ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಗ್ರಾಹಕರಿಗೆ ಎಟಿಎಂ ಕಾಟ

Update: 2017-11-27 05:07 GMT

ಈ ‘ಮೇರಾ ಭಾರತ್ ಮಹಾನ್’ ನಲ್ಲಿ ಯಾವಾಗಲೂ ಆಗುವ ಹಾಗೆಯೇ, ಎಲ್ಲ ನಾವೀನ್ಯಗಳೂ ದಿನಕಳೆದಂತೆ, ಸರಕಾರಗಳ ಹಾಗೂ ಸಂಬಂಧಿತ ಸಂಸ್ಥೆಗಳ ಔದಾಸೀನ್ಯಕ್ಕೆ, ಏನು ಮಾಡಿದರೂ ತಿಂಗಳ ಒಂದನೇ ತಾರೀಕಿನಂದು ವೇತನ ಕೈಗೆ ಬರುತ್ತದೆಂಬ ಧೈರ್ಯವಿರುವ ಸಿಬ್ಬಂದಿಯ ಬೇಜವಾಬ್ದಾರಿತನಕ್ಕೆ ಬಲಿಯಾಗಿ ಸವಲತ್ತಿಗಾಗಿ ಬಂದ ಒಂದು ವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸುವ ಒಂದು ಸಂಸ್ಥೆಯಾಗಿದೆ.

ಜಾಗತೀಕರಣ ಮತ್ತು ಉದಾರೀಕರಣದ ಫಲವಾಗಿ ಆರ್ಥಿಕ, ಸಾಮಾಜಿಕ ರಂಗಗಳಲ್ಲಿ ಭಾರೀ ಬದಲಾವಣೆಗಳಾದವು. ಜನಸಾಮಾನ್ಯರ ಅನುಕೂಲ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ, ಆಧುನಿಕ ತಂತ್ರಜ್ಞಾನದ ಕೊಡುಗೆ ಗಳಾದ ಎಟಿಎಂ ಯಂತ್ರಗಳು, ಕ್ಯಾಶ್ ಡಿಪಾಸಿಟ್ ಕಿಯೊಸ್ಕ್‌ಗಳು, ಪಾಸ್‌ಬುಕ್ ಎಂಟ್ರಿಗಳನ್ನು ಮಾಡಿಕೊಡುವ ಯಂತ್ರಗಳು ಬಳಕೆಗೆ ಬಂದವು. ಮೂರು ದಶಕಗಳ ಹಿಂದೆ ಇಂಗ್ಲೆಡಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಸ್ಕಾಟ್ಲಂಡಿನ ರಾಜಧಾನಿ ಎಡಿಬರೋ ನಗರದ ಬೀದಿಬದಿಯ ಎಟಿಎಂ ಯಂತ್ರದಲ್ಲಿ ಇಪ್ಪತ್ತು ಪೌಂಡ್‌ಗಳ ನಗದು ಪಡೆದಾಗ, ‘‘ಬ್ಯಾಂಕ್ ಇಲ್ಲ, ಕ್ಯಾಶಿಯರ್ ಇಲ್ಲ; ಆದರೂ ಬೇಕೆಂದಾಗ ದಿನದ 24ಗಂಟೆಗಳ ಕಾಲವೂ ಕ್ಯಾಶ್ ಕೊಡುವ ಇದು ಎಂತಹ ಮ್ಯಾಜಿಕ್!’’ ಎಂದು ಆಶ್ಚರ್ಯಪಟ್ಟಿದ್ದ ನನಗೆ, ಮುಂದಿನ ಎರಡು ದಶಕಗಳಲ್ಲಿ ನನ್ನ ದೇಶದ ಗಲ್ಲಿಗಲ್ಲಿಗಳಲ್ಲಿ ಅಂತಹದೇ ಸವಲತ್ತು ಸಿಕ್ಕಿತು ಎಂದು ಊಹಿಸುವುದೂ ಸಾಧ್ಯವಿರಲಿಲ್ಲ. ಆದರೆ ಆ ಊಹೆ ನಿಜವಾಗಿ, ಈಗಾಗಲೇ ಹಲವು ವರ್ಷಗಳು ಕಳೆದಿವೆ. ಇವತ್ತು ಭಾರತದ ಹಳ್ಳಿ ಹಳ್ಳಿಗಳಲ್ಲೂ ಎಟಿಎಂ ಯಂತ್ರಗಳು, ತಮ್ಮ ಖಾತೆಯಲ್ಲಿ ನಗದು ಇಟ್ಟುಕೊಂಡಿರುವ ಗ್ರಾಹಕರಿಗೆ, ಎಣಿಸಿದಾಗ ಹಣನೀಡುವ ಮರಿ ಕ್ಯಾಶ್‌ಗಣಿಗಳಾಗಿ ನಿಂತಿವೆ. ಆದರೆ ಈ ‘ಮೇರಾ ಭಾರತ್ ಮಹಾನ್’ ನಲ್ಲಿ ಯಾವಾಗಲೂ ಆಗುವ ಹಾಗೆಯೇ, ಎಲ್ಲ ನಾವೀನ್ಯಗಳೂ ದಿನಕಳೆದಂತೆ, ಸರಕಾರಗಳ ಹಾಗೂ ಸಂಬಂಧಿತ ಸಂಸ್ಥೆಗಳ ಔದಾಸೀನ್ಯಕ್ಕೆ, ಏನು ಮಾಡಿದರೂ ತಿಂಗಳ ಒಂದನೇ ತಾರೀಕಿನಂದು ವೇತನ ಕೈಗೆ ಬರುತ್ತದೆಂಬ ಧೈರ್ಯವಿರುವ ಸಿಬ್ಬಂದಿಯ ಬೇಜವಾಬ್ದಾರಿತನಕ್ಕೆ ಬಲಿಯಾಗಿ ಸವಲತ್ತಿಗಾಗಿ ಬಂದ ಒಂದು ವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸುವ ಒಂದು ಸಂಸ್ಥೆಯಾಗಿದೆ.

ನನ್ನ ಇತ್ತೀಚಿನ ಒಂದು ಅನುಭವವನ್ನು ಇಲ್ಲಿ ಓದುಗರೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಕಳೆದ ಸೆಪ್ಟಂಬರ್ ತಿಂಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಒಂದರ ನನ್ನ ಎಟಿಎಂ ಕಾರ್ಡ್ (ಡೆಬಿಟ್ ಕಾರ್ಡ್) ನಿಧನ ಹೊಂದಿತು, ಯಾನೆ ಅದರ ವ್ಯಾಲಿಡಿಟಿ ಮುಗಿದುಹೋಯಿತು. ಸರಿ, ಹೊಸ ಕಾರ್ಡಿಗಾಗಿ ಅರ್ಜಿ ಗುಜರಾಯಿಸಬೇಕು ತಾನೆ? ವಾಸಸ್ಥಳದಿಂದ 40ಕಿಮೀ. ದೂರದಲ್ಲಿರುವ ಆ ಬ್ಯಾಂಕಿನ ಶಾಖೆಗೆ ಹೋಗಿ ಅಕ್ಟೋಬರ್ 27ರಂದು ಬ್ಯಾಂಕಿನ ಒಂದು ಅರ್ಜಿ ನಮೂನೆ ಪಡೆದು ಅದನ್ನು ತುಂಬಿ ಬ್ಯಾಂಕಿನ ಸಂಬಂಧಿತ ಕೌಂಟರ್‌ನಲ್ಲಿ ಕೊಟ್ಟೆ.‘‘ಇನ್ನು ಹದಿನೈದು ದಿನಗಳೊಳಗಾಗಿ ನಿಮ್ಮ ವಿಳಾಸಕ್ಕೆ ಕಾರ್ಡ್, ಅಂಚೆಮೂಲಕ ಬರುತ್ತದೆ. ನೀವು ಡೆಬಿಟ್ ಕಾರ್ಡ್ ಪಡೆಯುವುದಕ್ಕಾಗಿ ಇಲ್ಲಿಗೆ ಬರಬೇಕಾಗಿಲ್ಲ’ ಎಂದು ನನಗೆ ಹೇಳಾಲಾಯಿತು.

ಆದರೆ ನಾಲ್ಕೇ ದಿನಗಳಲ್ಲಿ ಸ್ಪೀಡ್‌ಪೋಸ್ಟ್‌ಮೂಲಕ ಕಾರ್ಡ್ ಬಂತು. ಸರಕಾರಿ ಸಂಸ್ಥೆಯಲ್ಲಿ ಇಷ್ಟೊಂದು ತ್ವರಿತಸೇವೆ ಸಿಗುತ್ತದಲ್ಲ! ಎಂಬ ಖುಷಿಯಿಂದಲೆ ಲಕೋಟೆ ಒಡೆದು ಡೆಬಿಟ್‌ಕಾರ್ಡ್ ಹೊರತೆಗೆದೆ. ಆದರೆ ಕಾರ್ಡ್‌ನ ಮೇಲೆ ಅಚ್ಚಾಗಿರುವ ನನ್ನ ಹೆಸರನ್ನು ನೋಡಿದಾಗ ನನಗೆ ಆಶ್ಚರ್ಯ, ಆಘಾತ-ಎರಡೂ ಕಾದಿದ್ದವು. ನಾನು ಕೊಟ್ಟ ಅರ್ಜಿಯಲ್ಲಿ ನನ್ನ ಹೆಸರನ್ನು ಸ್ಪಷ್ಟವಾಗಿ, ಬ್ಲಾಕ್ (ಕ್ಯಾಪಿಟಲ್)ಲೆಟರ್‌ಗಳಲ್ಲಿ, "B. BHASKAR RAO''’ ಎಂದು ಬರೆದಿದ್ದೆ.

ಕಾರ್ಡ್‌ನ ಮೇಲೆ ನನ್ನ ಹೆಸರು ಟೈಪಿಸಿದಾತ ನನ್ನ ಹೆಸರನ್ನು "B. BHASKAR RAO'' ಎಂದು ಟೈಪಿಸಿದ್ದ! ಅದೃಷ್ಟವಶಾತ್, ಆತ "H'' ಮೊದಲು "T''ಯನ್ನು ಟೈಪಿಸಿರಲಿಲ್ಲವಾದ್ದರಿಂದ, ಪೊಲೀಸರು ನನ್ನನ್ನ ಹುಡುಕಿಕೊಂಡು ಬರುವ ಪ್ರಮೇಯ ಬರಲಾರದೆಂಬ ನಂಬಿಕೆಯಲ್ಲಿ, ನನ್ನನ್ನು ಕಳ್ಳನನ್ನಾಗಿ ಮಾಡಿರದ ಆ ಟೈಪಿಸ್ಟ್ ಮಹಾನುಭಾವನಿಗೆ ಇಹದಲ್ಲೂ ಪರದಲ್ಲೂ ಒಳಿತೇ ಆಗಲಿ ಎಂದು ಜಗನ್ನಿಯಾಮಕರಾದ ಮಹಾ ವಿಷ್ಣು-ಈಶ್ವರರನ್ನೂ, ಕರುಣಾಳುವಾದ ಯೇಸು ವನ್ನೂ, ದಯಾಮಯನಾದ ಅಲ್ಲಾಹನನ್ನ್ನೂ, ಏಕಕಾಲದಲ್ಲಿ ಪ್ರಾರ್ಥಿಸಿದೆ!

ನಿಮಗೆ ತಿಳಿದಿರಬಹುದು, ಎಲ್ಲವೂ ಕಂಪ್ಯೂಟರೀಕೃತಗೊಂಡು, ಸಕಲವೂ ‘ಆನ್‌ಲೈನ್’ ಆದ ಬಳಿಕ ಒಂದು ಚುಕ್ಕಿ, ಅಲ್ಪವಿರಾಮ ಚಿಹ್ನೆ, ಅಥವಾ ಸ್ಪೇಸ್ ಆಚೀಚೆ ಆದರೂ ಕಂಪ್ಯೂಟರ್ ನಿಮ್ಮ ಅಹವಾಲನ್ನು ಮನ್ನಿಸುವುದಿಲ್ಲ. ಇಂಗ್ಲಿಷ್ ಅಂತೂ ಈ ನಿಟ್ಟಿನಲ್ಲಿ ತುಂಬ, ತುಂಬಾ ಅಪಾಯಕಾರಿ ಹಾಗೂ ಗಂಡಾಂತರಕಾರಿ ಭಾಷೆ. ಸ್ಪೆಲ್ಲಿಂಗ್‌ನಲ್ಲಿ ಒಂದು ಲೆಟರ್ ತಪ್ಪಾದರೂ ಅದು ನಿಮ್ಮ ಕಾರ್ಡನ್ನು ನಿರಾಕರಿಸಿಬಿಡುತ್ತದೆ.

ಇದು ನಡೆದು ಹದಿನೈದು ವರ್ಷಗಳೇ ಕಳೆದಿವೆ, ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾನು ಹಾಗೂ ನನ್ನ ಪತ್ನಿ, ಕಸ್ಟಮ್ಸ್, ಸೆಕ್ಯುರಿಟಿ ಚೆಕ್ ಎಲ್ಲ ಮುಗಿಸಿ, ಇನ್ನೇನು ಅಡಿಸ್ ಅಬಾಬಾಕ್ಕೆ ಹೊರಡುವ ವಿಮಾನ ಏರಬೇಕು ಎನ್ನುವಾಗ ಇಥಿಯೋಪಿಯಸ್ ಏರ್‌ಲೈನ್ಸ್‌ನ ಅಧಿಕಾರಿಯೊಬ್ಬ, ನನ್ನ ಪತ್ನಿಯ ಏರ್ ಟಿಕೆಟ್ ಪರಿಶೀಲಿಸಿದವನೇ, ನಮ್ಮನ್ನು ಪಕ್ಕಕ್ಕೆ ಸರಿದು ನಿಲ್ಲುವಂತೆ ಹೇಳಿದ. ಏನೋ ಎಡವಟ್ಟಾಗಿದೆ ಎಂದು ಊಹಿಸಿದ ನಾನು ಆತನೊಡನೆ ‘ಯಾಕೆ?’ ಎಂದು ಕೇಳಿದೆ.

ಆತ ನನ್ನ ಪತ್ನಿಯ ಏರ್‌ಟಿಕೆಟ್ ತೋರಿಸಿ ಅದರಲ್ಲಿ ಅಚ್ಚಾಗಿರುವ ಅವಳ ಹೆಸರಿನ ಸ್ಪೆಲ್ಲಿಂಗ್ ಕಡೆಗೆ ನನ್ನ ಗಮನ ಸೆಳೆದು ಪಾಸ್‌ಪೋರ್ಟ್‌ನಲ್ಲಿರುವ ಹೆಸರಿನೊಂದಿಗೆ ಹೋಲಿಸಿ ನೋಡಿದಾಗ ಅಲ್ಲೊಂದು ತಪ್ಪು ಆಗಿತ್ತು. "SHANTHA" ಎಂದು ಟೈಪಿಸಬೇಕಾಗಿದ್ದ ಟ್ರಾವೆಲ್ ಏಜನ್ಸಿಯ ಟೈಪಿಸ್ಟ್ "N''ನ ಬದಲಾಗಿ "U'' ಎಂದು ಟೈಪಿಸಿ ಬಿಟ್ಟಿದ್ದಳು. ಆ ಅಧಿಕಾರಿ ನಾನು ಎಷ್ಟೇ ವಿವರಿಸಿದರೂ, ಅದು ಟೈಪಿಂಗ್ ತಪ್ಪು ಎಂದು ನಿವೇದಿಸಿಕೊಂಡರೂ ಆತ ಟಿಕೆಟ್‌ನಲ್ಲಿ ನಮೂದಿತವಾಗಿರುವ ಪ್ರಯಾಣಿಕಳು ಇವಳೇ ಎಂದು ಒಪ್ಪಲು ಸುತರಾಂ ಸಿದ್ಧನಿರಲಿಲ್ಲ. ಕೊನೆಗೆ ಸುಮಾರು ಅರ್ಧಗಂಟೆಯ ಕಾಯುವಿಕೆಯ ಬಳಿಕ ಆತ ತನ್ನ ಮೇಲಧಿಕಾರಿಯೊಬ್ಬನನ್ನು ಕರೆಸಿದ. ಆತ ಬಂದು, ಸ್ವತಃ ಟಿಕೆಟ್‌ನ್ನು ಪರಿಶೀಲಿಸಿ, ವೀಸಾದಲ್ಲಿರುವ ಹೆಸರಿ ನೊಂದಿಗೆ ತಾಳೆನೋಡಿ, ಅಂತಿಮವಾಗಿ, ಅದು ಟೈಪಿಂಗ್ ಎರರ್ ಎಂದು ಒಪ್ಪಿದ ಮೇಲಷ್ಟೇ ನಮ್ಮನ್ನು ಮುಂದೆ ಹೋಗಲು ಬಿಡಲಾಯಿತು. ಈ ಘಟನೆಯನ್ನು ಯಾಕೆ ನಾನು ಹೇಳಬೇಕಾಯಿತೆಂದರೆ, ಇಂದಿನ ಆನ್‌ಲೈನ್ ಯುಗದಲ್ಲಿ ಒಬ್ಬ ಗ್ರಾಹಕನ ಹೆಸರನ್ನು ಯಾವುದೇ ಕಾರ್ಡಿನಲ್ಲಿ ಮುದ್ರಿಸುವಾಗ ಅಪಾರವಾದ ಎಚ್ಚರಿಕೆ ವಹಿಸಬೇಕಾಗುತ್ತದೆ. ಗ್ರಾಹಕ ಇದನ್ನು ಪರಿಶೀಲಿಸದೆ, ತನ್ನ ಡೆಬಿಟ್‌ಕಾರ್ಡ್‌ನ್ನು ಒಂದು ದಾಖಲೆಯಾಗಿ ನೀಡಿದಲ್ಲಿ, ಅದು ತಿರಸ್ಕೃತವಾದಾಗಲೇ ಆತನಿಗೆ ಆಘಾತವಾಗುವ ಸ್ಥಿತಿ ಬಂದಿರುವುದರ ಅರಿವಾಗುತ್ತದೆ.

ಇಂಗ್ಲಿಷ್‌ನ ಒಂದು ಎರರ್ ಎಂತಹ ಆತಂಕದ ಕ್ಷಣಗಳನ್ನು ತರಬಹುದು ಎಂಬುದು ಅದನ್ನು ಅನುಭವಿಸಿದವರಿಗೆ ಮಾತ್ರ ತಿಳಿದೀತು. ಹಾಗೇಯೇ ಸ್ಪೇಸಿಂಗ್, ಸಿಂಗಲ್ ಸ್ಪೇಸಿಂಗ್, ಡಬಲ್ ಸ್ಪೇಸಿಂಗ್‌ಗಳು, ಅಲ್ಪವಿರಾಮಗಳು ಕೂಡ ಅರ್ಥಾಂತರ ಉಂಟು ಮಾಡಬಲ್ಲವು ಎಂಬ ಅರಿವಿಲ್ಲದೆ ಬೇಕಾಬಿಟ್ಟಿಯಾಗಿ ಟೈಪ್ ಮಾಡುವುದರಿಂದ ಆಗುವ ಅನಾಹುತಗಳ ಅರಿವು ನಮ್ಮ ಸಾರ್ವಜನಿಕ ಸೇವಾ ಸಂಸ್ಥೆಗಳ ಸಿಬ್ಬಂದಿಗೆ ಇರುವುದಿಲ್ಲ.

ಇಂಗ್ಲಿಷ್ ಬಲ್ಲ ಗ್ರಾಹಕರು ತಪ್ಪುಗಳನ್ನು ಕಂಡುಹಿಡಿದು, ಅದನ್ನು ಸರಿಪಡಿಸಿ ಯಾರು. ಆದರೆ ಇಂಗ್ಲಿಷ್ ತಿಳಿಯದ, ನಿರಕ್ಷರಿಗಳಾದ, ಅಥವಾ ಅರೆಶಿಕ್ಷಿತರಾದ ಗ್ರಾಹಕರ ಪಾಡೇನು? ನಿಮ್ಮ ಡೆಬಿಟ್‌ಕಾರ್ಡ್ ನಲ್ಲಿ ನಿಮ್ಮ ಹೆಸರು ತಪ್ಪಾಗಿ ಮುದ್ರಿತವಾದಾಗ ಬ್ಯಾಂಕ್ ಸಿಬ್ಬಂದಿ ‘ಸ್ಯಾರಿ’ ಎಂದು ಸುಲಭವಾಗಿ ಹೇಳಿ, ಇನ್ನೆರಡು ವಾರಗಳಲ್ಲಿ ನಿಮಗೆ ಹೊಸ ಕಾರ್ಡ್ ಕಳುಹಿಸಿಕೊಡುತ್ತೇವೆ ಎನ್ನಬಹುದು. ಆದರೆ ಆಗ ಗ್ರಾಹಕನಿಗಾಗುವ ಅನನುಕೂಲ, ಆತ 15ದಿನಗಳಕಾಲ ಎಟಿಎಂ ಬಳಸದೆ ತನ್ನ ಬ್ಯಾಂಕ್ ವ್ಯವಹಾರಗಳಿಗೆ ಬ್ಯಾಂಕಿಗೆ ಹೋಗಬೇಕಾದ ಅನಿವಾರ್ಯತೆ, ಇದಕ್ಕಾಗಿ ತಗಲುವ ಸಮಯ, ವಾಹನಗಳಿಗಾಗಿ ಮಾಡಬೇಕಾಗುವ ವೆಚ್ಚ-ಇದನ್ನೆಲ್ಲ ಭರಿಸುವವರ್ಯಾರು?

ಸರಿಯಾಗಿ ಕಾರ್ಯಾನಿರ್ವಹಿಸದ, ಅಥವಾ ತೀರ ಹಳೆಯದಾಗಿರುವ ಎಟಿಎಂಗಳು ಗ್ರಾಹಕರಿಗೆ ನೀಡುವ ಕಾಟದ ಕತೆ ಬೇರೇಯೇ ಇದೆ. ಒಂದು ಖಾಸಗಿ ಬ್ಯಾಂಕಿನ ಎಟಿಎಂನಲ್ಲಿ ನಾನು ಕಾರ್ಡ್ ಇನ್‌ಸರ್ಟ್ ಮಾಡಿ, ಯಂತ್ರ ಹೇಳಿದ ಆಜ್ಞೆಗಳನ್ನೆಲ್ಲ ಪಾಲಿಸಿ ಕಾಯುತ್ತ ನಿಂತೆ. ಯಾವಾಗಲೂ ಆಗುವ ಯಂತ್ರದ ಒಳಗಿನಿಂದ ಕೇಳಿಬರುವ ನೋಟುಗಳನ್ನು ಎಣಿಸುವ ಸದ್ದುಕೇಳಿಸಿತು. ಸರಿ, ಇನ್ನೇನು ಗರಿಗರಿಯಾದ ನೋಟುಗಳು ಬಂದೇ ಬಿಡುತ್ತವೆಂದು ಕಾಯುತ್ತಿ ದ್ದಾಗ, ಏಕಾಏಕಿಯಾಗಿ ಯಂತ್ರದ ಪರದೆ ಆಫ್ ಆಯಿತು. ಅಲ್ಲಿದ್ದ ಬೆಳಕು ಹೋಗಿ ಗಾಢಾಂಧಕಾರ. ‘ಕಾದೆ ಕಾದೆ ನೀನು ಮಾತ್ರ ಬರದೆಹೋದೆ’ ಎನ್ನುವ ಹಾಗೆ ಸ್ವಲ್ಪ ಹೊತ್ತು, ಮತ್ತೂ ಸ್ವಲ್ಪಹೊತ್ತು ಕಾದೆ. ಇಲ್ಲ, ಯಂತ್ರ ಕ್ಯಾಶ್‌ವಿಸರ್ಜಿಸುವ ಯಾವ ಲಕ್ಷಣವೂ ಇಲ್ಲ. ಅದಕ್ಕೆ ಚಿದಾನಂದ ಸಾಲಿಯವರು ಹೇಳುವ ‘ಮೂರನೇ ಕಣ್ಣಿಗೆ’ ಸಂಬಂಧಿಸಿದ ಗಂಭೀರ ಸಮಸ್ಯೆ ಇದ್ದಿರಬಹುದು. ದಿಕ್ಕು ತೋಚದಾಯಿತು. ಗುಂಡಿಗಳನ್ನು ಒತ್ತಿಯಾಗಿದೆ. ಹೊರಬರಬೇಕಾದ ಕ್ಯಾಶ್ ಬರದೇ ಇದ್ದರೆ ನಾನು ಅದಾಗಲೇ ಇತ್ತಿರುವ ಹತ್ತುಸಾವಿರ ಗುಂಡಿಗೆ ಬೀಳುತ್ತದೆ. ನನ್ನ ಅಸಹಾಯಕತೆಯನ್ನು ಗಮನಿಸಿದ ಭದ್ರತಾಕಾವಲುಗಾರ ಆಪತ್‌ರಕ್ಷಕನಾಗಿ ಒಳಬಂದು ಯಾವುದೋ ಒಂದು ಗುಂಡಿ ಒತ್ತಿದ. ತತ್‌ಕ್ಷಣ ಹತ್ತುಸಾವಿರ ಹೊರಬಂತು. ಆತನ ಕೈಬೆರಳಲ್ಲಿ ಅದೇನು ವಿರೇಚನ ಮಹಿಮೆ ಇತ್ತೋ!

ಮೆಶಿನ್ ಸ್ವಲ್ಪ ಸರಿ ಇಲ್ಲ , ಸಾರ್ ’ಎಂದ .ಒತ್ತಬೇಕಾದ ಬಟನ್ ತೋರಿಸಿದ. ಆತ ಒಂದು ವೇಳೆ ನಾನು ಕಾದು ಕಾದು ಹೊರಟು ಹೋಗುವವರೆಗೆ ಕಾದು, ಆ ಬಳಿಕ ಆ ಬಟನ್ ಒತ್ತಿದ್ದರೆ ಆವತ್ತು ಆತ ಅಚಾನಕ್ಕಾಗಿ ದಶ ಸಹಸ್ರಗಳ ಸರದಾರನಾಗಿ ಬಿಡುತ್ತಿದ್ದ. ನನ್ನ ಅಹವಾಲನ್ನು ಹೇಳಿಕೊಳ್ಳಲು , ಬ್ಯಾಂಕಿನಿಂದ ಪರಿಹಾರ ಪಡೆಯಲು ನನ್ನ ಬಳಿ ಯಾವ ಪುರಾವೆಯೂ ಇರುತ್ತಿರಲಿಲ್ಲ.

ಅಲ್ಲೇ ಸಮಿಪದ ಇನ್ನೊಂದು ಡಬ್ಬಾ ಎಟಿಎಂನಲ್ಲಿ ಭಾಷೆಯನ್ನು ಆಯ್ದು ಕೊಳ್ಳುವಾಗ ‘ಇಂಗ್ಲಿಷ್’ ಎಂದು ಒತ್ತಿದರೆ ಅದು ಸರಿಯಾದ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಏನೇನೋ ಸುಂದರ ಸಂದೇಶಗಳನ್ನು ನೀಡುತ್ತಿತ್ತು. ಅಂತಿಮವಾಗಿ, ಸೆಕ್ಯುರಿಟಿ ಮ್ಯಾನ್ ಹೇಳಿದ ‘‘ಕನ್ನಡ ಅಂತ ಒತ್ತಿ,ಸಾರ್, ಕ್ಯಾಶ್ ಬರುತ್ತದೆ.’’ ಅದು ಹೇಳಿದಂತೆಯೇ ಮಾಡಿದೆ. ಸ್ವಲ್ಪ ತಡವಾಗಿಯಾದರೂ,ಕ್ಯಾಶ್ ಬಂತು.

ಅದು ಕನ್ನಡ ಮಾಧ್ಯಮ ಎಟಿಎಂ ಎಂದು ನನಗೆ ತಿಳಿದಿರಲಿಲ್ಲ. ಸರಕಾರ ಕನ್ನಡ ಶಾಲೆಗಳನ್ನು ಮುಚ್ಚುವುದಕ್ಕೆ ಪ್ರತಿಭಟನೆಯಾಗಿ ಅದು ಇಂಗ್ಲಿಷ್ ಭಾಷೆಯನ್ನು ತಿರಸ್ಕರಿಸಿರಬಹುದು. ಇಂತಹ ಹತ್ತಾರು ಅನುಭವಗಳು ನೂರಾರು ಗ್ರಾಹಕರಿಗೆ ಆಗಿರಬಹುದು. ‘ಸಾಕಪ್ಪಾ ಎಟಿಎಂ ಸಹವಾಸ’ ಅನ್ನಿಸಿರಬಹುದು. ಆದರೆ ನಾವು ನಮ್ಮ ದೇಶ ನಗದು ರಹಿತ ವ್ಯವಹಾರದ ಹಾದಿಯಲ್ಲಿ ಹಿಂದೆ ಬರಲಾಗದಷ್ಟು ದೂರ ಮುಂದೆ ಸಾಗಿಯಾಗಿದೆ. ಆದರೂ ಎಟಿಎಂ ಸಂಬಂಧಿತ ಕಾಟಗಳು ನಿಂತಿಲ್ಲ, ಪ್ರಾಯಶಃ ನಿಲ್ಲುವುದೂ ಇಲ್ಲ.
ಗೊಣಗುತ್ತಲೇ ಬದುಕುವುದು, ಹೆಣಗುತ್ತಲೇ ಮುಂದೆ ಸಾಗುವುದು ನಮ್ಮ ದಿನಚರಿಯಾಗಿದೆ.

Writer - ಡಾ.ಬಿ.ಭಾಸ್ಕರ ರಾವ್

contributor

Editor - ಡಾ.ಬಿ.ಭಾಸ್ಕರ ರಾವ್

contributor

Similar News