ಕ್ಯಾನ್ಸರ್ ವಿವಾದ: ಕ್ಷಮೆ ಯಾಚಿಸಿದ ಅಸ್ಸಾಂ ಆರೋಗ್ಯ ಸಚಿವ

Update: 2017-11-24 03:47 GMT

ಗುವಾಹತಿ, ನ.24: ಕ್ಯಾನ್ಸರ್ ಹಿಂದಿನ ಪಾಪದ ಫಲ. ಅದು ದೈವಿಕ ನ್ಯಾಯದ ಪರಿಣಾಮ. ಅದನ್ನು ನಾವು ಅನುಭವಿಸಲೇಬೇಕು ಎಂಬ ಹೇಳಿಕೆ ನೀಡಿ ವಿವಾದಕ್ಕೆ ಸಿಕ್ಕಿಹಾಕಿಕೊಂಡಿದ್ದ ಅಸ್ಸಾಂ ಆರೋಗ್ಯ ಸಚಿವ ಹಿಮಾಂತ ವಿಶ್ವ ಶರ್ಮ ಕೊನೆಗೂ ಕ್ಷಮೆ ಯಾಚಿಸಿದ್ದಾರೆ.

ಈ ಕುರಿತ ವಿವಾದ ಅರ್ಥಹೀನ ಹಾಗೂ ಕೆಲ ರಾಜಕೀಯ ಸಂಚುಕೋರರು ಹುಟ್ಟುಹಾಕಿದ್ದು ಎಂದು ಅವರು ಕಿಡಿ ಕಾರಿದ್ದಾರೆ. ಬಡವರು ಮತ್ತು ಕಾರ್ಮಿಕರ ಪರವಾಗಿ ಕೆಲಸ ಮಾಡುವಂತೆ ಶಿಕ್ಷಕರನ್ನು ಉತ್ತೇಜಿಸುವ ಸಲುವಾಗಿ ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

"ಯಾರೊಂದಿಗೂ ವಾದಕ್ಕೆ ನಿಲ್ಲುವುದಿಲ್ಲ. ಹಿಂದೂ ಸಿದ್ಧಾಂತದ ಬಗ್ಗೆ ಮಾತನಾಡಲು ಸಿಕ್ಕಿದ ಅಲ್ಪ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇನೆ. ಕೃಷ್ಣ ಕೂಡಾ ಕರ್ಮದ ಕೊರತೆಯಿಂದಲೇ ಸತ್ತಿದ್ದಾನೆ. ಇದು ನಮ್ಮ ಸಿದ್ಧಾಂತ" ಎಂದು ಟ್ವೀಟ್ ಮಾಡಿದ್ದರು.

ಆದರೆ ಸಂಜೆ ಲಿಖಿತ ಹೇಳಿಕೆ ನೀಡಿದ ಅವರು, "ದೈವಿಕ ನ್ಯಾಯ ಹಾಗೂ ಕರ್ಮದ ಕೊರತೆ ಕುರಿತ ನನ್ನ ಹೇಳಿಕೆಯನ್ನು ಅಪ್ರಸ್ತುತ ಸನ್ನಿವೇಶದಲ್ಲಿ ಬಳಸಲಾಗಿದೆ. ಇಡೀ ನನ್ನ ಭಾಷಣದ ಅಂಶ ಹಾಗೂ ಉದ್ದೇಶವನ್ನು ಕಡೆಗಣಿಸಲಾಗಿದೆ. ಇದು ಶಾಲಾ ಶಿಕ್ಷಕರು ಬಡವರ ಸೇವೆಗೆ ನಿಲ್ಲಬೇಕು ಎಂದು ಉತ್ತೇಜಿಸುವ ಸಲುವಾಗಿ ನೀಡಿದ ಹೇಳಿಕೆಯೇ ವಿನಃ ಯಾರನ್ನೂ ಅವಮಾನಿಸಲು ಅಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

"ನಾನು ಕೂಡಾ ನನ್ನ ತಂದೆ, ಒಳ್ಳೆಯ ಮಿತ್ರರನ್ನು ಹಾಗೂ ಸಂಬಂಧಿಗಳನ್ನು ಕ್ಯಾನ್ಸರ್ ಕಾರಣದಿಂದ ಕಳೆದುಕೊಂಡಿದ್ದೇನೆ. ಕ್ಯಾನ್ಸರ್ ರೋಗಿಗಳ ಭಾವನೆಗಳಿಗೆ ಧಕ್ಕೆ ತರುವುದು ನನ್ನ ಉದ್ದೇಶವಾಗಿರಲಿಲ್ಲ. ಅವರಿಗೆ ಆಗಿರುವ ನೋವಿಗೆ ಬೇಷರತ್ ಕ್ಷಮೆ ಯಾಚಿಸುತ್ತೇನೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News