ಬಾಲಿವುಡ್ ಹಿರಿಯ ನಟ ಶಶಿಕಪೂರ್ ವಿಧಿವಶ

Update: 2017-12-04 14:16 GMT

ಮುಂಬೈ, ಡಿ.4: ಹಿಂದಿ ಚಿತ್ರರಂಗದ ಹಿರಿಯ ನಟ ಶಶಿಕಪೂರ್(79 ವರ್ಷ) ಕೆಲಕಾಲದ ಅನಾರೋಗ್ಯದ ಬಳಿಕ ಮುಂಬೈಯ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.

    ಕಳೆದ ನಾಲ್ಕು ವಾರಗಳಿಂದ ಅಸ್ವಸ್ಥರಾಗಿದ್ದ ಶಶಿಕಪೂರ್ ಶ್ವಾಸಕೋಶದ ಸೋಂಕಿನ ಕಾರಣ ತೀವ್ರ ಅನಾರೋಗ್ಯಕ್ಕೆ ಒಳಗಾದ ಕಾರಣ ರವಿವಾರ ರಾತ್ರಿ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸೋಮವಾರ ಸಂಹೆ 5:20ರ ವೇಳೆ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. 2014ರಲ್ಲಿ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಶಿಕಪೂರ್, ಈ ಹಿಂದೆಯೂ ಶ್ವಾಸಕೋಶದ ಸೋಂಕಿಗೆ ಒಳಗಾಗಿದ್ದು ಬಳಿಕ ಚೇತರಿಸಿಕೊಂಡಿದ್ದರು. ಕಳೆದ ಕೆಲವು ವರ್ಷಗಳಿಂದ ಕಿಡ್ನಿ ಸಮಸ್ಯೆ ಕಾಣಿಸಿಕೊಂಡ ಬಳಿಕ ಅವರು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು.

 ಹಿಂದಿ ಸಿನೆಮಾದ ಮಹಾನ್ ನಟ ಪೃಥ್ವಿರಾಜ್ ಕಪೂರ್ ಅವರ ಮೂರನೇ ಮತ್ತು ಕಿರಿಯ ಪುತ್ರರಾಗಿದ್ದ ಶಶಿಕಪೂರ್ 1938ರಲ್ಲಿ ಕೋಲ್ಕತಾದಲ್ಲಿ ಜನಿಸಿದರು. 1940ರಲ್ಲಿ ಬಾಲನಟನಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದ ಶಶಿಕಪೂರ್ 1961ರಲ್ಲಿ ‘ಧರ್ಮಪುತ್ರ’ ಸಿನೆಮದ ನಾಯಕನಟನಾಗಿ ಬೆಳ್ಳಿತೆರೆ ಪ್ರವೇಶಿಸಿದರು. ರಾಜ್‌ಕಪೂರ್ ಮತ್ತು ಶಮ್ಮಿಕಪೂರ್ ಇವರ ಸೋದರರು. 12ಕ್ಕೂ ಹೆಚ್ಚು ಇಂಗ್ಲಿಷ್ ಭಾಷೆಯ ಸಿನೆಮದಲ್ಲಿ ನಟಿಸಿರುವುದೂ ಸೇರಿದಂತೆ ಸುಮಾರು 150ರಷ್ಟು ಸಿನೆಮಗಳಲ್ಲಿ ಇವರು ನಟಿಸಿದ್ದಾರೆ.

   2011ರಲ್ಲಿ ಇವರಿಗೆ ಪದ್ಮಭೂಷಣ ಪುರಸ್ಕಾರ ಹಾಗೂ 2015ರಲ್ಲಿ ದಾದಾಸಾಹೇಬ್ ಫಾಲ್ಕೆ ಪುರಸ್ಕಾರ ನೀಡಲಾಗಿತ್ತು. 1960-70ರ ದಶಕದಲ್ಲಿ ಬಹಳಷ್ಟು ಹಿಟ್ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ‘ಶರ್ಮಿಲಿ, ಆ ಗಲೆ ಲಗ್ ಜಾ, ಚೋರ್ ಮಚಾಯೆ ಶೋರ್,ಜಬ್ ಜಬ್ ಫೂಲ್ ಖಿಲೆ, ದೀವಾರ್, ಕಭೀ ಕಭೀ’ ಮುಂತಾದವು ಇವರು ನಟಿಸಿದ್ದ ಕೆಲವು ಹಿಟ್ ಸಿನೆಮಗಳು . 1978ರಲ್ಲಿ ತಮ್ಮ ಪತ್ನಿ ಜೆನ್ನಿಫರ್ ಕೆಂಡಾಲ್ ಜೊತೆಗೂಡಿ ಮುಂಬೈಯಲ್ಲಿ ಪೃಥ್ವಿ ಥಿಯೇಟರ್ ಸ್ಥಾಪಿಸಿದ್ದರು. ಜೆನ್ನಿಫರ್ 1984ರಲ್ಲಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಶಶಿಕಪೂರ್ ಪುತ್ರಿ ಸಂಜನಾ ಕಪೂರ್, ಪುತ್ರರಾದ ಕುಣಾಲ್ ಕಪೂರ್ ಹಾಗೂ ಕರಣ್ ಕಪೂರ್ ಅವರನ್ನು ಅಗಲಿದ್ದು ಶಶಿಕಪೂರ್ ಅಂತ್ಯಕ್ರಿಯೆ ಮಂಗಳವಾರ ಬೆಳಿಗ್ಗೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News