2016ರಲ್ಲಿ ಉ.ಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ ಅಪರಾಧಗಳು

Update: 2017-11-30 14:24 GMT

ಹೊಸದಿಲ್ಲಿ,ನ.30: 2016ನೇ ಸಾಲಿನಲ್ಲಿ ದೇಶದಲ್ಲಿ ನಡೆದ ಅಪರಾಧಗಳ ಶೇ.9.5ರಷ್ಟು ಪ್ರಕರಣಗಳು ಉತ್ತರ ಪ್ರದೇಶದಿಂದ ವರದಿಯಾಗಿದ್ದರೆ, ದಿಲ್ಲಿ ನಗರವು ಗರಿಷ್ಠ ಅಪರಾಧ ದರ(974.9)ವನ್ನು ಹೊಂದಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕವು (ಎನ್‌ಸಿಆರ್‌ಬಿ) ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಅವರು ಗುರುವಾರ ಈ ವರದಿಯನ್ನು ಬಿಡುಗಡೆಗೊಳಿಸಿದರು.

ಎನ್‌ಸಿಆರ್‌ಬಿ ಈ ವರ್ಷ 20 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ 19 ಮಹಾನಗರಗಳ ದತ್ತಾಂಶಗಳನ್ನು ಪ್ರಕಟಿಸಿದ್ದು, ವ್ಯಕ್ತಿಗಳು ಮತ್ತು ಮಕ್ಕಳ ನಾಪತ್ತೆ, ನಕಲಿ ನೋಟುಗಳು ಮತ್ತು ಅಕ್ರಮ ಶಸ್ತ್ರಾಸ್ತ್ರ ವಶ ಪ್ರಕರಣಗಳ ಹೊಸ ವಿಭಾಗವನ್ನು ವರದಿಯಲ್ಲಿ ಸೇರ್ಪಡೆಗೊಳಿಸಿದೆ.

2015ರಲ್ಲಿ ದೇಶದಲ್ಲಿ ಒಟ್ಟು 47,10,676 ಅಪರಾಧ ಪ್ರಕರಣಗಳು ವರದಿಯಾಗಿದ್ದರೆ, 2016ರಲ್ಲಿ ಈ ಸಂಖ್ಯೆ 48,31,515(ಶೇ.2.6 ಏರಿಕೆ)ಕ್ಕೆ ಹೆಚ್ಚಿದೆ.

ಆದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ 2016ರಲ್ಲಿ 30,450(ಶೇ.5.2 ಇಳಿಕೆ) ಕೊಲೆ ಪ್ರಕರಣಗಳು ದಾಖಲಾಗಿವೆ. ದಂಗೆ(ಶೇ.5) ಮತ್ತು ದರೋಡೆ(ಶೇ.11.8) ಪ್ರಕರಣಗಳೂ ಇಳಿಮುಖಗೊಂಡಿದ್ದರೆ, ಅಪಹರಣ ಪ್ರಕರಣಗಳು ಶೇ.6ರಷ್ಟು ಏರಿಕೆಯನ್ನು ದಾಖಲಿಸಿವೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ 2016ರಲ್ಲಿ ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳು ಶೇ.2.9ರಷ್ಟು ಏರಿಕೆಯನ್ನು ಕಂಡಿವೆ.

ಅತ್ಯಂತ ಹೆಚ್ಚಿನ ಸಂಖ್ಯೆಯ ಅತ್ಯಾಚಾರ ಪ್ರಕರಣಗಳು ಮಧ್ಯಪ್ರದೇಶ(4,882) ಮತ್ತು ಉತ್ತರ ಪ್ರದೇಶ(4816) ರಾಜ್ಯಗಳಿಂದ ವರದಿಯಾಗಿದ್ದರೆ, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (4189) ಇದೆ. ದೇಶದಲ್ಲಿ ಒಟ್ಟು ಅತ್ಯಾಚಾರ ಘಟನೆಗಳ ಸಂಖ್ಯೆಯಲ್ಲಿ ಶೇ.12.4ರಷ್ಟು ಏರಿಕೆಯಾಗಿದೆ.

 ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳ ಮೇಲೆ ದೌರ್ಜನ್ಯ ಪ್ರಕರಣಗಳಲ್ಲಿ ಶೇ.5.5ರಷ್ಟು ಏರಿಕೆಯಾಗಿದ್ದು, ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನ ಅಗ್ರ ಸ್ಥಾನದಲ್ಲಿವೆ. ಸೈಬರ್ ಅಪರಾಧಗಳು ಶೇ.6.3ರಷ್ಟು ಏರಿಕೆಯನ್ನು ದಾಖಲಿಸಿವೆ.

ದೇಶದಲ್ಲಿ ಒಟ್ಟು 8,312 ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳು ವರದಿಯಾಗಿದ್ದು, ಪ.ಬಂಗಾಲ ಮೊದಲ ಸ್ಥಾನದಲ್ಲಿದೆ. ಒಟ್ಟು 1,11 569 ಮಕ್ಕಳು ನಾಪತ್ತೆಯಾಗಿದ್ದು, ಈ ಪೈಕಿ 55,944 ಮಕ್ಕಳನ್ನು ಪತ್ತೆ ಹಚ್ಚಲಾಗಿದೆ.

ಐಪಿಸಿಯಡಿ ಒಟ್ಟು ಅಪರಾಧಗಳ ಪೈಕಿ ಶೇ.38.8 ರಷ್ಟು ಘಟನೆಗಳು ದಿಲ್ಲಿ ನಗರದಲ್ಲಿ ವರದಿಯಾಗಿದ್ದರೆ, ನಂತರದ ಸ್ಥಾನಗಳಲ್ಲಿ ಬೆಂಗಳೂರು(ಶೇ.8.9) ಮತ್ತು ಮುಂಬೈ(ಶೇ.7.7) ಇವೆ. ವಿಶೇಷ ಮತ್ತು ಸ್ಥಳೀಯ ಕಾನೂನುಗಳಡಿ ಗರಿಷ್ಠ ಅಪರಾಧಗಳು ಚೆನ್ನೈ(ಶೇ.32.9)ನಲ್ಲಿ ದಾಲಾಗಿವೆ.

2016ರಲ್ಲಿ ಒಟ್ಟು 60 ಕಸ್ಟಡಿ ಸಾವು ಪ್ರಕರಣಗಳು ವರದಿಯಾಗಿದ್ದು,ಮಹಾರಾಷ್ಟ್ರದಲ್ಲಿ 12 ಸಾವುಗಳು ಸಂಭವಿಸಿವೆ.

ದಲಿತರ ವಿರುದ್ಧದ ಅಪರಾಧಗಳಲ್ಲಿ ಬಿಜೆಪಿ ಆಡಳಿತದ ಐದು ರಾಜ್ಯಗಳ ಮೇಲುಗೈ

 ಎನ್‌ಸಿಆರ್‌ಬಿ ವರದಿಯು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳಿಗೆ ಹೆಚ್ಚಿನ ಅಸ್ತ್ರವನ್ನೊದಗಿಸಬಹುದು. 2014-16ರ ಅವಧಿಯಲ್ಲಿ ಪರಿಶಿಷ್ಟ ಜಾತಿಗಳ ವಿರುದ್ಧ ಅತ್ಯಂತ ಹೆಚ್ಚಿನ ಅಪರಾಧ ಪ್ರಕರಣಗಳು ನಡೆಸಿರುವ ಐದು ರಾಜ್ಯಗಳಲ್ಲಿ ಬಿಜೆಪಿಯ ನೇರ ಅಥವಾ ಇತರ ಪಕ್ಷಗಳೊಂದಿಗಿನ ಮೈತ್ರಿಕೂಟದ ಆಡಳಿತವಿದೆ ಎಂದು ವರದಿಯು ಬೆಟ್ಟು ಮಾಡಿದೆ.

ಈ ಅವಧಿಯಲ್ಲಿ ದಲಿತರ ವಿರುದ್ಧದ ದೌರ್ಜನ್ಯ ಪ್ರಕರಣಗಳಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ರಾಜಸ್ಥಾನ, ಗೋವಾ, ಬಿಹಾರ ಮತ್ತು ಗುಜರಾತ್‌ಗಳಿವೆ.

ವರದಿ ಚುನಾವಣೆಯ ಮೇಲೆ ಪರಿಣಾಮ ಬೀರುವುದೇ?

ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಗುಜರಾತ್‌ನಲ್ಲಿ 2015ರಲ್ಲಿ 1,010ರಷ್ಟಿದ್ದ ದಲಿತರ ವಿರುದ್ಧದ ದೌರ್ಜನ್ಯ ಪ್ರಕರಣಗಳ ಸಂಖ್ಯೆ 2016ರಲ್ಲಿ 1,322ಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ವಿರುದ್ಧ ಹಲವಾರು ಪ್ರತಿಭಟನೆಗಳಿಗೆ ರಾಜ್ಯವು ಸಾಕ್ಷಿಯಾಗಿದೆ. ಉನಾದಲ್ಲಿ 2015ರಲ್ಲಿ ಗೋರಕ್ಷಕರು ಕುಟುಂಬವೊಂದರ ಮೇಲೆ ದಾಳಿ ನಡೆಸಿದ ಬಳಿಕ ದಲಿತರ ವಿರುದ್ಧದ ಅಪರಾಧವು ರಾಜಕೀಯ ತಿರುವನ್ನು ಪಡೆದುಕೊಂಡಿತ್ತು.

ದಲಿತರ ವಿರುದ್ಧದ ಅಪರಾಧವು ಗುಜರಾತ್‌ನಲ್ಲಿ ಪ್ರಮುಖ ಚುನಾವಣಾ ವಿಷಯಗಳಲ್ಲೊಂದಾಗಿದೆ. ಕಳೆದ ಎರಡು ವರ್ಷಗಳಿಂದಲೂ ಜಿಗ್ನೇಶ ಮೇವಾನಿ ಸೇರಿದಂತೆ ದಲಿತ ನಾಯಕರು ಮತ್ತು ಕಾಂಗ್ರೆಸ್ ಪರಿಶಿಷ್ಟ ಜಾತಿಗಳ ವಿರುದ್ಧದ ದೌರ್ಜನ್ಯದ ವಿಷಯವನ್ನು ಎತ್ತುತ್ತಲೇ ಇದ್ದಾರೆ. ವರದಿಯ ಪರಿಣಾಮದಿಂದ ದಲಿತರ ಮತಗಳು ಸಿಗದಿದ್ದರೆ ಈಗಾಗಲೇ ಪಟೇಲರ ಪ್ರತಿಭಟನೆಯಿಂದ ತಲೆ ಕೆಡಿಸಿಕೊಂಡಿರುವ ಬಿಜೆಪಿಗೆ ಆಘಾತವುಂಟಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News