ಜೈಪುರ ಸಮೀಪದ ಕೋಟೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

Update: 2017-11-24 08:39 GMT

ಜೈಪುರ್,ನ.24 : ಬಾಲಿವುಡ್ ಚಿತ್ರ 'ಪದ್ಮಾವತಿ'ಯ ವಿರುದ್ಧದ ಪ್ರತಿಭಟನೆಗಳು ಶುಕ್ರವಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು ಇಲ್ಲಿಂದ 20 ಕಿ.ಮೀ. ದೂರದ ನಹಾರಘರ್ ಕೋಟೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹವೊಂದು ನೇತಾಡುತ್ತಿರುವುದು ಪತ್ತೆಯಾಗಿದೆ. ಹತ್ತಿರದ ಕಲ್ಲು ಬಂಡೆಗಳಲ್ಲಿ 'ಪದ್ಮಾವತಿ' ವಿರುದ್ಧದ ಘೋಷಣೆಗಳನ್ನು ಗೀಚಲಾಗಿದೆ. 'ಪದ್ಮಾವತಿ ಕಾ ವಿರೋಧ್', 'ಹಮ್ ಪುತ್ಲೆ ನಹೀ ಜಲಾತೆ, ಲಟಕ್‍ತೆ ಹೇ' (ನಾವು ಪ್ರತಿಕೃತಿ ದಹಿಸುವುದಿಲ್ಲ, ಕೊಲ್ಲುತ್ತೇವೆ) ಎಂದು ಬರೆಯಲಾಗಿದೆ. ಬ್ರಹ್ಮಪುರಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬುದು ತಿಳಿದಿಲ್ಲವಾಗಿದ್ದು. ಮೃತ ವ್ಯಕ್ತಿಯನ್ನು ಚೇತನ್ ಎಂದು ಗುರುತಿಸಲಾಗಿದೆ. ಆತನ ಕುತ್ತಿಗೆಯನ್ನು  ಪ್ಲಾಸ್ಟಿಕ್ ಹಗ್ಗದ ಸಹಾಯದಿಂದ ಬಿಗಿಯಲಾಗಿದೆ. ಆತನ ಆಧಾರ್ ಕಾರ್ಡ್ ಕೂಡ ಆತನ ಕಿಸೆಯಲ್ಲಿ ಪತ್ತೆಯಾಗಿದೆ.

ಈ ಘಟನೆಗೂ ತಮ್ಮ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಪದ್ಮಾವತಿ ವಿರುದ್ಧದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವ ರಜಪೂತ ಕರ್ನಿ ಸೇನಾ ಹೇಳಿದೆ. "ಇದು ನಮ್ಮ ಮಾದರಿಯ ಪ್ರತಿಭಟನೆಯಲ್ಲ. ಇಂತಹ ವಿಧಾನಗಳನ್ನು ಅನುಸರಿಸಬೇಡಿ ಎಂದು ಜನರಿಗೆ ಹೇಳ ಬಯಸುತ್ತೇನೆ,'' ಎಂದು ಸೇನಾದ ಸದಸ್ಯ ಮಹಿಪಾಲ್ ಸಿಂಗ್ ಮಕ್ರಾನ ಹೇಳಿದ್ದಾರೆ.  ಶೂರ್ಪನಖಿಯಂತೆ ಚಿತ್ರದ ನಾಯಕ ನಟಿ ದೀಪಿಕಾ ಪಡುಕೋಣೆಯ ಮೂಗು ಕೊಯ್ಯುವುದಾಗಿ ಕಳೆದ ವಾರ ಅವರ ಸಂಘಟನೆ ಬೆದರಿಕೆ ಹಾಕಿತ್ತು.

ಪದ್ಮಾವತಿ ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ ತಜ್ಞ ಸಮಿತಿಯೊಂದನ್ನು ರಚಿಸುವಂತೆ ಮಾಡಿರುವ ಅಪೀಲನ್ನು ದಿಲ್ಲಿ ಹೈಕೋರ್ಟ್ ತಿರಸ್ಕರಿಸಿದೆ. ದಿಲ್ಲಿಯಲ್ಲಿ ಕೂಡ  ಕರ್ನಿ ಸೇನಾದ ಸದಸ್ಯರು ಭನ್ಸಾಲಿಯ ಪ್ರತಿಕೃತಿಯನ್ನು ದಹಿಸಿ ತಮ್ಮ ಪ್ರತಿಭಟನೆ ವ್ಯಕ್ತ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News