ಮೊಟ್ಟೆ ನಿಜವಾಗಿಯೂ ಮಾಂಸಾಹಾರವೇ?

Update: 2017-11-24 18:45 GMT

ಸಸ್ಯಾಹಾರಕ್ಕೆ ಭಾರತದ ಅತ್ಯಂತ ಪ್ರಸಿದ್ಧ ರಾಯಭಾರಿಯಾಗಿರುವ ಮಹಾತ್ಮಾ ಗಾಂಧಿ ಈ ವಿಷಯದಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಶುದ್ಧ ಸಸ್ಯಾಹಾರಿ ಆಹಾರ ಪದ್ಧತಿಯಲ್ಲಿ ಮೊಟ್ಟೆ ಮತ್ತು ಹಾಲು ಎರಡನ್ನೂ ಸೇರಿಸುವಂತಿಲ್ಲ ಎಂದು ಗಾಂಧಿ ತಿಳಿಸಿದ್ದರು. ಹಾಲು ಪಶುಗಳಿಂದ ಪಡೆಯುವ ಉತ್ಪನ್ನವಾಗಿದ್ದು ಯಾವುದೇ ಕಾರಣಕ್ಕೂ ಅದನ್ನು ಶುದ್ಧ ಸಸ್ಯಾಹಾರ ಆಹಾರ ಪದ್ಧತಿಯಲ್ಲಿ ಸೇರಿಸುವಂತಿಲ್ಲ ಎಂದು ಗಾಂಧಿ ‘ಸಸ್ಯಾಹಾರಕ್ಕೆ ನೈತಿಕ ಆಧಾರ’ ಎಂಬ ಕಿರುಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಇನ್ನೊಂದೆಡೆ ಮೊಟ್ಟೆಯನ್ನು ಸಾಮಾನ್ಯ ಜನರು ಮಾಂಸಾಹಾರ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಅದು ಮಾಂಸಾಹಾರವಲ್ಲ. ಇತ್ತೀಚಿನ ದಿನಗಳಲ್ಲಿ ಸಂಶ್ಲೇಷಿತ (ಸ್ಟೆರೈಲ್) ಮೊಟ್ಟೆಗಳನ್ನು ತಯಾರಿಸುತ್ತಾರೆ. ಇದರಲ್ಲಿ ಹೇಂಟೆಯು ಹುಂಜದ ಜೊತೆ ಸೇರುವುದೇ ಇಲ್ಲ ಆದರೂ ಮೊಟ್ಟೆಯಿಡುತ್ತದೆ. ಈ ಮೊಟ್ಟೆಗಳಿಂದ ಎಂದೂ ಮರಿ ಹುಟ್ಟುವುದಿಲ್ಲ. ಹಾಗಾಗಿ ಹಾಲು ಕುಡಿಯುವ ಸಸ್ಯಾಹಾರಿಗಳಿಗೆ ಸಂಶ್ಲೇಷಿತ ಮೊಟ್ಟೆಗಳನ್ನು ತಿನ್ನಲು ವಿರೋಧವಿರಬಾರದು.

ಗಾಂಧಿ ಮೊಟ್ಟೆ ಹಾಗೂ ಹಾಲನ್ನು ತ್ಯಜಿಸುವ ತಮ್ಮ ಪ್ರಯತ್ನವನ್ನು ವಿವರಿಸುತ್ತಾ ಆರೋಗ್ಯ ಸಮಸ್ಯೆಯ ಕಾರಣದಿಂದ ಅದು ಸಫಲವಾಗಲಿಲ್ಲ ಎಂದು ಹೇಳುತ್ತಾರೆ. ಜಗತ್ತಿನ ಯಾವುದಾದರೂ ಒಂದು ಭಾಗದಲ್ಲಿ ಹಾಲಿಗೆ ಪರ್ಯಾಯವಾದ ಸಸ್ಯಾಹಾರ ಇರಬಹುದು ಎಂಬ ನಂಬಿಕೆಯಿಂದಲೇ ಅವರು ಆಡಿನ ಹಾಲನ್ನು ಸೇವಿಸಲು ಆರಂಭಿಸಿದರು. ಆದರೆ ಅವರು ಮೊಟ್ಟೆ ಮತ್ತು ಹಾಲು ಎರಡೂ ಒಂದೇ ಎಂದು ಪರಿಗಣಿಸಿದ್ದರು. ಭಾರತದ ನಾಲ್ಕನೆ ಒಂದರಷ್ಟು ಸಸ್ಯಾಹಾರ ಸೇವಿಸುವ ಜನಸಂಖ್ಯೆ ತಮ್ಮನ್ನು ಮೊಟ್ಟೆಹಾರಿಗಳೆಂದು ಕರೆಸಿಕೊಳ್ಳುತ್ತವೆ.

ಹಿಂದೂ-ಸಿಎನ್‌ಎನ್-ಐಬಿಎನ್ 2012ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ 31 ಭಾರತೀಯರು ತಮ್ಮನ್ನು ಸಸ್ಯಾಹಾರಿಗಳೆಂದು ಕರೆದರೆ ಶೇ. 9 ಜನರು ಮೊಟ್ಟೆಹಾರಿಗಳು ಅಂದರೆ ಮೊಟ್ಟೆ ತಿನ್ನುವ ಸಸ್ಯಾಹಾರಿಗಳು ಎಂದು ಕರೆಸಿಕೊಳ್ಳುತ್ತಾರೆ ಎಂದು ತಿಳಿಸಿತ್ತು. ಇವರನ್ನು ಜಗತ್ತಿನಾದ್ಯಂತ ಒವೊ-ಲ್ಯಾಕ್ಟೊ ಎಂದು ಕರೆಯುತ್ತಾರೆ. ಇವರ ಪ್ರಮಾಣವು ಅತ್ಯಂತ ಅಧಿಕವಾಗಿದ್ದು ವಿದೇಶಗಳಲ್ಲಿ ತಮ್ಮನ್ನು ಸಸ್ಯಾಹಾರಿಗಳೆಂದು ಕರೆಸಿಕೊಳ್ಳುವ ಜನರಲ್ಲಿ ಇವರೇ ಬಹುಸಂಖ್ಯಾತರಾಗಿದ್ದಾರೆ. ಪಶುಗಳಿಂದ ಪಡೆಯಲಾಗುವ ಎಲ್ಲಾ ಆಹಾರಗಳನ್ನು ತ್ಯಜಿಸಿದವರನ್ನು ವೇಗನ್ಸ್‌ಗಳೆಂದು ಕರೆಯಲಾಗುತ್ತದೆ. ಇವರು ಮೊಟ್ಟೆ ಮತ್ತು ಹಾಲನ್ನು ಕೂಡಾ ತ್ಯಜಿಸಿರುತ್ತಾರೆ.

ಆದರೆ ಭಾರತದಲ್ಲಿ ಇದನ್ನು ಬಹಳಷ್ಟು ಮಂದಿ ಒಪ್ಪುವುದಿಲ್ಲ. ಮೊಟ್ಟೆಯನ್ನು ನಿಷೇಧಿಸುವುದೆಂದರೆ ಭಾರತದ ಸಸ್ಯಾಹಾರಿಗಳಿಗೊಂದು ಭಾವನಾತ್ಮಕ ವಿಷಯ. ಜೈನ ಸಮಿತಿಯ ವಕ್ತಾರರು ಹೇಳುವಂತೆ ಮಧ್ಯಪ್ರದೇಶ ಸರಕಾರದ ನಡೆ ಮಕ್ಕಳಲ್ಲಿ ಸೂಕ್ಷ್ಮತೆಯನ್ನು ಕಡಿಮೆ ಮಾಡುತ್ತದೆ. ಜಾತಿಯಾಧಾರದ ಮೇಲೆ ಅವಲಂಬಿತವಾಗಿರುವ ಈ ಮನೋಭಾವವು ಪ್ರಮುಖವಾಗಿ ಉತ್ತರ ಮತ್ತು ಪೂರ್ವ ಭಾರತದಲ್ಲಿ ಕಾಣಸಿಗುತ್ತದೆ. ನಿರಂತರವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ದೇಶದಲ್ಲಿ ಶಾಲಾ ಬಿಸಿಯೂಟದಲ್ಲೂ ಮೊಟ್ಟೆಯನ್ನು ನೀಡಲು ನಿರಾಕರಿಸುವ ಮೂಲಕ ಅತೀಹೆಚ್ಚು ಪ್ರೊಟೀನ್‌ನ ಅಗತ್ಯವಿರುವ ಮಕ್ಕಳಿಗೆ ಅದು ದೊರೆಯದಂತೆ ತಡೆಯಲಾಗುತ್ತಿದೆ.

Writer - ಎಸ್.ಎಂ.

contributor

Editor - ಎಸ್.ಎಂ.

contributor

Similar News