ಶಿಕ್ಷಣ ಸಂಸ್ಥೆಗಳ ಸಮಸ್ಯೆ ಬಗೆಹರಿಸಲು ಡಿಸೆಂಬರ್‍ನಲ್ಲಿ ಸಭೆ: ತನ್ವೀರ್‍ ಸೇಠ್

Update: 2017-11-23 17:18 GMT

ಬೆಳಗಾವಿ, ನ.23: ಕರ್ನಾಟಕ ಅದರಲ್ಲೂ ಉತ್ತರ ಕರ್ನಾಟಕದ ಶಿಕ್ಷಣ ಸಂಸ್ಥೆಗಳ ಹಾಗೂ ನೌಕರರ ಸಮಸ್ಯೆಗಳ ಬಗ್ಗೆ ಇದೇ ಡಿಸೆಂಬರ್ ತಿಂಗಳಲ್ಲಿ ಸಭೆ ಕರೆದು ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತೀರ್ಮಾನಿಸಲಾಗುವುದು. ಮುಂಬರುವ ಅಧಿವೇಶನದಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರದ ಸ್ಪಷ್ಟ ನಿಲುವು ದೊರೆಯಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

ಗುರುವಾರ ನಗರದ  ಕೆಎಲ್‍ಇ ಸೆಂಟಿನರಿ ಕನ್ವೆನ್ಷನ್ ಸಭಾಗೃಹದಲ್ಲಿ ಕರ್ನಾಟಕ ಖಾಸಗಿ ಆಡಳಿತ ಮಂಡಳಿಗಳ ಹಾಗೂ ನೌಕರರ ಒಕ್ಕೂಟದ ಸಮಾಲೋಚನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಮಹತ್ವ ಹೆಚ್ಚಾಗಲು ಶಿಕ್ಷಣ ಸಂಸ್ಥೆಗಳು ಒಳ್ಳೆಯ ಉದ್ದೇಶಗಳನ್ನಿಟ್ಟುಕೊಂಡು ಕಾರ್ಯನಿರ್ವಹಿಸಬೇಕು. ಸರಕಾರ ಅನುದಾನ ನೀಡಿದ್ದು, ಸಾರ್ಥಕವಾಗಬೇಕಾದರೆ ಉತ್ತಮ ಫಲಿತಾಂಶ ದೊರೆಯಬೇಕು. ಆಗ ಶಿಕ್ಷಣ ಬಲಿಷ್ಠವಾಗಿ ಬೆಳೆಯಲು ಸಾಧ್ಯ ಎಂದ ಅವರು, ಶಿಕ್ಷಕರು ಒತ್ತಡರಹಿತ ಕಾರ್ಯಚಟುವಟಿಕೆಯಿಂದ ಇರಬೇಕೆಂದು ಸಲಹೆ ನೀಡಿದರು. 

ಒಕ್ಕೂಟವು ಈಗಾಗಲೇ ನೀಡಿದ್ದ ಬೇಡಿಕೆಗಳಿಗೆ ಸರಕಾರ ಸ್ಪಂದಿಸಿದೆ. ಅನುದಾನಿತ ಹಾಗೂ ಅನುದಾನರಹಿತ ಸಿಬ್ಬಂದಿಗೆ ಜ್ಯೋತಿ ಸಂಜೀವಿನಿ ಆರೋಗ್ಯ ವಿಮೆ ಯೋಜನೆ ವಿಸ್ತರಣೆ, ಶಿಕ್ಷಕರಿಗೆ 1995 ರ ನಂತರ ಪ್ರಾರಂಭವಾದ ಅನುದಾನರಹಿತ ಶಾಲಾ-ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವಿಕೆ, ನಿಧನ, ನಿವೃತ್ತಿ, ರಾಜೀನಾಮೆಯಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ, ವಿಜ್ಞಾನ ಉಪನ್ಯಾಸಕರಿಗೆ ಕನಿಷ್ಠ 20 ಗಂಟೆ, ಕಲಾ, ವಾಣಿಜ್ಯ ಹಾಗೂ ಭಾಷಾ ಉಪನ್ಯಾಸಕರಿಗೆ ಕನಿಷ್ಠ 16 ಗಂಟೆ ಕಾರ್ಯಭಾರ ನಿಗದಿ, ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ 160 ವಿದ್ಯಾರ್ಥಿಗಳಿಗೆ ದೈಹಿಕ ಉಪನ್ಯಾಸಕ ಹುದ್ದೆ, ವಿದ್ಯಾರ್ಥಿಗಳ ಅನುಪಾತ 1:50, 2017ರ ವರೆಗೆ ತೆರವಾದ ಹುದ್ದೆ ತುಂಬಲು ಅನುಮತಿಯ ಆದೇಶ ಮಾಡಲಾಗುತ್ತಿದೆ ಎಂದರು.

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಕಲಬುರಗಿ ವಿಶ್ವವಿದ್ಯಾನಿಲಯಕ್ಕೆ ವಿಶ್ವಗುರು ಬಸವೇಶ್ವರರ ಹೆಸರನ್ನು ನಾಮಕರಣ ಮಾಡಲು ತೀರ್ಮಾನ ಕೈಕೊಳ್ಳಲಾಗುವುದು. ಹೈದರಾಬಾದ್-ಕರ್ನಾಟಕ ವಿಭಾಗದಲ್ಲಿ ಶಿಕ್ಷಣದ ಶ್ರೇಣಿ ತೀರ ಕಳಪೆಯಾಗಿದ್ದು, ಒಟ್ಟಾರೆ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಶೇ.28 ರಷ್ಟಿದ್ದು, ಅದನ್ನು ಶೇ.48ಕ್ಕೆ ಹೆಚ್ಚಿಸಲು ಮುಖ್ಯಮಂತ್ರಿಗಳು ಯೋಜನೆ ರೂಪಿಸಲು ಒಪ್ಪಿಗೆ ಸೂಚಿಸಿದ್ದಾರೆ. 1987-1995ರ ವರೆಗಿನ ಸುಮಾರು 89 ಹಾಗೂ 33 ಪಾಲಿಟೆಕ್ನಿಕ್ ಸಂಸ್ಥೆಗಳಿಗೆ ಸರಕಾರ ಅನುದಾನ ನೀಡಲು ತಾತ್ವಿಕೆ ಒಪ್ಪಿಗೆ ನೀಡಿದೆ. ಖಾಸಗಿ ಅನುದಾನಿತ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಪಡೆಯುತ್ತಿರುವ ಡಬಲ್ ಸ್ಟ್ಯಾಂಡರ್ಡ್ ಶುಲ್ಕದಲ್ಲಿ ಅರ್ಧದಷ್ಟು ಹಣವನ್ನು ಆಡಳಿತ ಮಂಡಳಿಯವರು ಸರಕಾರಕ್ಕೆ ನೀಡುತ್ತಿದ್ದು, ಅದನ್ನು ರದ್ದು ಪಡಿಸಲು ಯೋಚಿಸಲಾಗುತ್ತಿದೆ ಎಂದರು.

ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜ್ಯಸಭಾ ಸದಸ್ಯ ಹಾಗೂ ಕೆಎಲ್‍ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಈ ಹಿಂದೆ ಒಕ್ಕೂಟದ ಹಲವಾರು ಸಮಸ್ಯೆಗಳಿಗೆ, ಮುಖ್ಯಮಂತ್ರಿಗಳ ಸಭೆಯಲ್ಲಿ ತಾರ್ಕಿಕ ಪರಿಹಾರಗಳನ್ನು ನೀಡಿದ್ದಕ್ಕಾಗಿ ಸರಕಾರಕ್ಕೆ ಹಾಗೂ ಶಿಕ್ಷಣ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ಗಡಿ ನಾಡಿನಲ್ಲಿ ಕನ್ನಡ ಶಾಲೆಗಳನ್ನು ನಡೆಸುವುದು ಕಷ್ಟವಾಗಿದೆ. ಇಡೀ ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಕಡೆಗಣಿಸಲ್ಪಟ್ಟಿದ್ದು, ದೈಹಿಕ ಶಿಕ್ಷಣ ತರಬೇತಿ ನೀಡುವ ಕೇಂದ್ರಗಳು ಮುಚ್ಚಿವೆ. ಇದರ ಪರಿಣಾಮ ಉತ್ತಮ ಕ್ರೀಡಾ ಸಾಧಕರು ಹೊರ ಹೊಮ್ಮುವುದು ವಿರಳವಾಗುತ್ತಿದೆ. ಕಾರಣ ಸರಕಾರ ಈ ನಿಟ್ಟಿನಲ್ಲಿ ಕಾಳಜಿ ತೋರಬೇಕು. ಶಿಕ್ಷಣ ಸಂಪನ್ಮೂಲಗಳು ಹಾಳಾಗದಂತೆ ಸರಕಾರ ಕೂಡಲೇ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.

ಕರ್ನಾಟಕ ಖಾಸಗಿ ಆಡಳಿತ ಮಂಡಳಿಗಳ ಹಾಗೂ ನೌಕರರ ಒಕ್ಕೂಟದ ಅಧ್ಯಕ್ಷ ಬಸವರಾಜ ಹೊರಟ್ಟಿ ಮಾತನಾಡಿ, ಅನ್ನ ಕೊಟ್ಟ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಕಾರ ಅಗತ್ಯ ಅನುದಾನ ನೀಡಲೇಬೇಕು. ಉತ್ತರ ಕರ್ನಾಟಕದಲ್ಲಿ ಮಠಮಾನ್ಯಗಳು, ಮಿಶನರಿಗಳು ಅನೇಕ ದಶಕದಿಂದ ಶಿಕ್ಷಣ ಪ್ರಸಾರ ಮಾಡುತ್ತ ಅನೇಕ ಬಾಳಿಗೆ ಬೆಳಕಾಗಿವೆ. ಸರಕಾರಿ ಶಾಲೆಗಳಿಗೆ ನೀಡುವ ಸೌಲಭ್ಯ, ಯೋಜನೆಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರಿಗೆ ನೀಡುವುದು ಅತ್ಯಗತ್ಯ ಎಂದರು.

ಇದೇ ಸಂದರ್ಭದಲ್ಲಿ ಒಕ್ಕೂಟದ ಬೇಡಿಕೆಗಳನ್ನು ಈಡೇರಿಸಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಿಕ್ಷ ಣ ಸಚಿವ ತನ್ವೀರ್ ಸೇಠ್ ಅವರನ್ನು ಡಾ.ಪ್ರಭಾಕರ ಕೋರೆ ಸನ್ಮಾನಿಸಿ ಅಭಿನಂದಿಸಿದರು. 

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಹಾಗೂ ಕೆಎಲ್‍ಇ ನಿರ್ದೇಶಕ ಮಹಾಂತೇಶ ಕವಟಗಿಮಠ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಧಾನಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಹನುಮಂತ ನಿರಾಣಿ, ಅರುಣ ಶಹಾಪೂರ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News