ಉತ್ತರ ಪ್ರದೇಶ: ರುಮಾಲು ಧರಿಸಿದ್ದಕ್ಕಾಗಿ ಮುಸ್ಲಿಂ ಧರ್ಮಗುರುಗಳ ಮೇಲೆ ಹಲ್ಲೆ

Update: 2017-11-23 10:16 GMT

ಬಾಘ್ ಪತ್, ನ.23: ರುಮಾಲನ್ನು ಸುತ್ತಿಕೊಂಡದ್ದಕ್ಕಾಗಿ ಚಲಿಸುತ್ತಿದ್ದ ರೈಲಿನಲ್ಲಿ ಮೂವರು ಮುಸ್ಲಿಂ ಧರ್ಮಗುರುಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಬಾಘ್ ಪತ್ ಎಂಬಲ್ಲಿ ನಡೆದಿದೆ.

ಮದ್ರಸ ಶಿಕ್ಷಕರಾಗಿರುವ ಮೂವರು ದಿಲ್ಲಿಯಿಂದ ಉತ್ತರ ಪ್ರದೇಶಕ್ಕೆ ಆಗಮಿಸುತ್ತಿದ್ದರು. ಈ ಸಂದರ್ಭ ರೈಲು ಬೋಗಿಯೊಳಗೆ ಪ್ರವೇಶಿಸಿದ ಆರು ಮಂದಿ “ರುಮಾಲು ಧರಿಸಿದ್ದು ಏಕೆ” ಎಂದು ಪ್ರಶ್ನಿಸಿ ಕಬ್ಬಿಣದ ರಾಡ್ ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ದಾಳಿಯಿಂದ ಮೂವರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ಘಟನೆಯ ಹಿಂದೆ ಕೋಮುದ್ವೇಷವಿದೆಯೇ ಇಲ್ಲವೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮೊದಲು ಇಂತಹ ಘಟನೆಗಳು ಸಂಭವಿಸಿರಲಿಲ್ಲ. ನಮ್ಮ ಮೇಲೆ ಯಾಕೆ ಹಲ್ಲೆ ನಡೆಸುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಅವರು ಮತ್ತೆ ಮತ್ತೆ ಹಲ್ಲೆ ನಡೆಸಿದರು. ರುಮಾಲು ಯಾಕೆ ಧರಿಸಿದ್ದೀರಿ ಎಂದು ಪ್ರಶ್ನಿಸುತ್ತಾ ದಾಳಿ ನಡೆಸಿದರು ಎಂದು ಗಾಯಾಳುಗಳಲ್ಲಿ ಒಬ್ಬರಾದ ಇಸ್ರಾರ್ ಎಂಬವರು ಹೇಳಿದ್ದಾರೆ.

ಆರೋಪಿಗಳು ಯಾರೆಂದು ತಿಳಿಯದ ಕಾರಣ ಸದ್ಯಕ್ಕೆ ದೌರ್ಜನ್ಯ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News