ಸಮ್ಮೇಳನದಲ್ಲಿ ಕಾರ್ಯರೂಪಕ್ಕೆ ತರಬಲ್ಲಂತಹ ನಿರ್ಣಯ ಕೈಗೊಳ್ಳಲಾಗುವುದು: ಮನುಬಳಿಗಾರ್

Update: 2017-11-23 18:25 GMT

ಮೈಸೂರು,ನ.22: 83ನೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯರೂಪಕ್ಕೆ ತರಬಲ್ಲಂತಹ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್ ಹೇಳಿದ್ದಾರೆ.

 ನ.24ರಿಂದ 26ರವರೆಗೆ ನಡೆಯಲಿರುವ 83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕಾಗಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಬೃಹತ್ ಸಭಾಂಗಣದಲ್ಲಿ ಬುಧವಾರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರಿನಲ್ಲಿ ನಡೆದ 82ನೆ ಸಮ್ಮೇಳನದಲ್ಲಿ ಕೈಗೊಂಡ 4 ಠರಾವುಗಳು ಶೇ.75ರಷ್ಟು ಅನುಷ್ಠಾನಗೊಂಡಿವೆ. ಈ ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾಧಿಕಾರಿ, ಸಮ್ಮೇಳನದ ಅಧ್ಯಕ್ಷರು ಚರ್ಚಿಸಿ ನಾಡು, ನುಡಿ, ಜನಸೇವೆಯ ನಿಟ್ಟಿನಲ್ಲಿ ಕಾರ್ಯಗತಗೊಳಿಸಬಹುದಾದ ತೀರ್ಮಾನಗಳನ್ನೇ ಕೈಗೊಳ್ಳಲಾಗುವುದು ಎಂದರು.

ಸಮ್ಮೇಳನಕ್ಕೆ ಸಂಬಂಧಿಸಿದಂತೆ ಪರಿಷತ್ತಿನ ಕೇಂದ್ರ ಸಮಿತಿ ಮತ್ತು ಜಿಲ್ಲಾ ಸಮಿತಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅಲ್ಲದೆ, ಸಮ್ಮೇಳನ ನಡೆಸಬಾರದು ಎಂಬುದಾಗಿ ಕೆಲವರು ವಿರೋಧಿಸುತ್ತಿರುವುದು ನಮ್ಮ ಕ್ರಿಯಾಶೀಲತೆಯನ್ನು ಜಾಗೃತಿಗೊಳಿಸಿದೆ ಎಂದು ಹೇಳಿದರು.

83ನೆ ಸಮ್ಮೇಳನದಲ್ಲಿ ಬಹುತೇಕ ಎಲ್ಲ ಕನ್ನಡಿಗರ ಸಂಸ್ಕೃತಿ, ಕಲೆ, ಬದುಕಿನ ಮೇಲೆ ಬೆಳಕು ಚೆಲ್ಲುವಂತಹ ವಿಷಯಗಳನ್ನು ಒಳಗೊಂಡ ಗೋಷ್ಠಿಗಳನ್ನೇ ಆಯೋಜಿಸಲಾಗಿದೆ. ವಿಶೇಷವೆಂದರೆ 14 ವರ್ಷದ ಇಬ್ಬರು ಬಾಲಕಿಯರು ತಮ್ಮ ಸಮಸ್ಯೆಗಳನ್ನು ಕುರಿತು ಮಾತನಾಡಲಿದ್ದಾರೆ. ರಾಯಚೂರಿನಲ್ಲಿ ನಡೆದ ಸಮ್ಮೇಳನದ ಸಭಾಂಗಣದಲ್ಲಿ ಇದ್ದುದಕ್ಕಿಂತ 5000 ಹೆಚ್ಚು ಆಸನಗಳನ್ನು ಇಲ್ಲಿ ಹಾಕಲಾಗಿದೆ ಎಂದು ವಿವರಿಸಿದರು.

30 ಮಂದಿ ಹಿರಿಯ ಸಾಹಿತಿಗಳಿಗೆ ಆಮಂತ್ರಣ ನೀಡಿ ಆಹ್ವಾನಿಸಲಾಗಿದೆ. ಆ ಪೈಕಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ಪ್ರೇಕ್ಷಕರಾಗಿ ಆಗಮಿಸಲು ಸಮ್ಮತಿಸಿದ್ದಾರೆ. ಉಳಿದ 30 ಮಂದಿ ಕೂಡ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಮೂಲಕ ಇದರ ಹಿರಿಮೆ ಹೆಚ್ಚಿಸುವ ನಿರೀಕ್ಷೆ ಇದೆ. ಒಟ್ಟಾರೆ ಅಂದಾಜು 6,000 ಸಾಹಿತಿಗಳು ಭಾಗವಹಿಸಲಿದ್ದಾರೆ. ಇಷ್ಟರ ಮಟ್ಟಿಗೆ 83ನೇ ಸಮ್ಮೇಳನ ಭಿನ್ನವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. 

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಾನ್ಯತೆ ನವೀಕರಣದ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂಬುದಾಗಿ ನೋಂದಣಿ ಸಮಿತಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಮಾಡಿದ ಮನವಿಗೆ ಸ್ಪಂದಿಸಿದ ಅವರು, ಆ ಬಗ್ಗೆ ಅರ್ಜಿ ಬಂದರೆ, ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳುವ ಬಗ್ಗೆ ಚಿಂತಿಸಲಾಗುವುದು. ಅಲ್ಲದೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಸ್ವರೂಪ ಬದಲಾಯಿಸಲು ಪ್ರಯತ್ನ ನಡೆದಿದೆ. ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೂಡ ತೀರ್ಮಾನ ಕೈಗೊಳ್ಳಲು ಚಿಂತಿಸಲಾಗಿದೆ ಎಂದರು.


ಇದೇ ಸಂದರ್ಭದಲ್ಲಿ ನೋಂದಾಯಿಸಿಕೊಂಡಿರುವ ಕೆಲ ಪ್ರತಿನಿಧಿಗಳಿಗೆ ಲೇಖನಿ, ನೋಟ್ ಪುಸ್ತಕ, ಆಹಾರದ ಕೂಪನ್ ಮತ್ತಿತರ ವಸ್ತುಗಳನ್ನು ಒಳಗೊಂಡ ಕಿಟ್ ವಿತರಿಸಲಾಯಿತು. 

ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ತಾವು ಹಾಗೂ ತಮ್ಮ ಪತ್ನಿಯ ಹೆಸರನ್ನೂ ನೋಂದಾಯಿಸಿಕೊಂಡು ಎರಡು ಕಿಟ್‍ಗಳನ್ನು ಸ್ವೀಕರಿಸಿದರು.

ಪ್ರತಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯಿಮಾ ಸುಲ್ತಾನ ನಝೀರ್ ಅಹ್ಮದ್, ಸಮ್ಮೇಳನ ಮೆರವಣಿಗೆ ಸಮಿತಿ ಅಧ್ಯಕ್ಷರೂ ಆದ ಮಹಾಪೌರ ಎಂ.ಜೆ.ರವಿಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕಾರ್ಯದರ್ಶಿ ನಾಗರಾಜು, ಕೋಶಾಧ್ಯಕ್ಷ ರಾಜಶೇಖರ ಕದಂಬ, ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ್, ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ, ಸಮ್ಮೇಳನ ನೋಂದಣಿ ಸಮಿತಿ ಕಾರ್ಯದರ್ಶಿ ಸೋಮಶೇಖರ್, ಸಂಚಾಲಕ ಡಾ.ಎಂ.ಪಿ.ವರ್ಷ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಪಾಲ್ಗೊಳ್ಳಲು ನ.21ರವರೆಗೆ 10,893 ಮಂದಿ ನೋಂದಾಯಿಸಿ ಕೊಂಡಿದ್ದಾರೆ. ಈ ನೋಂದಾವಣೆ ಸಂಖ್ಯೆಯು ಕನ್ನಡ ಸಾಹಿತ್ಯ ಸಮ್ಮೇಳನಗಳ ಇತಿಹಾಸದಲ್ಲಿ ದಾಖಲೆಯಾಗಿದೆ. ರಾಯಚೂರಿನ ಸಮ್ಮೇಳನದಲ್ಲಿ 8,000, ಶ್ರವಣಬೆಳಗೊಳದಲ್ಲಿ ನಡೆದ 81ನೆ ಸಮ್ಮೇಳನದಲ್ಲಿ 10,000 ಮಂದಿ ಮಾತ್ರ ನೋಂದಾಯಿಸಿಕೊಂಡಿದ್ದರು. ನ.24ರಂದು ಸಹ ಸ್ಥಳದಲ್ಲೇ ನೋಂದಣಿ ಮಾಡಲಾಗುವುದು. ಒಟ್ಟಾರೆ 13,000 ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ನೋಂದಣಿ ಕಾರ್ಯದಲ್ಲಿ ಒಟ್ಟು 200 ಸರ್ಕಾರಿ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮ್ಮೇಳನದಲ್ಲಿ ನೋಂದಾಯಿಸಿಕೊಂಡಿರುವ ಸರ್ಕಾರಿ/ ಅರೆ ಸರ್ಕಾರಿ ನೌಕರರಿಗೆ ಅನ್ಯ ಕರ್ತವ್ಯ(ಡೆಪ್ಯುಟೇಷನ್) ಎಂಬುದಾಗ ಪರಿಗಣಿಸಿ, ಹಾಜರಾತಿ ಪತ್ರ ನೀಡಲಾಗುವುದು.
-ಎಚ್.ಎ.ವೆಂಕಟೇಶ್


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News