ಶಿವಮೊಗ್ಗ: ವಿದ್ಯಾರ್ಥಿಗೆ ಸಹಪಾಠಿಗಳಿಂದ ಗಂಭೀರ ಹಲ್ಲೆ

Update: 2017-11-23 16:35 GMT

ಶಿವಮೊಗ್ಗ, ನ. 23: ಕಾಲೇಜು ಕ್ಯಾಂಪಸ್‌ನಲ್ಲಿಯೇ ವಿದ್ಯಾರ್ಥಿಯೋರ್ವನ ಮೇಲೆ ಅದೇ ಕಾಲೇಜಿನ ಸಹಪಾಠಿಗಳು ಮನಸೋಇಚ್ಛೆ ಥಳಿಸಿ ಗಾಯಗೊಳಿಸಿರುವ ಘಟನೆ ಅಕ್ಷರ ಕಾಲೇಜ್‌ನಲ್ಲಿ ಗುರವಾರ ನಡೆದಿದೆ.

ಪ್ರಥಮ ಪಿಯುಸಿ ಅಭ್ಯಾಸ ಮಾಡುತ್ತಿರುವ, ನ್ಯೂ ಮಂಡ್ಲಿ ಬಡಾವಣೆಯ ನಿವಾಸಿ ಮುಹಮ್ಮದ್ ಅಯಾನ್ (17) ಹಲ್ಲೆಗೀಡಾದ ವಿದ್ಯಾರ್ಥಿ.

ಹಲ್ಲೆಯಿಂದ ಅಯಾನ್ ಮೂಗಿನ ಮೂಳೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದ್ದು, ರಕ್ತಸ್ರಾವವಾಗಿದೆ. ಅವರನ್ನು ಸರಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಯಾನ್ ಸ್ನೇಹಿತರು ಮಾಹಿತಿ ನೀಡಿದ್ದಾರೆ.

ತನ್ನ ಮೇಲೆ ಹಲ್ಲೆ ನಡೆಸಿದ 10 ಕ್ಕೂ ಅಧಿಕ ಸಹಪಾಠಿಗಳ ವಿರುದ್ಧ ಮೊಹಮ್ಮದ್ ಅಯಾನ್ ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಘಟನೆಯ ವಿವರ: ವಿದ್ಯಾರ್ಥಿ ಮೊಹಮ್ಮದ್ ಅಯಾನ್ ಜೊತೆ ಕೆಲ ಸಹಪಾಠಿಗಳು ಕಳೆದ ಕೆಲ ದಿನಗಳಿಂದ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಗಲಾಟೆ ನಡೆಸುತ್ತಿದ್ದರು. ಕಳೆದ ಒಂದೆರೆಡು ದಿನಗಳ ಹಿಂದಷ್ಟೆ ಈ ವಿದ್ಯಾರ್ಥಿಗಳು ಅಯಾನ್ ಜೊತೆ ಗಲಾಟೆ ಮಾಡಿದ್ದರು ಎನ್ನಲಾಗಿದೆ.

ಈ ಸಂಬಂಧ ಕಾಲೇಜು ಆಡಳಿತ ಮಂಡಳಿಯವರು ಗಲಾಟೆ ನಡೆಸಿದ ವಿದ್ಯಾರ್ಥಿಗಳ ಪೋಷಕರನ್ನು ಕಾಲೇಜ್‌ಗೆ ಕರೆಯಿಸಿ ಮಾಹಿತಿ ನೀಡಿದ್ದರು. ಜತೆಗೆ ಸಂಬಂಧಿಸಿದ ವಿದ್ಯಾರ್ಥಿಗಳಿಂದ ಕ್ಷಮಾಪಣಾ ಪತ್ರಗಳನ್ನು ಕೂಡ ಬರೆಯಿಸಿಕೊಂಡಿದ್ದರು ಎನ್ನಲಾಗಿದೆ.

ಬುಧವಾರ ಮೊಹಮ್ಮದ್ ಅಯಾನ್ ಕಾಲೇಜ್‌ನ ಬೋರ್ಡ್ ಮೇಲೆ ಹಿಂದಿ ಭಾಷೆಯಲ್ಲಿ ಸುಭಾಷಿತವೊಂದನ್ನು ಬರೆದಿದ್ದು, ಇದನ್ನೇ ನೆಪ ಮಾಡಿಕೊಂಡ ಕೆಲ ವಿದ್ಯಾರ್ಥಿಗಳು ಅಯಾನ್ ಜೊತೆ ಜಗಳ ತೆಗೆದಿದ್ದಾರೆ. ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ರಕ್ತಸ್ರಾವವಾಗುವ ರೀತಿಯಲ್ಲಿ ಮನಸೋಇಚ್ಛೆಹಲ್ಲೆ ನಡೆಸಿದ್ದಾರೆ ಎಂದು ಅಯಾನ್‌ನ ಸ್ನೇಹಿತರು ಮಾಹಿತಿ ನೀಡಿದ್ದಾರೆ.

ಬಳಿಕ ಕೆಲ ಸಂಘಟನೆಗಳ ಮುಖಂಡರು ಪೊಲೀಸರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ ನಂತರ ಪೊಲೀಸರು ದೂರು ಸ್ವೀಕರಿಸಿದ್ದಾರೆ. ಇದರ ಆಧಾರದ ಮೇಲೆ ಸುಮಾರು 10 ವಿದ್ಯಾರ್ಥಿಗಳ ವಿರುದ್ಧ ಸಂಜೆ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆಯ ಬಗ್ಗೆ ಇಲ್ಲಿಯವರೆಗೂ ಕಾಲೇಜು ಆಡಳಿತ ಮಂಡಳಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇನ್ನಷ್ಟೆ ಈ ಕುರಿತಂತೆ ಹೇಳಿಕೆ ನೀಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News