ಟಿವಿ ಧಾರವಾಹಿ ಪ್ರಭಾವ: 7 ವರ್ಷದ ಬಾಲಕಿ ಆತ್ಮಹತ್ಯೆ

Update: 2017-11-29 16:59 GMT

ದಾವಣಗೆರೆ, ನ.29: ಖಾಸಗಿ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನಂದಿನಿ’ ಧಾರಾವಾಹಿಯನ್ನು ನೋಡುತ್ತಾ 2ನೆ ತರಗತಿ ವಿದ್ಯಾರ್ಥಿನಿಯೊಬ್ಬಳು ಬೆಂಕಿ ಹಚ್ಚಿಕೊಂಡು ನರ್ತಿಸುವ ಭರದಲ್ಲಿ ಬೆಂಕಿಗಾಹುತಿಯಾದ ಘಟನೆ ಹರಿಹರ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 

ಹರಿಹರ ನಗರದ ಆಶ್ರಯ ಕಾಲನಿ ನಿವಾಸಿ ತರಗಾರ ಕೆಲಸಗಾರ ಪ.ಜಾತಿಗೆ ಸೇರಿದ ಮಂಜುನಾಥ, ಮನೆಗೆಲಸ ಮಾಡುವ ಚೈತ್ರ ದಂಪತಿಗಳ ಮೂವರು ಮಕ್ಕಳ ಪೈಕಿ ಹಿರಿಯಳಾದ ಪ್ರಾರ್ಥನ (7 ವರ್ಷ) ಬೆಂಕಿಗೆ ಬಲಿಯಾದವಳು ಎಂದು ತಿಳಿದು ಬಂದಿದೆ.

ಕಳೆದ ದಿ.11ರ ಶನಿವಾರ ಬೆಳಿಗೆ ಶಾಲೆ ಮುಗಿಸಿಕೊಂಡು ಬಂದ ಪ್ರಾರ್ಥನಾ ಮನೆಯಲ್ಲಿ ತಂದೆ, ತಾಯಿ ಕೆಲಸಕ್ಕೆ ಹೋಗಿದ್ದರು. ಪ್ರಾರ್ಥನ ಮನೆಯಲ್ಲಿ ಟಿವಿ ಹಚ್ಚಿಕೊಂಡು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಂದಿನಿ ಧಾರಾವಾಹಿ ನೋಡಲಾರಂಭಿಸಿದ್ದಾಳೆ. ಆ ಧಾರಾವಾಹಿಯಲ್ಲಿ ನಾಯಕಿ ಬೆಂಕಿ ಹಚ್ಚಿಕೊಂಡು ಕುಣಿಯುತ್ತಿದ್ದ ದೃಶ್ಯ ಕಂಡ ಪ್ರಾರ್ಥನಾ ಟಿವಿ ಧಾರಾವಾಹಿಯಿಂದ ಪ್ರೇರಿತಳಾದವಳಂತೆ ತನ್ನ ಸುತ್ತ ರಾಶಿ ಹಾಕಿಕೊಂಡಿದ್ದ ಕಾಗದಗಳಿಗೆ ಬೆಂಕಿ ಹಚ್ಚಿ, ನಂದಿನಿ ಧಾರಾವಾಹಿ ಪಾತ್ರದಾರಿ ಬೆಂಕಿಯಲ್ಲಿ ನರ್ತಿಸುವಂತೆ ತಾನೂ ಕನ್ನಡಿ ಮುಂದೆ ಕುಣಿಯಲು ಮುಂದಾಗಿದ್ದಾಳೆ. ಸುತ್ತಲೂ ಹರಡಿದ್ದ ಕಾಗದಕ್ಕೆ ಹೊತ್ತಿಕೊಂಡ ಬೆಂಕಿ ಮಧ್ಯೆ ಇದ್ದಕ್ಕಿದ್ದಂತೆ ಪ್ರಾರ್ಥನಾ ತೊಟ್ಟಿದ್ದ ಬಟ್ಟೆಗಳಿಗೂ ಹತ್ತಿಕೊಂಡಿದೆ. ಬಾಲಕಿಯ ಕಿರುಚಾಟ ಕೇಳಿದ ನೆರೆ ಹೊರೆಯವರು ತಕ್ಷಣ ಹರಿಹರ ಆಸ್ಪತ್ರೆಗೆ, ಅಲ್ಲಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಎಸ್ಸೆಸ್ ಹೈಟೆಕ್ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಆಕೆ ನ. 12ರಂದು ರಾತ್ರಿ 1.30ರ ವೇಳೆಗೆ ಮೃತಪಟ್ಟಿದ್ದಾಳೆ.

ಹರಿಹರದ ಸೇಂಟ್ ಮೇರಿಸ್ ಕಾನ್ವೆಂಟ್‍ನಲ್ಲಿ 2ನೇ ತರಗತಿ ಓದುತ್ತಿದ್ದ 7 ವರ್ಷದ ಪ್ರಾರ್ಥನಾ ಸಾವು ಇಡೀ ಕುಟುಂಬ ಈಗ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ. ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News