ನ.29ರಿಂದ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ

Update: 2017-11-23 18:43 GMT

ಮಡಿಕೇರಿ, ನ.23 : ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ವತಿಯಿಂದ ನ.29ರಿಂದ 3 ದಿನಗಳ ಕಾಲ ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ ಎಂಬ ಕೇಂದ್ರ ವಿಷಯದಡಿ ನಡೆಯಲಿರುವ 25ನೆ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಕೊಡಗು ಜಿಲ್ಲೆಯಿಂದ 10 ಜನ ಬಾಲ ವಿಜ್ಞಾನಿಗಳು ಆಯ್ಕೆಯಾಗಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಜಿಲ್ಲಾ ಸಮಿತಿಯ ವತಿಯಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರದ ರೋಟರಿ ಮಿಸ್ಟಿ ಹಿಲ್ಸ್‌ನ ಸಹಯೋಗದೊಂದಿಗೆ ನಗರದ ರೋಟರಿ ಮಕ್ಕಳ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ಕೊಡಗು ಜಿಲ್ಲಾಮಟ್ಟದ 25ನೆ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಉತ್ತಮವಾಗಿ ವೈಜ್ಞಾನಿಕ ಪ್ರಬಂಧ ಮಂಡಿಸಿದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಲಿದ್ದಾರೆ.

ಆರೋಗ್ಯ ಮತ್ತು ಸ್ವಚ್ಛತೆ ಎಂಬ ಉಪ ವಿಷಯದಡಿ ಮಾರ್ಗದರ್ಶಿ ಶಿಕ್ಷಕಿ ಬಿ.ಟಿ.ನೇತ್ರಾವತಿ ಮಾರ್ಗದರ್ಶನದಲ್ಲಿ ‘ಸುಸ್ಥಿರ ಆರೋಗ್ಯಕ್ಕೆ ಔಷಧೀಯ ಸಸ್ಯಗಳು’ ಎಂಬ ಯೋಜನೆ ಸಿದ್ಧಪಡಿಸಿ ಉತ್ತಮವಾಗಿ ವೈಜ್ಞಾನಿಕ ಪ್ರಬಂಧ ಮಂಡಿಸಿದ ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿನಿ ಫಾತಿಮತ್ ಜುಮನಾ ಜಿಲ್ಲಾಮಟ್ಟದ ಬಾಲ ವಿಜ್ಞಾನಿ ಪ್ರಶಸ್ತಿ ಪಡೆಯುವ ಮೂಲಕ ರಾಜ್ಯಮಟ್ಟದ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದ್ದಾರೆ.

ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಆಯ್ಕೆಯಾಗುವ ಮೊದಲು 30 ತಂಡಗಳು ಡಿ.27ರಿಂದ 31ರ ವರೆಗೆ ಗುಜರಾತಿನ ಅಹ್ಮದಾಬಾದ್ ನಗರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಲಿದ್ದಾರೆ ಎಂದು ಸಮಾವೇಶದ ಜಿಲ್ಲಾ ಸಂಯೋಜಕ ಸಿ.ಎಸ್.ಸುರೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News