ಬುಲೆಟ್‌ಪ್ರೂಫ್ ಮನೆಯಲ್ಲಿ ವಾಸಿಸುತ್ತಿದ್ದ ಗುರ್ಮೀತ್ ಸಿಂಗ್

Update: 2017-11-23 14:44 GMT

ಚಂಡೀಗಡ, ನ.23: ಡೇರಾ ಸಚ್ಛಾ ಸೌದದ ಮುಖ್ಯಸ್ಥ, ಅತ್ಯಾಚಾರ ಆರೋಪದಲ್ಲಿ ಅಪರಾಧಿಯೆಂದು ಶಿಕ್ಷೆಗೆ ಗುರಿಯಾಗಿರುವ ಗುರ್ಮೀತ್ ಸಿಂಗ್ ನಡೆಸುತ್ತಿದ್ದ ಅದ್ದೂರಿ ಜೀವನಶೈಲಿಯ ಇನ್ನಷ್ಟು ಮಾಹಿತಿಗಳು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ಪೊಲೀಸರು ಸಲ್ಲಿಸಿರುವ ವರದಿಯಲ್ಲಿ ಒಳಗೊಂಡಿವೆ ಎಂದು ಮೂಲಗಳು ತಿಳಿಸಿವೆ.

  ಗುರ್ಮೀತ್ ಸಿಂಗ್ ವಾಸವಿದ್ದ ‘ತೇರಾ ವಾಸ್’ ನಿವಾಸದಲ್ಲಿ ಪೊಲೀಸರು ದಾಳಿ ಮಾಡಿ ಶೋಧ ಕಾರ್ಯಾಚರಣೆ ನಡೆಸಿದ್ದು, ತೇರಾ ವಾಸ್ ಸಂಪೂರ್ಣವಾಗಿ ಬುಲೆಟ್‌ಪ್ರೂಫ್ ವ್ಯವಸ್ಥೆ ಹೊಂದಿರುವುದನ್ನು ವರದಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಗುರ್ಮೀತ್ ಬಳಸುತ್ತಿದ್ದ ‘ಲೆಕ್ಸಸ್’ ಕಾರು ಕೂಡಾ ಬುಲೆಟ್‌ಪ್ರೂಫ್ ವ್ಯವಸ್ಥೆ ಹೊಂದಿದೆ. ಹಾಗೂ ಗುರ್ಮೀತ್ ಝಡ್ ಪ್ಲಸ್ ಭದ್ರತೆ ಹೊಂದಿದ್ದ.

 ಗುರ್ಮಿತ್ ಶಯನಗೃಹ ‘ಗುಫ’ದಿಂದ ಸಾಧ್ವಿಯರ ನಿವಾಸಕ್ಕೆ ಸುರಂಗ ಮಾರ್ಗವನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ. ಅಲ್ಲದೆ ಗುರ್ಮಿತ್ ನಿವಾಸದ ಮೊದಲನೆ ಮಹಡಿಯಲ್ಲಿ ಒಂದು ಗುಪ್ತ ಮಾರ್ಗವಿದ್ದು ಅದರ ಇನ್ನೊಂದು ಬಾಗಿಲು ಕೆಲಸದಾಳು ವಾಸವಿದ್ದ ಕೋಣೆಯಲ್ಲಿ ತೆರೆದುಕೊಂಡಿದೆ. ಈ ಕೋಣೆಯ ಕಿಟಕಿಯನ್ನು ಮರದ ಕವಾಟಿನಿಂದ ಮರೆ ಮಾಚಲಾಗಿದ್ದು ಈ ಕಿಟಕಿಯಿಂದ ಸಾದ್ವಿಯರು ಉಳಿದುಕೊಳ್ಳುತ್ತಿದ್ದ ಕೋಣೆಯನ್ನು ವೀಕ್ಷಿಸಬಹುದಾಗಿದೆ ಎಂದು ತನಿಖಾ ತಂಡದವರು ತಿಳಿಸಿದ್ದಾರೆ.

   ಅಲ್ಲದೆ ಇದೇ ಮಹಡಿಯಲ್ಲಿ ಸುರಂಗ ಮಾರ್ಗವೊಂದಿದ್ದು ಇದರ ಎರಡೂ ತುದಿಗಳನ್ನು ಮಣ್ಣಿನಿಂದ ಮುಚ್ಚಲಾಗಿದೆ. ಈ ಸುರಂಗ ಮಾರ್ಗವನ್ನು ಯಾವ ಕಾರಣಕ್ಕೆ ನಿರ್ಮಿಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ಸಿವಿಲ್ ಇಂಜಿನಿಯರಿಂಗ್ ವಿಭಾಗಕ್ಕೆ ಸೂಚಿಸುವ ನಿರೀಕ್ಷೆ ಯಿದೆ ಎಂದು ಮೂಲಗಳು ತಿಳಿಸಿವೆ. ಗುರ್ಮೀತ್‌ನ ಡ್ರೆಸ್ಸಿಂಗ್ ಕೋಣೆಯಲ್ಲಿ 14 ಅಡಿ ಎತ್ತರ ಎರಡು ಬೃಹತ್ ಮರದ ಕವಾಟಗಳಿದ್ದು ಇದರಲ್ಲಿ ನೂರಾರು ಶೂಗಳು, ಹ್ಯಾಟ್‌ಗಳು, ವೈವಿಧ್ಯಮಯ ಉಡುಗೆ ತೊಡುಗೆಗಳಿದ್ದವು. ಅಲ್ಲದೆ ವಿದೇಶದಿಂದ ಆಮದು ಮಾಡಿಕೊಂಡಿರುವ ದುಬಾರಿ ಬೆಲೆಯ ಮಸಾಜ್ ಎಣ್ಣೆ, ಸುಗಂಧ ದ್ರವ್ಯಗಳು, ಸೌಂದರ್ಯವರ್ಧಕಗಳು , ಹಲವಾರು ಬೃಹದಾಕಾರದ ಟಿವಿ ಪರದೆಗಳು, ವೈಭವೋಪೇತ ವಸ್ತುಗಳು ಗುರ್ಮೀತ್ ಸಿಂಗ್‌ನ ಮೂರು ಅಂತಸ್ತಿನ ಮನೆಯಲ್ಲಿ ಪತ್ತೆಯಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News