ವಿಯೆಟ್ನಾಂ ಹೋರಾಟಗಾರ್ತಿಯ ಬದುಕು

Update: 2017-11-29 18:38 GMT

‘‘ಕುಟುಂಬ, ಸ್ನೇಹಿತರು ಮತ್ತು ದೇಶ’’ ಇದು ವಿಯೆಟ್ನಾಮಿ ಹೋರಾಟಗಾರ್ತಿ, ರಾಜಕಾರಣಿ ನುಯೆನ್ ಥೀ ಬಿನ್ ಅವರ ಆತ್ಮಕತೆ. ಫ್ರೆಂಚ್ ವಸಾಹತುಶಾಹಿ-ಅಮೆರಿಕನ್ ಸಾಮ್ರಾಜ್ಯಶಾಹಿಗಳ ದುರಾಕ್ರಮಣ ಬಿಗಿ ಹಿಡಿತದಲ್ಲಿ ನಲುಗಿದ ವಿಯೆಟ್ನಾಂ ತಾಯ್ನಾಡಿಗಾಗಿ ಬಲಿಯಾದವರು ಸಹಸ್ರಾರು ಜನರು. ಈ ಹೋರಾಟದಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡು, ತನ್ನ ಪ್ರೀತಿ ಪಾತ್ರರನ್ನು, ಕುಟುಂಬವನ್ನು ದೇಶಕ್ಕಾಗಿ ತ್ಯಾಗ ಮಾಡಿದ ಅಸಾಧಾರಣ ಮಹಿಳೆ ನುಯೆನ್ ಥೀ ಬಿನ್. ವಿಯೆಟ್ನಾಂ ಕ್ರಾಂತಿಯ ಕಿಚ್ಚು ಮತ್ತು ಕುಸುಮ ಎಂದೇ ಅವರು ಪ್ರಸಿದ್ಧರು. ಆಕೆ ಸಮಾಜದ ಕೆಳ ಹಂತದಿಂದ ಬಂದ ದಿಟ್ಟ ಹೋರಾಟಗಾರ್ತಿ. ಆಕೆಯದು ಸಾಹಸಮಯ ಬದುಕು. ಅವರ ಹೋರಾಟಗಳ ಹಲವು ಕಥನಗಳು ಇಲ್ಲಿ ದಾಖಲಾಗಿವೆ. ಬಿನ್ ಅವರನ್ನು ಹಲವು ಬಾರಿ ಸೆರೆ ಹಿಡಿಯಲಾಯಿತು. ಜೈಲುವಾಸ ಅನುಭವಿಸಿ, ಚಿತ್ರಹಿಂಸೆಗೂ ಒಳಗಾದರು. ಆದರೂ ಈ ದಿಟ್ಟ ಹೋರಾಟಗಾರ್ತಿ ಶರಣಾಗಲಿಲ್ಲ. ತನ್ನ ರಾಷ್ಟ್ರ ವಿಮೋಚನೆಗೊಂಡ ಆನಂತರ ಬಿನ್ ವಿಯೆಟ್ನಾಮ್‌ನ ವಿದೇಶಾಂಗ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ತದನಂತರ ರಾಷ್ಟ್ರದ ಉಪಾಧ್ಯಕ್ಷರೂ ಆದರು. ಈಕೆ ಇಡೀ ವಿಯೆಟ್ನಾಂ ಮಹಿಳೆಯರನ್ನು ಈ ಕೃತಿಯಲ್ಲಿ ಪ್ರತಿನಿಧಿಸುತ್ತಾರೆ.
ಇಲ್ಲಿ ಮೂರು ಹಂತದ ಆಕೆಯ ಬದುಕನ್ನು ನೋಡಬಹುದು. ಒಂದು ಬಾಲ್ಯ ಮತ್ತು ಹದಿಹರೆಯ. ಆಕೆಯನ್ನು ಹೊರಾಟಕ್ಕೆ ಸಿದ್ಧವಾಗಿಸಿದ ವಿಯೆಟ್ನಾಂನ ಸ್ಥಿತಿಗತಿಗಳು ಇಲ್ಲಿ ದಾಖಲಾಗಿವೆ. ಹಾಗೆಯೇ ಆಕೆಯ ಬಾಲ್ಯ ಮತ್ತು ಹದಿಹರಯ ರೂಪುಗೊಂಡ ಬಗೆಯನ್ನೂ ಹೇಳಲಾಗಿದೆ. ತದನಂತರ ಆಕೆಯ ಹೋರಾಟದ ಬದುಕನ್ನು ಹೇಳುತ್ತದೆ. ಈ ಸಂದರ್ಭದಲ್ಲಿ ಕುಟುಂಬದೊಳಗಿನ ಬಿಕ್ಕಟ್ಟುಗಳನ್ನು, ಹೋರಾಟದ ಸಂದರ್ಭದಲ್ಲಿ ಮಹಿಳೆ ಎದುರಿಸಬಹುದಾದ ಸವಾಲುಗಳನ್ನು ಹಂಚಿಕೊಂಡಿದ್ದಾರೆ. ಇದಾದನಂತರ ವಿಯೆಟ್ನಾಂ ಆಡಳಿತದ ಭಾಗೀದಾರಿಯಾಗಿ ನಿಭಾಯಿಸಿದ ರೀತಿಯನ್ನು ವಿವರಿಸುತ್ತಾರೆ. ಶಿಕ್ಷಣ ಸಚಿವೆಯಾಗಿ, ಉಪಾಧ್ಯಕ್ಷೆಯಾಗಿ ಆಕೆ ಎದುರಿಸಿದ ಸವಾಲು, ವಿಯೆಟ್ನಾಂನ ಮರು ನಿರ್ಮಾಣದಲ್ಲಿ ಆಕೆಯ ಪಾತ್ರವನ್ನು ಈ ಪುಟಗಳು ವಿವರಿಸುತ್ತದೆ. ಲೇಖಕ ಜಿ. ಎಸ್. ನಾಗೇಂದ್ರನ್ ಅವರು ಕೃತಿಯನ್ನು ಕನ್ನಡಕ್ಕೆ ಇಳಿಸಿದ್ದಾರೆ. ನವಕರ್ನಾಟಕ ಪ್ರಕಾಶನ ಕೃತಿಯನ್ನು ಹೊರತಂದಿದೆ. 256 ಪುಟಗಳ ಕೃತಿಯ ಮುಖಬೆಲೆ 200 ರೂಪಾಯಿ.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News