ಚೀನಾ ಗಡಿಯಲ್ಲಿ ಯೋಧರ ಕ್ಷಿಪ್ರ ಚಲನವಲನಕ್ಕಾಗಿ ಸೇನೆಯ ಕ್ರಮ

Update: 2017-11-23 13:59 GMT

ಹೊಸದಿಲ್ಲಿ,ನ.23: 73 ದಿನಗಳ ಡೋಕಾ ಲಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ-ಚೀನಾ ಗಡಿಯುದ್ದಕ್ಕೂ ರಸ್ತೆ ಮೂಲಸೌಕರ್ಯವನ್ನು ಹೆಚ್ಚಿಸಲು ಸೇನೆಯು ನಿರ್ಧರಿಸಿದೆ. ಅಗತ್ಯವಾದಾಗ ಯೋಧರ ಕ್ಷಿಪ್ರ ಚಲನವಲನಗಳಿಗೆ ಅನುಕೂಲವಾಗುವಂತೆ ತ್ವರಿತವಾಗಿ ಕಾಮಗಾರಿಗಳನ್ನು ನಡೆಸುವಂತೆ ಅದು ತನ್ನ ಕಾರ್ಪ್ಸ್ ಆಫ್ ಇಂಜಿನಿಯರ್ಸ್(ಸಿಒಇ)ಗೆ ನಿರ್ದೇಶ ನೀಡಿದೆ.

ರಸ್ತೆ ನಿರ್ಮಾಣಕ್ಕಾಗಿ ವಿವಿಧ ಆಧುನಿಕ ಯಂತ್ರೋಪಕರಣಗಳಿಗಾಗಿ ಬೇಡಿಕೆಗಳ ಸಲ್ಲಿಕೆ ಸೇರಿದಂತೆ ಸರಣಿ ಕ್ರಮಗಳನ್ನು ಸಿಒಇ ಈಗಾಗಲೇ ಕೈಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು.

ಭಾರತ ಮತ್ತು ಚೀನಾ 4,000 ಕಿ.ಮೀ.ಉದ್ದದ ಗಡಿಯನ್ನು ಹಂಚಿಕೊಂಡಿವೆ. 237 ವರ್ಷಗಳಷ್ಟು ಹಿಂದೆ, 1780ರಲ್ಲಿ ಸ್ಥಾಪನೆಗೊಂಡಿದ್ದ ಸಿಒಇ ಯುದ್ಧರಂಗದಲ್ಲಿ ಇಂಜಿನಿಯರಿಂಗ್ ಬೆಂಬಲ ನೀಡುವುದರೊಡನೆ, ಯೋಧರು ಮತ್ತು ಫಿರಂಗಿ ದಳದ ತ್ವರಿತ ಚಲನವಲನಗಳಿಗಾಗಿ ಪ್ರಮುಖ ಗಡಿ ಪ್ರದೇಶಗಳಲ್ಲಿ ರಸ್ತೆ ಸಂಪರ್ಕವನ್ನು ನಿರ್ವಹಿಸುತ್ತದೆ.

ಯೋಜನೆಯಂತೆ ಸೇನೆಯ ಇಂಜಿನಿಯರ್‌ಗಳು ಆರಂಭದಲ್ಲಿ ಪರ್ವತ ಪ್ರದೇಶಗಳಲ್ಲಿ ರಸ್ತೆಗಳನ್ನು ನಿರ್ಮಿಸಲಿದ್ದಾರೆ ಮತ್ತು ಅಗತ್ಯವಾದರೆ ಗಡಿ ರಸ್ತೆಗಳ ಸಂಸ್ಥೆ(ಬಿಆರ್‌ಒ)ಯು ಈ ರಸ್ತೆಗಳನ್ನು ಇನ್ನಷ್ಟು ಸದೃಢಗೊಳಿಸಲಿದೆ.

 ಭಾರತ-ಚೀನಾ ಗಡಿಯಲ್ಲಿನ ಆಯಕಟ್ಟಿನ ಪ್ರದೇಶಗಳಲ್ಲಿ 73 ರಸ್ತೆಗಳನ್ನು ನಿರ್ಮಿಸುವಂತೆ 2005ರಲ್ಲಿ ಬಿಆರ್‌ಒಗೆ ಸೂಚಿಸಲಾಗಿತ್ತು. ಆದರೆ ಯೋಜನೆಯ ಅನುಷ್ಠಾನದಲ್ಲಿ ಭಾರೀ ವಿಳಂಬವಾಗಿದ್ದು, ಇದು ಸೇನೆಯ ಅಸಮಾಧಾನಕ್ಕೆ ಕಾರಣವಾಗಿದೆ.

ಸೂಕ್ಷ್ಮ ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಉತ್ತಮಗೊಳಿಸುವುದು ಸಶಸ್ತ್ರ ಪಡೆಗಳ ಯುದ್ಧ ಸನ್ನದ್ಧತೆಯನ್ನು ಹೆಚ್ಚಿಸುವ ಸರಕಾರದ ಒಟ್ಟಾರೆ ಕಾರ್ಯತಂತ್ರದ ಭಾಗವಾಗಿದೆ ಎಂದು ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News