ಮೋದಿ ಜೀವನಗಾಥೆ ಅನುಕರಣೀಯ : ಇವಾಂಕಾ ಟ್ರಂಪ್

Update: 2017-11-28 16:58 GMT

  ಹೈದರಾಬಾದ್, ನ.28: ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಪ್ರಧಾನಿ ಹುದ್ದೆಗೇರಿದ್ದು ಅವರ ಜೀವನಗಾಥೆ ಅನುಕರಣೀಯ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಹಾಗೂ ಅಮೆರಿಕ ಅಧ್ಯಕ್ಷರ ಸಲಹೆಗಾರ್ತಿ ಇವಾಂಕಾ ಟ್ರಂಪ್ ಹೇಳಿದ್ದಾರೆ.

 ಹೈದರಾಬಾದಿನಲ್ಲಿ ಅಮೆರಿಕದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ದಕ್ಷಿಣ ಏಶ್ಯಾ ಜಾಗತಿಕ ಸಮಾವೇಶದಲ್ಲಿ ಮಾತನಾಡಿದ ಇವಾಂಕಾ, ಭಾರತವು ಪ್ರಜಾಪ್ರಭುತ್ವದ ಸಂಕೇತವಾಗಿ ಹಾಗೂ ಭರವಸೆಯ ಆಶಾಕಿರಣವಾಗಿ ವಿಶ್ವದಲ್ಲಿ ಗುರುತಿಸಲ್ಪಟ್ಟಿದೆ ಎಂದರು.

 ಭಾರತವು ಅಮೆರಿಕದ ನೈಜ ಮಿತ್ರರಾಷ್ಟ್ರ ಎಂದ ಅವರು, ಪರಿವರ್ತನೆಗೆ ಮೋದಿ ಯವರೇ ಸ್ಪಷ್ಟ ಉದಾಹರಣೆಯಾಗಿದ್ದಾರೆ. ಚಹಾ ಮಾರುತ್ತಿದ್ದ ವ್ಯಕ್ತಿ ಪ್ರಧಾನಿ ಹುದ್ದೆಗೇರಿದ್ದು ಅವರ ಜೀವನಗಾಥೆ ಅನುಕರಣೀಯವಾಗಿದೆ ಎಂದರು. ಭಾರತ ಮತ್ತು ಅಮೆರಿಕ ಮಧ್ಯೆ ಹೆಚ್ಚುತ್ತಿರುವ ಸಹಕಾರ ಸಹಭಾಗಿತ್ವಕ್ಕೆ ಈ ಸಮ್ಮೇಳನ ಒಂದು ಸಂಕೇತವಾಗಿದೆ. ಇದೇ ಪ್ರಪ್ರಥಮ ಬಾರಿಗೆ ಸಮ್ಮೇಳನಕ್ಕೆ ಆಯ್ಕೆಯಾದವರಲ್ಲಿ ಶೇ.50ರಷ್ಟು ಮಹಿಳಾ ಪ್ರತಿನಿಧಿಗಳು ಎಂಬುದು ಗಮನಾರ್ಹವಾಗಿದೆ . ಅಮೆರಿಕದಲ್ಲಿ ಈಗ 11 ಮಿಲಿಯನ್‌ಗೂ ಹೆಚ್ಚಿನ ಮಹಿಳೆಯರು ಸ್ವಂತ ಉದ್ಯಮ ನಡೆಸುತ್ತಿದ್ದಾರೆ ಎಂದರು.

    ಹಲವಾರು ರಾಷ್ಟ್ರಗಳಲ್ಲಿ ಮಹಿಳೆಯರು ಪುರುಷರ ನೆರವಿಲ್ಲದೆ ರಸ್ತೆಯಲ್ಲಿ ನಡೆಯಲೂ ಅಸಾಧ್ಯ ಎಂಬ ಪರಿಸ್ಥಿತಿಯಿದೆ. ಮಹಿಳೆಯರು ಸ್ವಂತ ಉದ್ಯೋಗ ಆರಂಭಿಸಲು, ಅದನ್ನು ಮುನ್ನಡೆಸಲು ಮತ್ತು ಯಶಸ್ಸು ಪಡೆಯಲು ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. 2016ರಲ್ಲಿ ಸ್ವಂತ ಉದ್ಯಮ ಸ್ಥಾಪಿಸಲು ಮಹಿಳಾ ಉದ್ಯಮಿಗಳು ಪಡೆದಿರುವ ಬಂಡವಾಳದ ನೆರವು ಶೇ.3ಕ್ಕೂ ಕಡಿಮೆಯಾಗಿದೆ. ಮಹಿಳಾ ಉದ್ಯಮಿಗಳಿಗೆ ಸೂಕ್ತ ಆರ್ಥಿಕ ನೆರವು ಒದಗಿಸುವ ಮೂಲಕ ಅವರಿಗೆ ನೆರವಾಗಲು, ದೇಶದಲ್ಲಿ ಅಥವಾ ವಿದೇಶದಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ನೆರವಾಗಲು ನಾವು ಬದ್ಧರಾಗಿದ್ದೇವೆ ಎಂದು ಇವಾಂಕಾ ತಿಳಿಸಿದರು.

ಮಹಿಳೆಯರು ಎಲ್ಲಾ ಸವಾಲುಗಳನ್ನೂ ಮೆಟ್ಟಿನಿಂತು ತಮ್ಮ ಸಾಮರ್ಥ್ಯವನ್ನು ಜಗಜ್ಜಾಹೀರುಗೊಳಿಸಬೇಕು. ಎಲ್ಲಾ ದೇಶದ ಜನರು ಜೊತೆಯಾಗಿ ಶಾಂತಿ, ನೆಮ್ಮದಿಯಿಂದ ಬದುಕುವ ವಿಶ್ವವನ್ನು ರೂಪಿಸುವ ಕನಸು ನಮ್ಮದಾಗಿದೆ. ಇದನ್ನು ಸಾಕಾರಗೊಳಿಸಲು ಸರ್ವರ ಸಹಕಾರದ ಅಗತ್ಯವಿದೆ ಎಂದು ಇವಾಂಕಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News