ಖಾಲಿಯಿರುವ ಎಫ್‌ಡಿಎ, ಎಸ್‌ಡಿಎ ಹುದ್ದೆಗಳಿಗೆ 15 ಲಕ್ಷ ಅರ್ಜಿ ಸಲ್ಲಿಸುವ ನಿರೀಕ್ಷೆ

Update: 2017-11-21 16:25 GMT

ಬೆಂಗಳೂರು, ನ.21: ವಿವಿಧ ಸರಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರು (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹುದ್ದೆಗಳ ನೇಮಕಾತಿಗೆ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ಈ ಬಾರಿ ದಾಖಲೆ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಂದಾಜಿಸಿದೆ.

2,000 ಖಾಲಿ ಹುದ್ದೆಗಳಿಗೆ ಬರೋಬ್ಬರಿ 15 ಲಕ್ಷ ಅರ್ಜಿಗಳು ಸಲ್ಲಿಕೆಯಾಗಬಹುದೆಂದು ಲೆಕ್ಕ ಹಾಕಲಾಗಿದೆ. ಮುಂದಿನ ವರ್ಷ ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಇಡೀ ಪ್ರಕ್ರಿಯೆಗೆ 16 ಕೋಟಿ ವೆಚ್ಚ ತಗಲಬಹುದು ಎಂದೂ ಅಂದಾಜಿಸಲಾಗಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.

ಸೆಪ್ಟೆಂಬರ್ ತಿಂಗಳಲ್ಲಿ 507 ಎಫ್‌ಡಿಎ ಮತ್ತು 551 ಎಸ್‌ಡಿಎ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಅರ್ಜಿ ಸಲ್ಲಿಸಲು ಅಕ್ಟೋಬರ್ 7 ಕೊನೆಯ ದಿನವಾಗಿತ್ತು. ಒಟ್ಟು 1,058 ಹುದ್ದೆಗಳಿಗೆ ಈಗಾಗಲೇ 10,62,739 ಅರ್ಜಿಗಳು ಸಲ್ಲಿಕೆಯಾಗಿದ್ದು, ಆ ಅರ್ಜಿಗಳ ಪರಿಶೀಲನೆ ಪೂರ್ಣಗೊಂಡಿದೆ. ಈ ಪೈಕಿ 45,780 ಅರ್ಜಿಗಳು ಶುಲ್ಕ ಕಟ್ಟದ ಕಾರಣಕ್ಕೆ ಅನರ್ಹಗೊಂಡಿವೆ ಎಂದಿದ್ದಾರೆ.

ಇದೀಗ, ಮತ್ತೆ ವಿವಿಧ ಇಲಾಖೆಗಳಿಂದ ಒಟ್ಟು 500 ಎಫ್‌ಡಿಎ ಮತ್ತು 400 ಎಸ್‌ಡಿಎ ಹುದ್ದೆಗಳನ್ನು ತುಂಬುವಂತೆ ಪ್ರಸ್ತಾವನೆ ಬಂದಿದೆ. 500ಕ್ಕೂ ಹೆಚ್ಚು ಹುದ್ದೆಗಳಿಗೆ ಪ್ರಸ್ತಾವನೆ ಬಂದಾಗ ಮತ್ತೊಮ್ಮೆ ತಿದ್ದುಪಡಿ ಅಧಿಸೂಚನೆ ಹೊರಡಿಸಲು ಅವಕಾಶವಿದೆ. ಈ ಹಿಂದೆ ಅರ್ಜಿ ಆಹ್ವಾನಿಸಿದಾಗ ಹುದ್ದೆಗಳ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಹಲವರು ಅರ್ಜಿ ಸಲ್ಲಿಸದೇ ಇರುವ ಸಾಧ್ಯತೆಯೂ ಇದೆ. ಹೀಗಾಗಿ, ಈ ಹೆಚ್ಚುವರಿ ಹುದ್ದೆಗಳನ್ನೂ ಸೇರಿಸಿ ಇದೇ 22 ಅಥವಾ 23ರಂದು ಮತ್ತೊಂದು ಅಧಿಸೂಚನೆ ಹೊರಡಿಸಿ, ಉದ್ಯೋಗಾಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗುವುದು. ಈಗಾಗಲೇ ಅರ್ಜಿ ಸಲ್ಲಿಸಿ ಶುಲ್ಕ ಕಟ್ಟದ ಕಾರಣಕ್ಕೆ ಅನರ್ಹಗೊಂಡಿರುವ ಅಭ್ಯರ್ಥಿಗಳಿಗೆ ಈ ತಿದ್ದುಪಡಿ ಅಧಿಸೂಚನೆಯ ಮೂಲಕ ಶುಲ್ಕ ತುಂಬಲು ಮತ್ತೊಂದು ಅವಕಾಶ ನೀಡಲಾಗುವುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್ ಹೊಂದಿರಬೇಕು. ಸುಮಾರು 6 ಲಕ್ಷ ಹೊಸ ಅರ್ಜಿಗಳು ಸಲ್ಲಿಕೆ ಆಗಬಹುದು ಎಂದರು.

ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಇಡೀ ನೇಮಕಾತಿ ಪ್ರಕ್ರಿಯೆಗೆ ಪ್ರತಿ ಅಭ್ಯರ್ಥಿಗೆ ತಲಾ 165ರಂತೆ ವೆಚ್ಚವಾಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗದಿದ್ದರೂ, ಎಲ್ಲ ಸಿದ್ಧತೆಗಳನ್ನು ಮೊದಲೇ ಮಾಡಿಕೊಂಡಿರುವುದರಿಂದ ಹಣ ವೆಚ್ಚವಾಗುತ್ತದೆ. ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದಷ್ಟು ಆರ್ಥಿಕವಾಗಿ ಆಯೋಗಕ್ಕೆ ಅನುಕೂಲವಾಗಲಿದೆ ಎಂದು ವಿವರಿಸಿದ್ದಾರೆ.

ಅರ್ಜಿ ಸಲ್ಲಿಸುವ ಕೊನೆ ದಿನ ಮುಗಿದ ತಕ್ಷಣ, ನೇಮಕಾತಿ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲಾವಾರು ಅಭ್ಯರ್ಥಿಗಳನ್ನು ವಿಂಗಡಿಸಿ, ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಲಾಗುವುದು. ಇದಕ್ಕೆ ಸುಮಾರು ಒಂದು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಯಾವುದೇ ರೀತಿಯ ಪರೀಕ್ಷಾ ಅವ್ಯವಹಾರ ನಡೆಯಬಾರದು ಎಂಬ ಕಾರಣಕ್ಕೆ ಓಎಂಆರ್ ಶೀಟ್‌ನಲ್ಲೇ ಅಭ್ಯರ್ಥಿಗಳ ಮಾಹಿತಿಗಳನ್ನು ಮುದ್ರಿಸಲಾಗುತ್ತದೆ. ಇಡೀ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಪೂರ್ಣಗೊಳಿಸಲು ಆಯೋಗ ಸಿದ್ಧತೆ ನಡೆಸಿದೆ ಎಂದೂ ಪ್ರಸನ್ನ ಕುಮಾರ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News