ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ(ತಿದ್ದುಪಡಿ)ವಿಧೇಯಕ ಪರಿಷತ್ತಿನಲ್ಲಿ ಅಂಗೀಕಾರ

Update: 2017-11-23 16:53 GMT

ಬೆಳಗಾವಿ, ನ.23: ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ(ತಿದ್ದುಪಡಿ) ವಿಧೇಯಕ-2017ಕ್ಕೆ ವಿಧಾನಪರಿಷತ್ತಿನಲ್ಲಿ ಗುರುವಾರ ಸರ್ವಾನುಮತದ ಅಂಗೀಕಾರ ಲಭಿಸಿತು.

ವಿಧೇಯಕದ ಮೇಲಿನ ಚರ್ಚೆ ಮುಕ್ತಾಯಗೊಂಡ ಬಳಿಕ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್‍ಕುಮಾರ್, ಈ ವಿಧೇಯಕವನ್ನು ಹಲ್ಲಿಲ್ಲದ ಹಾವು ಎಂದು ರಾಮಚಂದ್ರಗೌಡ ಹೇಳಿದ್ದಾರೆ. ಇದು ಹಾವಲ್ಲ, ತಪ್ಪು ಮಾಡಿದವರಿಗೆ ಕಟ್ಟಿ ಹಾಕುವ ಚಿಕ್ಕ ಹಗ್ಗ ಅಷ್ಟೇ ಎಂದು ತಿರುಗೇಟು ನೀಡಿದರು.

"ವ್ಯಾಪಾರಂ ದ್ರೋಹ ಚಿಂತನಂ" ಎನ್ನುತ್ತಾರೆ. ವ್ಯಾಪಾರದ ಮೊದಲ ಆಲೋಚನೆಯೆ ದ್ರೋಹ. ಸರಕಾರಿ ಆಸ್ಪತ್ರೆಗಳನ್ನು ಉನ್ನತೀಕರಿಸಬೇಕಿದೆ. ಈಗಾಗಲೇ, ಡಯಾಲಿಸಿಸ್, ಎಂಆರ್ ಸ್ಕ್ಯಾನಿಂಗ್, ಸಿಟಿ ಸ್ಕ್ಯಾನ್ ಸೌಲಭ್ಯ ಸರಕಾರಿ ಆಸ್ಪತ್ರೆಗಳಲ್ಲಿ ಕಲ್ಪಿಸಲು ಜಾಗತಿಕ ಟೆಂಡರ್ ಅನ್ನು ಕರೆಯಲಾಗಿದೆ ಎಂದು ರಮೇಶ್‍ಕುಮಾರ್ ತಿಳಿಸಿದರು.

ಜನಪ್ರತಿನಿಧಿಗಳು ಸರಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಹೋಗದಿದ್ದರೂ, ಕನಿಷ್ಠ ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೆ ಇಂತಹ ಪರಿಸ್ಥಿತಿ ಇರುತ್ತಿರಲಿಲ್ಲ. ಇಡೀ ದೇಶದಲ್ಲಿ ನಮ್ಮ ರಾಜ್ಯದಲ್ಲಿ ಇರುವಷ್ಟು ವೈದ್ಯಕೀಯ ಕಾಲೇಜುಗಳು ಎಲ್ಲೂ ಇಲ್ಲ ಎಂದರು.

2007ರ ಕಾಯ್ದೆಯಲ್ಲಿ ವೈದ್ಯರಲ್ಲದವರು ನಕಲಿ ಪ್ರಮಾಣಪತ್ರ ಪಡೆದು ಚಿಕಿತ್ಸೆ ನೀಡುವುದು ಕಂಡು ಬಂದರೆ ಅಂತಹವರಿಗೆ ಜೈಲು ಶಿಕ್ಷೆಗೊಳಪಡಿಸಬೇಕು ಎಂಬ ಅಂಶವಿದೆ. ಅದನ್ನು ಮುಂದುವರೆಸುತ್ತೇವೆ. ರೋಗಿಯು ಆಸ್ಪತ್ರೆಯಲ್ಲಿ ಮೃತಪಟ್ಟರೆ ಮೃತದೇಹ  ಹಸ್ತಾಂತರಿಸಲು ಚಿಕಿತ್ಸೆಯ ಬಾಕಿ ಹಣಕ್ಕಾಗಿ ಬೇಡಿಕೆ ಇಡುವಂತಿಲ್ಲ. ಇಡೀ ದೇಶದಲ್ಲಿ ಇಂತಹ ತೀರ್ಮಾನ ಕೈಗೊಂಡ ಮೊದಲ ರಾಜ್ಯ ನಮ್ಮದು ಎಂದು ಹೇಳಿದರು.

ಮನುಷ್ಯನ ಜೀವನದಲ್ಲಿ ಅಳು, ಅಳಲು ಹಾಗೂ ಗೋಳು ಎಂಬ ಹಂತಗಳಿರುತ್ತವೆ. ನಾವು ಈಗ ಗೋಳಿನ ಹಂತಕ್ಕೆ ಬಂದು ತಲುಪಿದ್ದೇವೆ. ಸರಕಾರವು ರಾಜ್ಯದಲ್ಲಿನ 1.43 ಕೋಟಿ ಕುಟುಂಬಗಳ ಎಲ್ಲರಿಗೂ ಆರೋಗ್ಯ ರಕ್ಷಣೆ ಒದಗಿಸಲು ಸಾರ್ವತ್ರಿಕ ಆರೋಗ್ಯ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ರಮೇಶ್‍ಕುಮಾರ್ ನುಡಿದರು.

ಇದಕ್ಕೂ ಮುನ್ನ ವಿಧೇಯಕದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಸದಸ್ಯ ರಾಮಚಂದ್ರಗೌಡ, ಈ ವಿಧೇಯಕವು ಹಲ್ಲಿಲ್ಲದ ನಾಗರಹಾವಿನಂತಾಗಿದೆ. ನಮ್ಮ ರಾಜ್ಯದ ವೈದ್ಯರು ಉತ್ತಮರು. ಸಮಸ್ಯೆಗಳು ಇರುವುದು ವ್ಯಾಪಾರೀಕರಣಕ್ಕೆ ಇಳಿದಿರುವ ಖಾಸಗಿ ಆಸ್ಪತ್ರೆಗಳಲ್ಲಿ. ಆದುದರಿಂದ, ಆಸ್ಪತ್ರೆಗಳ ಆಡಳಿತ ಮಂಡಳಿಗಳ ಮೇಲೆ ಸರಕಾರ ನಿಯಂತ್ರಣ ಹೇರಬೇಕು ಎಂದು ಒತ್ತಾಯಿಸಿದರು.

ಪಕ್ಷೇತರ ಸದಸ್ಯ ಬಸವನಗೌಡ ಪಾಟೀಲ್ ಯತ್ನಾಳ್, ಜನರ ಪ್ರಾಣ ಉಳಿಸಬೇಕಾದವರು ಧನದಾಹಿ, ರಕ್ತದಾಹಿಗಳಾಗಿರುವುದು ಸಮಾಜವೇ ಅಸಹ್ಯಪಡುವಂತಾಗಿದೆ. ಆದರೆ, ಎಲ್ಲ ವೈದ್ಯರನ್ನು ಒಂದೆ ಲೆಕ್ಕದಲ್ಲಿ ಅಳಿಯಲು ಸಾಧ್ಯವಿಲ್ಲ. ಉಚಿತವಾಗಿ ಸೇವೆ ಸಲ್ಲಿಸುವವರು ನಮ್ಮ ನಡುವೆ ಇದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿನ ಸೌಲಭ್ಯಗಳ ಕೊರತೆ, ಸಿಬ್ಬಂದಿಗಳ ವರ್ತನೆ ಭಯಾನಕವಾಗಿದೆ. ಆದುದರಿಂದ, ಜನ ಸರಕಾರಿ ಆಸ್ಪತ್ರೆಗಳ ಬದಲು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ಎಂಬಿಬಿಎಸ್ ಓದಲು 80 ಲಕ್ಷ ರೂ.ಬೇಕು. ಎಂಎಸ್, ಎಂಡಿ ಮಾಡಲು 1-2 ಕೋಟಿ ರೂ.ಬೇಕಾಗುತ್ತದೆ. ಆದುದರಿಂದ, ಸರಕಾರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆಮಾಡಿಕೊಂಡು ಅವರಿಗೆ ವೈದ್ಯಕೀಯ ಶಿಕ್ಷಣ ನೀಡುವ ಮೂಲಕ ವೈದ್ಯರನ್ನು ತಯಾರು ಮಾಡುವ ಅನಿವಾರ್ಯತೆ ಇದೆ. ತಾಂತ್ರಿಕ ಸಿಬ್ಬಂದಿಗಳ ಕೊರತೆಯನ್ನು ಆಸ್ಪತ್ರೆಯಲ್ಲಿ ನೀಗಿಸಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್ ಸದಸ್ಯ ರಮೇಶ್‍ಬಾಬು ಮಾತನಾಡಿ, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಚಿಸಲಾಗುವ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ(ಸದಸ್ಯ ಕಾರ್ಯದರ್ಶಿ), ಜಿಲ್ಲಾ ಆಯುಷ್ ಅಧಿಕಾರಿ, ಭಾರತೀಯ ವೈದ್ಯಕೀಯ ಸಂಘದಿಂದ ಮತ್ತು ಇನ್ನೊಂದು ಇತರ ಸಂಘದಿಂದ ಒಬ್ಬೊಬ್ಬ ಸದಸ್ಯರು ಹಾಗೂ ಒಬ್ಬ ಮಹಿಳಾ ಪ್ರತಿನಿಧಿಯನ್ನು ಸದಸ್ಯರನ್ನಾಗಿ ನೇಮಿಸಲು ಉದ್ದೇಶಿಸಲಾಗಿದೆ. ಇದರ ಜತೆಗೆ ಆಯುಷ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯನ್ನು ಸದಸ್ಯರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಸದಸ್ಯ ವಿ.ಎಸ್.ಉಗ್ರಪ್ಪ ಮಾತನಾಡಿ, ಸಮಾಜಮುಖಿ, ಮಾನವೀಯ ನೆಲೆಯಲ್ಲಿ, ಬಡವರು, ಸಾಮಾನ್ಯ ಜನರಿಗೆ ಆರೋಗ್ಯ ಸೇವೆ ಒದಗಿಸಲು ಈ ತಿದ್ದುಪಡಿ ವಿಧೇಯಕವನ್ನು ತಂದಿರುವುದು ಸ್ವಾಗತಾರ್ಹ. 2007ರಲ್ಲಿ ನಮ್ಮ ರಾಜ್ಯದಲ್ಲಿ ಈ ವಿಧೇಯಕ ಜಾರಿಗೆ ಬಂದ ಬಳಿಕ 2010ರಲ್ಲಿ ಹಿಮಾಚಲಪ್ರದೇಶ, ಅರುಣಾಚಲಪ್ರದೇಶ, ಸಿಕ್ಕಿಂ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಇಂತಹ ಕಾನೂನು ಜಾರಿಗೆ ತರಲಾಯಿತು. ಅದರ ಆಧಾರದ್ಲಲಿ ಅದೇ ಸಾಲಿನಲ್ಲಿ ಕೇಂದ್ರ ಸರಕಾರವು ಕಾನೂನು ಜಾರಿಗೆ ತಂದಿತು ಎಂದು ವಿವರಿಸಿದರು.

ಕಾಂಗ್ರೆಸ್ ಸದಸ್ಯ ಎಸ್.ರವಿ ಮಾತನಾಡಿ, ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಅತೀ ಹೆಚ್ಚು ಖಾಸಗಿ ಆಸ್ಪತ್ರೆಗಳು ಇರುವುದರಿಂದ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಚನೆ ಮಾಡುವ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದಿಂದ ಎಲ್ಲ ಆಸ್ಪತ್ರೆಗಳ ಬಗ್ಗೆ ಗಮನ ಹರಿಸಲು ಕಷ್ಟವಾಗುತ್ತದೆ. ಆದದುದರಿಂದ, ಬೆಂಗಳೂರನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ, ಜಿಲ್ಲಾಧಿಕಾರಿ ದರ್ಜೆಯ ಅಧಿಕಾರಿಗಳನ್ನು ವಿಭಾಗವಾರು ಸಮಿತಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಮನವಿ ಮಾಡಿದರು.

"ನಾನು ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಮಣ್ಣಿನ ಉಂಡೆಯಲ್ಲ, ನೀರಿನ ದಿಕ್ಕನ್ನು ಬದಲಾಯಿಸುವ ಗಟ್ಟಿ ಬಂಡೆ" ಎಂದು ಅಂಬೇಡ್ಕರ್ ಹೇಳುತ್ತಿದ್ದರು. ಅದೇ ರೀತಿ ರಮೇಶ್‍ಕುಮಾರ್ ಹಲವಾರು ಅಡ್ಡಿ ಆತಂಕಗಳ ನಡುವೆಯೂ ಈ ವಿಧೇಯಕವನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಿಜೆಪಿ ಸದಸ್ಯ ಡಿ.ಎಸ್.ವೀರಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ಸದಸ್ಯ ಡಿ.ಎಸ್.ವೀರಯ್ಯ, ಕಾಂಗ್ರೆಸ್ ಸದಸ್ಯರಾದ ಶರಣಪ್ಪ ಮಟ್ಟೂರು, ಮೋಟಮ್ಮ, ರಘು ಆಚಾರ್, ಐವಾನ್ ಡಿ’ಸೋಜಾ, ಬಿಜೆಪಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕೋಟ ಶ್ರೀನಿವಾಸ ಪೂಜಾರಿ, ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ, ಟಿ.ಎ.ಶರವಣ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News