ಭವಿಷ್ಯನಿಧಿ ನಿವೃತ್ತಿ ವೇತನಕ್ಕೆ ಆಗ್ರಹಿಸಿ ಕಾರ್ಮಿಕರ ಧರಣಿ

Update: 2017-11-23 18:51 GMT

ಶಿವಮೊಗ್ಗ, ನ. 23: ಭವಿಷ್ಯನಿಧಿ ನಿವೃತ್ತಿ ವೇತನ ಹೆಚ್ಚಿಸುವಂತೆ ಆಗ್ರಹಿಸಿ ಭದ್ರಾವತಿ ವಿಐಎಸ್‌ಎಲ್, ಎಂಪಿಎಂ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರವು ಗುರುವಾರ ನಗರದಲ್ಲಿ ಭವಿಷ್ಯ ನಿಧಿ ಕಚೇರಿಯ ಮುಂಭಾಗ ಧರಣಿ ನಡೆಸಿತು. ನಿವೃತ್ತ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಈಗಾಗಲೇ ಕೇಂದ್ರ ಕಾರ್ಮಿಕ ಮಂತ್ರಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಉಚ್ಚ ನ್ಯಾಯಾಲಯದಲ್ಲೂ ಹಲವು ಪ್ರಕರಣಗಳು ದಾಖಲಾಗಿವೆ. ಮಂತ್ರಿಗಳು ಕೋರ್ಟ್ ಆದೇಶವನ್ನು ಜಾರಿಗೆ ತರುವ ಆಶ್ವಾಸನೆ ನೀಡಿದ್ದಾರೆ. ಆದರೆ ಭವಿಷ್ಯ ನಿಧಿ ಕಚೇರಿಯು ಈ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಧರಣಿನಿರತರು ದೂರಿದ್ದಾರೆ.

ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪನ್ನು ನೀಡಿದ್ದು, ಭವಿಷ್ಯನಿಧಿ ಪೆೆನ್ಷನ್‌ದಾರರಿಗೆ ಅವರ ಪೂರ್ಣ ವೇತನದಲ್ಲಿ ಪೆನ್ಷನ್ ನಿಗದಿಪಡಿಸಿ ಹೆಚ್ಚುವರಿ ಪೆನ್ಷನ್ ಬಾಕಿ ನೀಡಬೇಕೆಂದು ತಿಳಿಸಿದೆ.

ಈ ತೀರ್ಪಿನ ಅನ್ವಯ ಬಹುಪಾಲು ಪೆನ್ಪನ್‌ದಾರರಿಗೆ ಕನಿಷ್ಠ 3 ಸಾವಿರ ರೂ.ನಿಂದ 30 ಸಾವಿರದವರೆಗೆ ಪೆನ್ಷನ್ ನಿಗದಿಯಾಗುವ ಸಾಧ್ಯತೆಯಿದೆ. ಈ ಮೊದಲು ಭವಿಷ್ಯ ನಿಧಿ ಕೇಂದ್ರ ಕಚೇರಿ ಹೊರಡಿಸಿದ ಸುತ್ತೋಲೆಯಲ್ಲಿ, ನ್ಯಾಯಾಲಯದ ಆದೇಶವು ಎಲ್ಲ ಪೆನ್ಷನ್‌ದಾರರಿಗೆ ಅನ್ವಯವಾಗುವುದೆಂದು ತಿಳಿಸಿದೆ.

ಆದರೆ ಪುನಃ ವಿಭಾಗೀಯ ಕಚೇರಿಗೆ ಮತ್ತೊಂದು ಸುತ್ತೋಲೆ ಕಳುಹಿಸಿ ವಿನಾಯಿತಿ ಹೊಂದಿದ ಕಾರ್ಖಾನೆಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ತಿಳಿಸಲಾಗಿದೆ. ಆದರೆ ಕೋರ್ಟ್ ಆದೇಶದಲ್ಲಿ ಈ ರೀತಿ ಯಾವುದೇ ಉಲ್ಲೇಖ ಇಲ್ಲ. ಇದರಿಂದಾಗಿ ದೇಶಾದ್ಯಂತ ಸುಮಾರು 10 ಲಕ್ಷ ಪೆನ್ಷನ್‌ದಾರರಿಗೆ ಅನ್ಯಾಯವಾಗಲಿದೆ ಎಂದು ಧರಣಿನಿರತರು ತಿಳಿಸಿದ್ದಾರೆ.

ಭವಿಷ್ಯ ನಿಧಿ ಸಂಸ್ಥೆಯ ಸಭೆಯು ಕೇಂದ್ರ ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಭೆಯಲ್ಲಿ ನಿಶ್ಚಿತ ತೀರ್ಮಾನ ತೆಗೆದುಕೊಂಡು ಕೋರ್ಟ್ ಆದೇಶದ ಜಾರಿಗೆ ಕ್ರಮಕೈಗೊಳ್ಳಬೇಕು. ಕಾರ್ಮಿಕರ ಬೇಡಿಕೆ ಈಡೇರಿಸಲು ಮುಂದಾಗಬೇಕು ಎಂದು ಧರಣಿನಿರತರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News