ಬಿಲ್ಕಿಸ್ ಬಾನೊ ಪ್ರಕರಣ: ಗುಜರಾತ್ ಸರಕಾರಕ್ಕೆ ಕಾಲಾವಕಾಶ ನೀಡಿದ ಸುಪ್ರೀಂ

Update: 2017-11-24 16:50 GMT

ಹೊಸದಿಲ್ಲಿ, ನ.24: 2002ರ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ದೋಷಿಗಳಾಗಿರುವ ಪೊಲೀಸರ ವಿರುದ್ಧ ಕೈಗೊಂಡಿರುವ ಶಿಸ್ತುಕ್ರಮದ ಮಾಹಿತಿಯನ್ನು ಒದಗಿಸಲು ಗುಜರಾತ್ ಸರಕಾರಕ್ಕೆ ಸುಪ್ರೀಂಕೋರ್ಟ್ 6 ವಾರಗಳ ಕಾಲಾವಕಾಶ ನೀಡಿದೆ.

ಮಾಹಿತಿ ನೀಡಲು ಇನ್ನಷ್ಟು ಸಮಯಾವಕಾಶ ನೀಡಬೇಕೆಂದು ರಾಜ್ಯ ಸರಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸಲ್ಲಿಸಿದ್ದ ಮನವಿಯನ್ನು  ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಹಾಗೂ ಡಿ.ವೈ.ಚಂದ್ರಚೂಡ್ ಅವರಿದ್ದ ನ್ಯಾಯಪೀಠವು ಪುರಸ್ಕರಿಸಿದ್ದು ಜನವರಿ ಪ್ರಥಮ ವಾರದಲ್ಲಿ ಪ್ರಕರಣದ ವಿಚಾರಣೆಯನ್ನು ನಿಗದಿಗೊಳಿಸಿತು.

ಆದರೆ ಬಿಲ್ಕಿಸ್ ಬಾನೊಗೆ ನೀಡಲಾಗುವ ಪರಿಹಾರ ಧನವನ್ನು ಹೆಚ್ಚಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಪ್ರತ್ಯೇಕ ಅರ್ಜಿಯನ್ನು ಮುಂದಿನ ವಾರ ವಿಚಾರಣೆಗೆ ಎತ್ತಿಕೊಳ್ಳಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ.

 ಪ್ರಕರಣದಲ್ಲಿ 12 ಮಂದಿಯ ಮೇಲಿನ ದೋಷಾರೋಪಣೆಯನ್ನು ಹಾಗೂ ಅವರಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಮೇ 4ರಂದು ಎತ್ತಿಹಿಡಿದಿತ್ತು ಹಾಗೂ ಪೊಲೀಸರು ಹಾಗೂ ವೈದ್ಯರನ್ನು ಖುಲಾಸೆಗೊಳಿಸಿದ ಕ್ರಮವನ್ನು ರದ್ದುಗೊಳಿಸಿತ್ತು.

   ಪ್ರಕರಣದಲ್ಲಿ ದೋಷಿಗಳೆಂದು ಗುರುತಿಸಲಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಲು ಅ.23ರಂದು ಸುಪ್ರೀಂಕೋರ್ಟ್ ರಾಜ್ಯ ಸರಕಾರಕ್ಕೆ ಕಾಲಾವಕಾಶ ನೀಡಿತ್ತು.

  2002ರ ಮಾರ್ಚ್‌ನಲ್ಲಿ ಗೋಧ್ರಾ ಗಲಭೆಯ ಬಳಿಕ ನಡೆದ ಹಿಂಸಾಚಾರದ ಸಂದರ್ಭ, ಬಿಲ್ಕಿಸ್ ಬಾನೊರ (ಆಗ ಗರ್ಭಿಣಿಯಾಗಿದ್ದರು) ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಐವರು ಪೊಲೀಸ್ ಅಧಿಕಾರಿಗಳು ಹಾಗೂ ಇಬ್ಬರು ವೈದ್ಯರನ್ನು ಕರ್ತವ್ಯಲೋಪ ಎಸಗಿದ ಕಾರಣಕ್ಕೆ ದೋಷಿಗಳೆಂದು ನ್ಯಾಯಪೀಠ ತೀರ್ಪು ನೀಡಿತ್ತು. 2008ರ ಜನವರಿ 21ರಂದು ವಿಶೇಷ ನ್ಯಾಯಾಲಯವೊಂದು 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News