ಪಾಕ್‌ನ ‘ನ್ಯಾಟೋಯೇತರ ಮಿತ್ರ ದೇಶ’ ಸ್ಥಾನಮಾನ ಹಿಂದಕ್ಕೆ ಪಡೆಯಿರಿ

Update: 2017-11-23 16:03 GMT

ವಾಶಿಂಗ್ಟನ್, ನ. 23: ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹಾಗೂ ನಿಷೇಧಿತ ಸಂಘಟನೆ ಜಮಾಅತ್ ಉದ್ ದಾವ ಮುಖ್ಯಸ್ಥ ಹಫೀಝ್ ಸಯೀದ್ ಬಿಡುಗಡೆಗೊಂಡಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನಕ್ಕೆ ನೀಡಿರುವ ‘ಪ್ರಮುಖ ನ್ಯಾಟೋಯೇತರ ಮಿತ್ರದೇಶ’ ಸ್ಥಾನಮಾನವನ್ನು ಹಿಂದಕ್ಕೆ ಪಡೆಯುವಂತೆ ಅಮೆರಿಕದ ಉನ್ನತ ಭಯೋತ್ಪಾದನೆ ನಿಗ್ರಹ ಪರಿಣತರೊಬ್ಬರು ಅಮೆರಿಕ ಸರಕಾರವನ್ನು ಒತ್ತಾಯಿಸಿದ್ದಾರೆ.

ಭಯೋತ್ಪಾದನೆ ಚಟುವಟಿಕೆಗಳಲ್ಲಿ ವಹಿಸಿರುವ ಪಾತ್ರಕ್ಕಾಗಿ ಅಮೆರಿಕ ಸರಕಾರವು ಸಯೀದ್‌ನ ತಲೆಗೆ 10 ಮಿಲಿಯ ಡಾಲರ್ (ಸುಮಾರು 65 ಕೋಟಿ ರೂಪಾಯಿ) ಬಹುಮಾನ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ. ಸಯೀದ್ ಈ ವರ್ಷದ ಜನವರಿಯಿಂದ ಗೃಹ ಬಂಧನದಲ್ಲಿದ್ದನು.

 ‘‘ಮುಂಬೈ ಮೇಲೆ ಭಯೋತ್ಪಾದಕ ದಾಳಿ ನಡೆದು ಒಂಬತ್ತು ವರ್ಷಗಳಾದರೂ, ಅದರ ರೂವಾರಿ ಈಗಲೂ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಂಡಿದ್ದಾನೆ. ಪಾಕಿಸ್ತಾನಕ್ಕೆ ನೀಡಲಾಗಿರುವ ಪ್ರಮುಖ ನ್ಯಾಟೋಯೇತರ ಮಿತ್ರದೇಶ ಸ್ಥಾನಮಾನವನ್ನು ಹಿಂದಕ್ಕೆ ಪಡೆಯಲು ಇದು ಸಕಾಲ’’ ಎಂದು ಭದ್ರತೆ, ದಕ್ಷಿಣ ಏಶ್ಯ ಮತ್ತು ಭಯೋತ್ಪಾದನೆ ನಿಗ್ರಹ ಕುರಿತ ಅಮೆರಿಕನ್ ಪರಿಣತ ಬ್ರೂಸ್ ರೀಡೆಲ್ ಅಭಿಪ್ರಾಯಪಡುತ್ತಾರೆ.

 ‘‘ಒಂದೇ ಮಾತಿನಲ್ಲಿ ಹೇಳುವುದಾದರೆ, ಭಯೋತ್ಪಾದಕನ ಬಿಡುಗಡೆ ಆಘಾತಕಾರಿ. ಇನ್ನು, ಹಫೀಝ್ ಸಯೀದ್ ಸಾವಿರಾರು ಜನರ ರ್ಯಾಲಿಗಳನ್ನು ಉದ್ದೇಶಿಸಿ ಭಾಷಣ ಮಾಡುವ ಸುದ್ದಿಗಳನ್ನು ಕೇಳುವ ದಿನಗಳು ದೂರವಿಲ್ಲ’’ ಎಂದು ವಿದೇಶಾಂಗ ಇಲಾಖೆಯ ಮಾಜಿ ಅಧಿಕಾರಿ ಅಲಿಸಾ ಆಯ್‌ರಸ್ ಹೇಳಿದ್ದಾರೆ.

ಸಯೀದ್ ಘೋಷಿತ ಭಯೋತ್ಪಾದಕ: ಅಮೆರಿಕ

►ಲಷ್ಕರೆ ತಯ್ಯಿಬ ಭಯೋತ್ಪಾದಕ ಸಂಘಟನೆ

ಹಫೀಝ್ ಸಯೀದ್ ಅಮೆರಿಕ ಮತ್ತು ವಿಶ್ವಸಂಸ್ಥೆ ಎರಡರಿಂದಲೂ ಘೋಷಣೆಯಾದ ಭಯೋತ್ಪಾದಕ ನಾಯಕ ಎಂದು ಅಮೆರಿಕ ಬಣ್ಣಿಸಿದೆ.

ಪಾಕಿಸ್ತಾನದ ನ್ಯಾಯಮಂಡಳಿಯೊಂದು ಬುಧವಾರ ಸಯೀದ್‌ನನ್ನು ಬಂಧನದಿಂದ ಬಿಡುಗಡೆಗೊಳಿಸಿದ ಗಂಟೆಗಳ ಬಳಿಕ ಟ್ರಂಪ್ ಆಡಳಿತ ಈ ಪ್ರತಿಕ್ರಿಯೆ ನೀಡಿದೆ.

‘‘ಲಷ್ಕರೆ ತಯ್ಯಿಬ ಮುಖ್ಯಸ್ಥನನ್ನು ಗೃಹ ಬಂಧನದಿಂದ ಬಿಡುಗಡೆ ಮಾಡುವಂತೆ ಪಾಕಿಸ್ತಾನದ ನ್ಯಾಯಾಲಯವೊಂದು ಆದೇಶ ನೀಡಿರುವುದಕ್ಕೆ ಸಂಬಂಧಿಸಿದ ಮಾಧ್ಯಮ ವರದಿಗಳ ಬಗ್ಗೆ ಅಮೆರಿಕಕ್ಕೆ ತಿಳಿದಿದೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರೊಬ್ಬರು ಹೇಳಿದರು.

‘‘ಲಷ್ಕರೆ ತಯ್ಯಿಬವು ವಿದೇಶಿ ಭಯೋತ್ಪಾದಕ ಸಂಘಟನೆಯಾಗಿದ್ದು, ಅದು ಭಯೋತ್ಪಾದಕ ದಾಳಿಗಳ ಮೂಲಕ ನೂರಾರು ಅಮಾಯಕ ಜನರ ಸಾವಿಗೆ ಕಾರಣವಾಗಿದೆ. ಹೀಗೆ ಮೃತಪಟ್ಟವರಲ್ಲಿ ಹಲವಾರು ಅಮೆರಿಕನ್ ಪ್ರಜೆಗಳೂ ಸೇರಿದ್ದಾರೆ’’ ಎಂದು ವಕ್ತಾರರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News