ವಿದ್ಯಾರ್ಥಿನಿಯರನ್ನು ಶಾಲೆಗೆ ಕರೆತರಲು ನೀಡುತ್ತಿದ್ದ ಪ್ರೋತ್ಸಾಹ ಧನ ಸ್ಥಗಿತ: ತನ್ವೀರ್‍ ಸೇಠ್

Update: 2017-11-23 16:58 GMT

ಬೆಳಗಾವಿ, ನ.23: ವಿದ್ಯಾರ್ಥಿನಿಯರನ್ನು ಶಾಲೆಗೆ ಕರೆತರಲು ಪ್ರೋತ್ಸಾಹಿಸಲು ಆರಂಭಿಸಲಾಗಿದ್ದ ಪ್ರತಿದಿನದ ಹಾಜರಾತಿಗೆ 2 ರೂ.ಪ್ರೋತ್ಸಾಹ ಧನವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‍ಸೇಠ್ ತಿಳಿಸಿದ್ದಾರೆ.

ವಿಧಾನಪರಿಷತ್ತಿನ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯೆ ತಾರಾ ಅನುರಾಧಾ ಪ್ರಸ್ತಾಪಿಸಿದ ವಿಷಯಕ್ಕೆ ಲಿಖಿತ ಉತ್ತರ ನೀಡಿರುವ ಅವರು, ಒಂದನೇ ತರಗತಿಯಲ್ಲಿ ಓದುವ ಹೆಣ್ಣುಮಕ್ಕಳಿಗೆ, ಪ್ರತಿದಿನದ ಹಾಜರಾತಿ, ದಾಖಲಾತಿಗೆ ಅನುಗುಣವಾಗಿ ದಿನಕ್ಕೆ ತಲಾ 2 ರೂ.ರಂತೆ ಪ್ರೋತ್ಸಾಹಧನ ವರ್ಷದ ಕೊನೆಯಲ್ಲಿ ಒಟ್ಟಾಗಿ ನೀಡಲಾಗುತ್ತಿತ್ತು ಎಂದು ಹೇಳಿದ್ದಾರೆ.

ಇದರಿಂದ ಒಂದು ಮಗುವಿಗೆ ಗರಿಷ್ಠ 450 ರೂ.ಗಳು ಸಿಗಬಹುದು. ಅದನ್ನು ವರ್ಷಾಂತ್ಯದಲ್ಲಿ ನೀಡುವುದರಿಂದ ಹೆಚ್ಚು ಪ್ರೋತ್ಸಾಹ ನೀಡಿದಂತೆ ಆಗುವುದಿಲ್ಲ. ‘ಗ್ರಾಸ್ ಎನ್ರೋಲ್ಮೆಂಟ್ ರೇಷಿಯೊ’ ಅನ್ವಯ ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಬಾಲಕಿಯರ ದಾಖಲಾತಿ ಪ್ರಮಾಣ ಶೇ.99.42, ಬಾಲಕರ ದಾಖಲಾತಿ ಪ್ರಮಾಣ ಶೇ.99.89 ಇದೆ ಎಂದು ಅವರು ತಿಳಿಸಿದ್ದಾರೆ.

ಹೆಣ್ಣು ಮಕ್ಕಳಿಗೆ ನೀಡುವ ಪ್ರೋತ್ಸಾಹಧನ ಪಾವತಿಸಲು ಎಸ್‍ಡಿಎಂಸಿಗೆ ನೀಡಲಾಗಿತ್ತು. ಆದರೆ, ಅವರಿಂದ ಸರಿಯಾಗಿ ಅನುದಾನ ಬಳಕೆ ವರದಿ ಹಾಗೂ ಈ ಬಗ್ಗೆ ಲೋಕಾಯುಕ್ತದಲ್ಲಿ ದೂರುಗಳು ದಾಖಲಾಗಿದ್ದು, ಇದರ ಪಾರದರ್ಶಕ ನಿರ್ವಹಣೆ ಬಗ್ಗೆ ಕ್ರಮ ಕೈಗೊಳ್ಳುವ ಅವಶ್ಯವಿರುವುದರಿಂದ ಸದ್ಯಕ್ಕೆ ಇದನ್ನು ಸ್ಥಗಿತಗೊಳಿಸಲಾಗಿದೆ ಎಂದು ತನ್ವೀರ್‍ಸೇಠ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News