ದೇಶಭಕ್ತಿಯ ಹೆಸರಲ್ಲಿ ದ್ವೇಷ ಹುಟ್ಟಿಸುತ್ತಿರುವ ಅನಂತ್ ಕುಮಾರ್ ಹೆಗಡೆ

Update: 2017-11-23 15:40 GMT

ಭಟ್ಕಳ, ನ.23: ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಬಿಜೆಪಿ ಅಭ್ಯರ್ಥಿ ಗೋವಿಂದ ನಾಯ್ಕರನ್ನು ಸೋಲಿಸುವುದರ ಮೂಲಕ ಸಂಸದ ಅನಂತ್ ಕುಮಾರ್ ಹೆಗಡೆ ನಾಮಧಾರಿ ಸಮಾಜವನ್ನು ರಾಜಕೀಯವಾಗಿ ತುಳಿದಿದ್ದಾರೆ. ಗೋವಿಂದ ನಾಯ್ಕರಿಗೆ ಮತ ನೀಡಬೇಡಿ ಎಂದು ಕರೆ ನೀಡಿದ್ದ ಅನಂತರದ್ದು ದೇಶಭಕ್ತಿಯಲ್ಲ, ದ್ವೇಷಭಕ್ತಿ ಎಂದು ಮಾಜಿ ಸಚಿವ ಆರ್.ಎನ್. ನಾಯ್ಕ ಹೇಳಿದ್ದಾರೆ.

ಬುಧವಾರ ಇಲ್ಲಿನ ಪ್ರವಾಸಿ ಬಂಗಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಅನಂತ್ ಕುಮಾರ್ ಹೆಗಡೆ ಮಂತ್ರಿಯಾಗಿ ತಮ್ಮನ್ನು ತಿದ್ದುಕೊಳ್ಳುತ್ತಾರೆಂಬ ಜನರ ಊಹೆ ಸುಳ್ಳಾಗಿದೆ. ತನಗೆ ತೋಚಿದಂತೆ ನಾಲಗೆಯನ್ನು ಹರಿಬಿಡುವ ಇವರು ಪೂಜಾರಿಯ ಪುಂಗಿ ಬಂದ್ ಮಾಡಿಸುತ್ತಾರಂತೆ. ರಾಜ್ಯದ ಮುಖ್ಯಮಂತ್ರಿಯನ್ನೂ ತೆಗಳುವ ಇವರು ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿಯೂ ಬ್ರಾಹ್ಮಣರ ಕನಿಷ್ಠ ಸಂಸ್ಕಾರವನ್ನು ಬೆಳೆಸಿಕೊಂಡಿಲ್ಲ. ಇಂತಹ ವ್ಯಕ್ತಿಯನ್ನು ಪಕ್ಕದಲ್ಲಿ ಕುಳ್ಳಿರಿಸುವುದು ಯಡಿಯೂರಪ್ಪನವರಿಗೆ ಶೋಭೆ ತರುವುದಿಲ್ಲ" ಎಂದರು.

"ನಮಗೆ ಹಿಂದುತ್ವ ಬೇಡ, ಬಂಧುತ್ವ ಬೇಕು. ಚುನಾವಣೆ ಹತ್ತಿರ ಬಂದಾಗ ಮಾತ್ರ ನೆನಪಾಗುವ ಇವರು ಹಿಂದೂ ಸಮಾಜವನ್ನು ಒಡೆಯುತ್ತಿದ್ದಾರೆ. ನಮಗಿನ್ನೂ ಬುದ್ಧಿ ಬಂದಿಲ್ಲ. ಓರ್ವ ಶೂದ್ರ ವರ್ಗದವನಾಗಿ ಜಾತಿ ಹೆಸರಲ್ಲಿ ಬೇರೆಯಾಗುವುದಕ್ಕೆ ನನಗೆ ನೋವಾಗುತ್ತದೆ. ಕೇಂದ್ರದ ಮಂತ್ರಿಯಾಗಿರುವ ಅನಂತ್ ಕುಮಾರ್ ಹೆಗಡೆ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸ ಮಾಡಬೇಕು. ಆದರೆ ಅವರು ದೇಶಭಕ್ತಿಯ ಹೆಸರಲ್ಲಿ ದ್ವೇಷವನ್ನು ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News