ಹಿಂಸಾತ್ಮಕ ಬೆದರಿಕೆಗಳು ಸ್ವೀಕಾರಾರ್ಹವಲ್ಲ : ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

Update: 2017-11-25 12:09 GMT

ಹೊಸದಿಲ್ಲಿ,ನ.25 : ಹಿಂಸಾತ್ಮಕ ಬೆದರಿಕೆಗಳು ಹಾಗೂ ಇತರರಿಗೆ ತೊಂದರೆಯುಂಟು ಮಾಡುವವರಿಗೆ ಬಹುಮಾನಗಳನ್ನು ಘೋಷಿಸುವುದು ಪ್ರಜಾಪ್ರಭುತ್ವ ದೇಶವೊಂದರಲ್ಲಿ ಸ್ವೀಕಾರಾರ್ಹವಲ್ಲ, ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಬಾಲಿವುಡ್ ಚಿತ್ರ `ಪದ್ಮಾವತಿ' ಬಿಡುಗಡೆ ವಿರೋಧಿಸಿ  ನೀಡಲಾಗಿರುವ ಬೆದರಿಕೆಗಳು ಹಾಗೂ ನಡೆಸಲಾಗುತ್ತಿರುವ ಪ್ರತಿಭಟನೆಯ ನಡುವೆಯೇ ಉಪರಾಷ್ಟ್ರಪತಿಯ ಹೇಳಿಕೆ ಬಂದಿದೆ.

ಸಾಹಿತ್ಯೋತ್ಸವವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಮ್ಮ ಭಾಷಣದಲ್ಲಿ  'ಪದ್ಮಾವತಿ'ಯ ಹೆಸರನ್ನು ಉಲ್ಲೇಖಿಸದೇ ಇದ್ದರೂ ಚಲನಚಿತ್ರ ಮತ್ತು ಕಲಾ ಕ್ಷೇತ್ರಗಳ ಬಗ್ಗೆ ಉಲ್ಲೇಖಿಸಿ ದೇಶದ ಕಾನೂನನ್ನು ಮೀರುವವರಿಗೆ ಎಚ್ಚರಿಕೆ ನೀಡಿದ್ದಾರೆ.

"ಕೆಲವು ಚಲನಚಿತ್ರಗಳ ವಿಚಾರದಲ್ಲಿ ಹೊಸ ಸಮಸ್ಯೆಯೊಂದು ಸೃಷ್ಟಿಯಾಗಿದೆ. ಈ ಚಿತ್ರಗಳು ಕೆಲವು ಧರ್ಮಗಳ ಅಥವಾ ಸಮುದಾಯಗಳ ಭಾವನೆಗಳನ್ನು ಘಾಸಿಗೊಳಿಸಿವೆಯೆಂಬ ನೆಪದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇದು ಪ್ರಜಾಪ್ರಭುತ್ವದಲ್ಲಿ ಸ್ವೀಕಾರಾರ್ಹವಲ್ಲ. ಪ್ರಜಾಪ್ರಭುತ್ವ ಮಾದರಿಯಲ್ಲಿ ಪ್ರತಿಭಟಿಸುವ ಹಕ್ಕು ನಿಮಗಿದೆ. ಸಂಬಂಧಿತ ಪ್ರಾಧಿಕಾರಗಳ ಬಳಿ ಹೋಗಿ ಆದರೆ ಅಡ್ಡಿಯುಂಟು ಮಾಡುವುದು ಹಾಗೂ ಹಿಂಸಾತ್ಮಕ ಬೆದರಿಕೆಗಳು ಸರಿಯಲ್ಲ,'' ಎಂದು ಉಪರಾಷ್ಟ್ರಪತಿ ಹೇಳಿದ್ದಾರೆ.

ತಾನು ಯಾವುದೇ ಒಂದು  ಚಲನಚಿತ್ರದ ಬಗ್ಗೆ ಹೇಳುತ್ತಿಲ್ಲ ಎಂದು ಒತ್ತಿ ಹೇಳಿದ ನಾಯ್ಡು ಈ ಹಿಂದೆ ನಿಷೇಧಿಸಲ್ಪಟ್ಟ ಕೆಲವೊಂದು ಚಿತ್ರಗಳ ಹೆಸರುಗಳನ್ನು ಉಲ್ಲೇಖಿಸಿದ್ದಾರೆ.

"ಯಾರಿಗೂ ಕಾನೂನನ್ನು ಕೈಗೆತ್ತಿಕೊಳ್ಳುವ ಹಕ್ಕಿಲ್ಲ, ಅದೇ ಸಮಯ  ಇತರರ ಭಾವನೆಗಳಿಗೆ ನೋವುಂಟು ಮಾಡುವ ಹಕ್ಕೂ ಇಲ್ಲ,'' ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News