ ಫಸಲು ನಷ್ಟದ ನೈಜ ಅಂದಾಜು ಮತ್ತು ರೈತರಿಗೆ ಸಕಾಲಿಕ ಮತ್ತು ನ್ಯಾಯಯುತ ಪರಿಹಾರ ಪಾವತಿ, ಪಹಣಿ ಪತ್ರಿಕೆ ಮತ್ತು ವಿಮೆ ದಾಖಲೆಗಳಲ್ಲಿ ನಿಖರ ಮಾಹಿತಿ ಕ್ರೋಡೀಕರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್‌ಕುಮಾರ್, ಮಾತನಾಡಿ, ರೈತರು ಬೆಳೆ ಸಮೀಕ್ಷೆ ಬಗ್ಗೆ ಅನುಕೂಲವಾಗುವಂತೆ ಮೊಬೈಲ್ ಆ್ಯಪ್ ಸಿದ್ದಪಡಿಸಿದ್ದು, ಈ ಆ್ಯಪ್ ಮೂಲಕ ರೈತರು ಸ್ವತಃ ತಾವೇ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ರಾಮಪ್ಪ, ತೋಟಗಾರಿಕೆ ಇಲಾಖೆ ಅಧಿಕಾರಿ ರಾಮದಾಸ್ ಹಾಗೂ ತಾಂತ್ರಿಕ ಅಧಿಕಾರಿಗಳು ಬೆಳೆ ಸಮೀಕ್ಷೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News