ಪೊಲೀಸ್ ತನಿಖೆ ತರಬೇತಿಗೆ ವಿವಿ ಮಾದರಿ ಸಂಸ್ಥೆ ಆರಂಭಿಸಲು ಚಿಂತನೆ: ರಾಮಲಿಂಗಾರೆಡ್ಡಿ

Update: 2017-11-23 17:03 GMT

ಬೆಳಗಾವಿ, ನ.23: ಗೃಹ ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡು ಕಾನ್‍ಸ್ಟೇಬಲ್ ದರ್ಜೆಯಿಂದ ಹಿಡಿದು, ಐಪಿಎಸ್ ವೃಂದದ ವರೆಗಿನ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸೈಬರ್ ಕ್ರೈಂ, ಮೊಬೈಲ್ ಫೊರೆನ್ಸಿಕ್, ಗುಪ್ತಚರಣ ಸಂಗ್ರಹಣೆ, ವಿಚಾರಣೆ ತಂತ್ರಗಾರಿಕೆ, ಸಂಚಾರ ನಿರ್ವಹಣೆ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲು ವಿಶ್ವವಿದ್ಯಾನಿಲಯದ ಮಾದರಿಯ ಸಂಸ್ಥೆಯನ್ನು ಆರಂಭಿಸಲು ಚಿಂತನೆ ನಡೆದಿದೆ ಎಂದು ಗೃಹ ಸಚಿವ  ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಗುರುವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ತಾರಾ ಅನುರಾಧಾ ಕೆಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪೊಲೀಸ್ ಇಲಾಖೆಯನ್ನು ಆಧುನಿಕರಣಗೊಳಿಸಲು ಬೆಂಗಳೂರು ನಗರದಲ್ಲಿ ಡಯಲ್-100 ಯೋಜನೆಯನ್ನು ಪರಿಚಯಿಸಲಾಗಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಹಾಗೂ ಮೈಸೂರು ಆಯುಕ್ತಾಲಯ ವ್ಯಾಪ್ತಿಯಲ್ಲಿ ಡಯಲ್ -100 ಸೇವೆಯನ್ನು ಆಧುನಿಕರಣಗೊಳಿಸಲಾಗಿದೆ ಎಂದರು.

ಪೊಲೀಸ್ ಸ್ಪಂದನಾ ಸಮಯದಲ್ಲಿ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ಅಪರಾಧಗಳಿಗೆ ತ್ವರಿತವಾಗಿ ಸ್ಪಂದಿಸಲು ಡೌನಲೋಡ್ ಮಾಡಿಕೊಳ್ಳಬಹುದಾದ ಆ್ಯಪ್‍ಗಳನ್ನು ಪರಿಚಯಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆಧುನಿಕ ತಂತ್ರಜ್ಞಾನ ಅಳವಡಿಕೆಯ ಭಾಗವಾಗಿ 30 ಕೋಟಿ ರೂ.ವೆಚ್ಚದಲ್ಲಿ ಎಫ್ ಎಸ್ ಎಲ್ ಉನ್ನತೀಕರಣಕ್ಕೆ ಹಾಗೂ 80 ಕೋಟಿ ರೂ.ವೆಚ್ಚದಲ್ಲಿ ಕಮಾಂಡ್ ಕಂಟ್ರೋಲ್ ಸ್ಥಾಪನೆಗೆ ಆಡಳಿತಾತ್ಮಕ ಅನಮೋದನೆ ನೀಡಲಾಗಿದ್ದು, ಪ್ರಸ್ತುತ ಒಟ್ಟು 100 ಇನೋವಾ ಮಾದರಿಯ ಹೈವೆ ಪೆಟ್ರೋಲಿಂಗ್ ವಾಹನಗಳು ಆಧುನಿಕ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನಲ್ಲಿ 51 ಮಹಿಳಾ ಸಿಬ್ಬಂದಿ ಸಹಿತ ಪಿಂಕ್ ಹೊಯ್ಸಳ ವಾಹನಗಳ ಸೇರಿ ಒಟ್ಟು 273 ಆಧುನಿಕ ತಂತ್ರಜ್ಞಾನದ ಹೊಯ್ಸಳ ವಾಹನಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಸೈಬರ್ ಕ್ರೈಂ, ಡಿಜಿಟಲ್ ಸಾಕ್ಷ್ಯಾಧಾರಗಳ ವೈಜ್ಞಾನಿಕ ಸಂಗ್ರಹಣೆ, ರಕ್ಷಣೆ ಹಾಗೂ ತನಿಖೆ ಬಗ್ಗೆ ತರಬೇತಿಗೆ 2016-17ನೆ ಸಾಲಿನಲ್ಲಿ 1.5 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಅನುಪಾತವು 632ರಷ್ಟು ಇದ್ದು, ರಾಷ್ಟ್ರೀಯ ಪೊಲೀಸ್ ಆಯೋಗದ ಏಳನೆ ವರದಿ ಅನುಸಾರ ಅಲ್ಪಮಟ್ಟಿನ ಪೊಲೀಸ್ ಸಿಬ್ಬಂದಿ ಕೊರತೆಯಿದೆ. ಅದನ್ನು ತಾತ್ಕಾಲಿಕವಾಗಿ ಲಭ್ಯವಿರುವ 25 ಸಾವಿರ ಗೃಹರಕ್ಷಕರ ನಿಯೋಜನೆ ಸೇವೆಪಡೆದು ಪೊಲೀಸರ ಮೇಲಿರುವ ಹೊರೆ ಕಡಿಮೆ ಮಾಡಲಾಗುತ್ತಿದೆ ಎಂದು ತಿಳಿಸಿದರು. 

ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸುವಾಗ ಸಿಬ್ಬಂದಿಯ ಆರೋಗ್ಯ ಸ್ಥಿತಿ ಪರಿಗಣಿಸಲಾಗುತ್ತಿದೆ. ನೂತನ ತಂತ್ರಜ್ಞಾನಗಳ ಪರಿಚಯ, ವಾಹನಗಳ ಒದಗಿಸುವಿಕೆಯಿಂದ ಅಪರಾಧಗಳ ತಡೆ ಮತ್ತು ಸ್ಥಳಕ್ಕೆ ಭೇಟಿ ನೀಡುವ ಕಾರ್ಯ ಸುಗಮವಾಗಿದೆ. ಸಿಬ್ಬಂದಿ ಒತ್ತಡ ಕಡಿಮೆ ಮಾಡಲು ಆಟೋಟ, ಯೋಗ, ವ್ಯಾಯಾಮ, ಕೌನ್ಸಿಲಿಂಗ್, ತಜ್ಞ ವೈದ್ಯರಿಂದ ಆರೋಗ್ಯ ತಿಳುವಳಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಾನಸಿಕಸ್ಥೈರ್ಯ ಹೆಚ್ಚಿಸಲು ಮನೋವೈಜ್ಞಾನಿಕ ಸಲಹೆ ನೀಡಲು ಸಮಾಲೋಚಕರು ಹಾಗೂ ಹಿರಿಯ ಸಮಾಲೋಚಕರ ಹುದ್ದೆಗಳನ್ನು ಸೃಷ್ಟಿಸಿ ಭರ್ತಿ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ ಎಂದರು.

ನೂತನ ಸಬ್ ಬೀಟ್ ವ್ಯವಸ್ಥೆಯಿಂದ ಸ್ಥಳೀಯ ಜನರು ಮತ್ತು ಪೊಲೀಸ್‍ರ ಸಂಪರ್ಕ ಹೆಚ್ಚಾಗಿದೆ. ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಸಹಕಾರಿಯಾಗಿದೆ ಎಂದು ರಾಮಲಿಂಗಾರೆಡ್ಡಿ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News