150 ವಿದ್ಯಾರ್ಥಿಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುವಂತೆ ಸುಪ್ರೀಂ ಆದೇಶ

Update: 2017-11-24 06:44 GMT

ಹೊಸದಿಲ್ಲಿ, ನ.24: ಅಕ್ರಮ ಮೆಡಿಕಲ್ ಕಾಲೇಜು ಪ್ರವೇಶಾತಿ ಹಗರಣವೊಂದರ ಸಂಬಂಧ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ಲಕ್ನೋ ಮೂಲದ ಕಾಲೇಜೊಂದಕ್ಕೆ ತನ್ನ 150 ವಿದ್ಯಾರ್ಥಿಗಳಿಗೆ ತಲಾ ರೂ.10 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆಯಲ್ಲದೆ, ಈ ಪ್ರವೇಶಾತಿಯನ್ನು ಅನುಮತಿಸಿದ ಅಲಹಾಬಾದ್ ಹೈಕೋರ್ಟನ್ನು ತರಾಟೆಗೆ ತೆಗೆದುಕೊಂಡಿದೆ.

ವಿದ್ಯಾರ್ಥಿಗಳು ಪಾವತಿಸಿದ ಪ್ರವೇಶಾತಿ ಶುಲ್ಕವನ್ನು ಅವರಿಗೆ ಹಿಂದಿರುಗಿಸುವಂತೆ ಹೇಳಿದ ಸುಪ್ರೀಂ ಕೋರ್ಟ್, ನ್ಯಾಯಾಲಯದ ರಿಜಿಸ್ಟ್ರಿಗೆ ರೂ.25 ಲಕ್ಷ ದಂಡ ಪಾವತಿಸುವಂತೆಯೇ ಆದೇಶಿಸಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ನಡೆಸದಂತೆಯೂ ಕಾಲೇಜಿಗೆ ನ್ಯಾಯಾಲಯ ತಡೆ ಹೇರಿದೆ.

ಅಲಹಾಬಾದ್ ಹೈಕೋರ್ಟಿನ ಈ ಹಿಂದಿನ ಆದೇಶವನ್ನು ಟೀಕಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲ್ಕರ್ ಹಾಗೂ ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪೀಠವು ಇದೊಂದು ‘‘ನ್ಯಾಯಾಂಗ ಅಶಿಸ್ತು ಹಾಗೂ ಅನುಚಿತ’’ ಕ್ರಮವಾಗಿದೆ ಎಂದು ಹೇಳಿದೆ.

ಈ ನಿರ್ದಿಷ್ಟ ಕಾಲೇಜಿನಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ಅದಕ್ಕೆ ಕೇಂದ್ರದ ಅನುಮತಿಯಿಲ್ಲದೇ ಇದ್ದರೂ ಅವುಗಳನ್ನು ನಿರ್ಲಕ್ಷ್ಯಿಸಿ ಹೈಕೋರ್ಟ್ ಈ ಹಿಂದೆ ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಮತಿಸಿತ್ತು ಎಂದು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಪರವಾಗಿ ವಾದಿಸಿದ ಹಿರಿಯ ವಕೀಲರಾದ ವಿಕಾಸ್ ಸಿಂಗ್ ಹಾಗೂ ಗೌರವ್ ಶರ್ಮಾ ಹೇಳಿದ್ದರು.

ವೈದ್ಯಕೀಯ ಕಾಲೇಜುಗಳ ಪ್ರವೇಶಾತಿಗಾಗಿ ಅನುಕೂಲಕರ ತೀರ್ಪುಗಳನ್ನು ಪಡೆಯಲು ನ್ಯಾಯಾಧೀಶರು ಹಾಗೂ ದಲ್ಲಾಳಿಗಳ ನಡುವೆ ಹೊಂದಾಣಿಕೆಯಿದೆಯೆಂಬ ಆರೋಪಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟಿನ ಈ ತೀರ್ಪು ಮಹತ್ವ ಪಡೆದಿದೆ.

ಒಡಿಶಾ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಐ.ಎಂ.ಖುದ್ದೂಸಿ ಎಂಬವರನ್ನು ಲಕ್ನೋ ಮೂಲದ ಪ್ರಸಾದ್ ಎಜುಕೇಶನ್ ಟ್ರಸ್ಟ್ ನಡೆಸುವ ಕಾಲೇಜಿನ ಪರವಾಗಿ ಆದೇಶ ಹೊರಬರಲು ಸಂಚು ಹೂಡಿದ ಆರೋಪದ ಮೇಲೆ ಸಿಬಿಐ ಇತ್ತೀಚೆಗೆ ಬಂಧಿಸಿದಾಗ ಅಲಹಾಬಾದ್ ಹೈಕೋರ್ಟ್ ಸುದ್ದಿಯಲ್ಲಿತ್ತು. ಖುದ್ದೂಸಿ ಅವರು ಹಿಂದೆ ಅಲಹಾಬಾದ್ ಹೈಕೋರ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದರೆಂಬುದು ಉಲ್ಲೇಖಾರ್ಹ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News