ಗುಣಜ್ಞಾನ ಆಚಾರಧರ್ಮ

Update: 2017-12-04 18:45 GMT

ವೇದಶಾಸ್ತ್ರ ಆಗಮಂಗಳನೋದಿದವರು ಹಿರಿಯರೆ?
ಕವಿ, ಗಮಕಿ, ವಾದಿ, ವಾಗ್ಮಿಗಳು ಹಿರಿಯರೆ?
ನಟಿನಿ, ಬಾಣ, ವಿಲಾಸಿ, ಸುವಿದ್ಯವ ಕಲಿತ ಡೊಂಬನೇನು ಕಿರಿಯನೆ?
ಹಿರಿಯತನವಾವುದೆಂದಡೆ ಗುಣಜ್ಞಾನ
ಆಚಾರಧರ್ಮ ಕೂಡಲಸಂಗನ ಶರಣರು ಸಾಧಿಸಿದ ಹಿರಿಯತನ.
                                                                       
- ಬಸವಣ್ಣ 

ಮಾನವನು ಭೂಮಿಯ ಮೇಲೆ ಬದುಕಲು ಸಾಧ್ಯವಾಗುವಂಥ ಕೆಲಸ ಕಾರ್ಯಗಳನ್ನು ಕಾಯಕಜೀವಿಗಳು ಮಾಡುತ್ತಾರೆ. ಆದರೆ ಅವರ ಜ್ಞಾನಕ್ಕೆ ಬೆಲೆ ಸಿಗುತ್ತಿಲ್ಲ. ಜ್ಞಾನವನ್ನು ಕ್ರಿಯೆಗೆ ಇಳಿಸುವವರಿಗಿಂತ ಜ್ಞಾನದ ಕುರಿತು ಮಾತನಾಡುವವರೇ ಈ ಸಮಾಜದಲ್ಲಿ ಸಕಲ ಸೌಲಭ್ಯಗಳನ್ನು ಪಡೆಯುತ್ತಾರೆ. ಸೂಕ್ಷ್ಮಮತಿಗಳಾದ ಬಸವಣ್ಣನವರು ಈ ಬೌದ್ಧಿಕ ಮತ್ತು ದೈಹಿಕ ತಾರತಮ್ಯವನ್ನು ಗಮನಿಸಿದರು. ಬೀದಿಯಲ್ಲಿ ಅದ್ಭುತವಾಗಿ ನರ್ತಿಸುತ್ತ ಜನಮನವನ್ನು ಸೂರೆಗೊಳ್ಳುವ ನರ್ತಕಿ, ಬಾಣವನ್ನು ಪ್ರಯೋಗಿಸುವ ಗುರಿಕಾರ, ವಾಕ್ಚಾತುರ್ಯದಿಂದ ಜನರನ್ನು ನಗೆಗಡಲಲ್ಲಿ ಮುಳುಗಿಸುವ ಹಾಸ್ಯಗಾರ ಮತ್ತು ದೈಹಿಕ ಕಸರತ್ತಿನೊಂದಿಗೆ ಜಾಣ್ಮೆಯನ್ನು ಪ್ರದರ್ಶಿಸುತ್ತ ಬದುಕಿನ ಸಮತೋಲನ ತತ್ತ್ವವನ್ನು ಸಾರುವ ಡೊಂಬ ಅದು ಹೇಗೆ ಕಿರಿಯರಾಗುತ್ತಾರೆ ಎಂಬುದು ಬಸವಣ್ಣನವರ ಸವಾಲಾಗಿದೆ.

ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ ಓದಿದವರು ಮತ್ತು ಶಿವನ ಆರಾಧನೆಗೆ ಸಂಬಂಧಿಸಿದ 28 ಆಗಮಗಳನ್ನು ಓದಿದವರು ಅದು ಹೇಗೆ ದೊಡ್ಡವರಾಗುತ್ತಾರೆ? ಕವಿಗಳು, ಕಾವ್ಯವನ್ನು ರಾಗಬದ್ಧವಾಗಿ ಓದುವ ಗಮಕಿಗಳು, ವ್ಯಾಖ್ಯಾನಕಾರರು ಮತ್ತು ವಾಕ್ಪಟುಗಳು ಅದು ಹೇಗೆ ದೊಡ್ಡವರಾಗುತ್ತಾರೆ? ಬದುಕುವ ಕಲೆಯನ್ನು ಕಲಿತ ಡೊಂಬರು ಮುಂತಾದವರು ಅದು ಹೇಗೆ ಸಣ್ಣವರಾಗುತ್ತಾರೆ? ಎಂಬವು ಬಸವಣ್ಣನವರು ಸಮಾಜದ ಮುಂದೆ ಇಟ್ಟ ಪ್ರಶ್ನೆಗಳಾಗಿವೆ.

 ಗರ್ವ, ಕ್ರೋಧ, ಅಹಂಕಾರ, ಕಾಮನೆಗಳು, ಅಪ್ರಿಯ ವಚನ, ಮೋಸ, ಮತ್ಸರ ಎಂಬ ಎಂಟು ರಜೋಗುಣಗಳಿವೆ. ಅಜ್ಞಾನ, ಮೋಹ, ನಿದ್ರೆ, ಚಾಪಲ್ಯ, ಹೀನವೃತ್ತಿ, ಪಾಪಕೃತ್ಯ, ಪರನಿಂದೆ, ಪರಹಿಂಸೆ ಎಂಬ ಎಂಟು ತಮೋಗುಣಗಳಿವೆ. ಈ ರಾಜಸ ಮತ್ತು ತಾಮಸ ಗುಣಗಳಿಗೆ ಅಂಟಿಕೊಳ್ಳದಂಥ ಸಾತ್ವಿಕ ಗುಣಜ್ಞಾನದೊಂದಿಗೆ ಶರಣರು ಆಚಾರಧರ್ಮದ ಸಾಧನೆ ಮಾಡಿದ್ದಾರೆ ಎಂದು ಬಸವಣ್ಣನವರು ಹೆಮ್ಮೆಯಿಂದ ಹೇಳುತ್ತಾರೆ. ಸದಾಚಾರ, ನಿಯತಾಚಾರ ಹಾಗೂ ಗಣಾಚಾರಗಳು ಆಚಾರಧರ್ಮದ ಮೂರು ಅಂಗಗಳಾಗಿವೆ. ಎಲ್ಲ ಜನ ಅಹುದೆಂಬುದೇ ಸದಾಚಾರ, ಹಿಡಿದ ವ್ರತ ನಿಯಮವ ಬಿಡದಿಹುದೇ ನಿಯತಾಚಾರ, ಶಿವನಿಂದೆಯ ಕೇಳದಿಹುದೇ ಗಣಾಚಾರ. ಇಂಥ ಗುಣಜ್ಞಾನ ಮತ್ತು ಆಚಾರಧರ್ಮದ ಶರಣರು ಯಾವುದೇ ಕಾಯಕ ಮಾಡಿದರೂ ಶ್ರೇಷ್ಠರೇ ಆಗಿರುತ್ತಾರೆ.

ಬಸವಣ್ಣನವರು ಎಷ್ಟೊಂದು ಸಂವೇದನಾಶೀಲರಾಗಿದ್ದರು ಎಂಬುದಕ್ಕೆ ಈ ವಚನ ಸಾಕ್ಷಿಯಾಗಿದೆ. ಅವರ ಮನಸ್ಸು ಸದಾ ಬಡವರ ಕಡೆಗೆ ಹರಿಯುತ್ತಿತ್ತು. ಬಡವರ ಬಗ್ಗೆ ಕಾಳಜಿ ವಹಿಸದ ಜ್ಞಾನವು ಜ್ಞಾನವೇ ಅಲ್ಲ ಎಂಬುದು ಅವರ ದೃಢನಿರ್ಧಾರವಾಗಿತ್ತು. ಶುಷ್ಕ ಪಾಂಡಿತ್ಯದ ಗ್ರಂಥಗಳು, ಪ್ರತಿಭಾಪ್ರದರ್ಶನಗಳು ಮತ್ತು ವಾದಗಳು ಬಡವರ ಪರವಾಗಿ ಇಲ್ಲದ ಕಾರಣ ಬಸವಣ್ಣನವರಿಗೆ ಅವುಗಳ ಬಗ್ಗೆ ಬೇಸರವಿದೆ. ಪಂಡಿತರು ನರ್ತನದ ಬಗ್ಗೆ ಗ್ರಂಥ ಬರೆಯಬಹುದು. ಆದರೆ ನರ್ತಿಸಲು ಬರುವುದೇ? ಕಟಕಾಚಾರ್ಯರು ಬಿಲ್ ವಿದ್ಯೆಯನ್ನು ಕಲಿಸಬಹುದು. ಆದರೆ ಗುರಿಕಾರನ ಹಾಗೆ ಬಾಣ ಪ್ರಯೋಗ ಮಾಡಬಹುದೇ? ವಿಜ್ಞಾನಿಗಳು ಸಮತೋಲನದ ಬಗ್ಗೆ ಮಾತನಾಡಬಹುದು. ಆದರೆ ಡೊಂಬರ ಹಾಗೆ ಹಗ್ಗದ ಮೇಲೆ ನಡೆಯಲು ಬರುವುದೇ? ವಾದಿಗಳು ಸಿದ್ಧಾಂತಗಳ ಬಗ್ಗೆ ವಾದ ಮಾಡಬಹುದು. ಆದರೆ ಅವರಿಗೆ ನುಡಿದಂತೆ ನಡೆಯಲು ಬರುವುದೇ? ನಡೆನುಡಿ ಸಿದ್ಧಾಂತದ ಶರಣರು ಗುಣಜ್ಞಾನಿಗಳಾಗಿದ್ದು ಆಚಾರವೇ ಅವರ ಧರ್ಮವಾಗಿದೆ.

 ದೇವರು ಎಲ್ಲರಲ್ಲಿ ಇರುವುದರಿಂದ ಎಲ್ಲರೂ ಆನಂದಮಯವಾಗಿ ಈ ಬದುಕನ್ನು ಅನಭವಿಸಬೇಕು ಎಂಬುದು ಮನದಟ್ಟಾದರೆ ಅದೇ ಅರಿವು. ಆ ಅರಿವನ್ನು ಆಚಾರವಾಗಿಸುವುದೇ ಆಚಾರಧರ್ಮ. ಅರಿವಿನ ಬಗ್ಗೆ ನುಡಿಯುತ್ತ ಅದನ್ನು ಆಚರಣೆಯಲ್ಲಿ ತರುವುದೇ ಶರಣಧರ್ಮ. ಆದ್ದರಿಂದ ಶರಣಧರ್ಮವು ಆಚಾರಧರ್ಮವಾಗಿ ಲೋಕಹಿತ ಕಾಪಾಡುವ ಧರ್ಮ ಎನಿಸಿದೆ. ಸಂಪತ್ತಿನ ಹಿನ್ನೆಲೆಯಿಂದ ಬಂದಿದ್ದ ಶರಣರು, ಬಸವಣ್ಣನವರಿಂದಾಗಿ ಬಡವರ ಜೊತೆ ಒಂದಾಗಿ, ಅವರ ಪ್ರತಿಭೆಯನ್ನು ಗುರುತಿಸುವ ಸಾಮರ್ಥ್ಯ ಪಡೆದರು. ಬಡತನದ ಹಿನ್ನೆಲೆಯಿಂದ ಬಂದಿದ್ದ್ದ ಶರಣರು ತಮ್ಮ ನಡೆನುಡಿಗಳಿಂದ ಘನತೆವೆತ್ತ ಬದುಕನ್ನು ಬದುಕಿದರು. ಕಾಯಕಜೀವಿಗಳ ಪ್ರತಿಭೆಯಿಂದ ಈ ಜಗತ್ತು ಎಲ್ಲರೀತಿಯ ಸೌಲಭ್ಯಗಳನ್ನು ಪಡೆಯುತ್ತಿದೆ ಎಂಬುದರ ಪ್ರಜ್ಞೆ ಧನಾಢ್ಯರಲ್ಲಿ ಕೂಡ ಮೊದಲಬಾರಿಗೆ ಮೂಡಿದ್ದು ಬಸವಣ್ಣನವರ ಕಾಲದಲ್ಲೇ. ಈ ದೃಷ್ಟಿಯಿಂದ ಜಗತ್ತಿನ ದುಡಿಯುವ ವರ್ಗದ ಮೊದಲ ನಾಯಕ ಬಸವಣ್ಣನವರೇ ಆಗಿದ್ದಾರೆ.

ಬಸವಣ್ಣನವರು ಕಾಯಕಜೀವಿಗಳಿಗೆ, ಅಂದರೆ ದುಡಿಯುವ ವರ್ಗದ ಜನರಿಗೆ ಭೌತಿಕ ಲೋಕದಲ್ಲಿ ನ್ಯಾಯ ಒದಗಿಸುವುದಷ್ಟೇ ಅಲ್ಲದೆ ಅನುಭಾವದ ಲೋಕದಲ್ಲಿ ಕೂಡ ಅವರು ಔನ್ನತ್ಯ ಸಾಧಿಸುವಂಥ ವಾತಾವರಣ ಸೃಷ್ಟಿಸಿದರು. ಶರಣಸಂಕುಲದ ಮಾನವೀಯ ಪರಿಸರದಲ್ಲಿ ಕಾಯಕಜೀವಿಗಳು ಗುಣಜ್ಞಾನದ ಆಚಾರಧರ್ಮವನ್ನು ಪಾಲಿಸುತ್ತ ಹಿರಿಯತನವನ್ನು ಸಾಧಿಸಿದರು. ಬಸವಣ್ಣನವರು ಈ ರೀತಿಯಲ್ಲಿ ಸಮತಾ ಭಾವದಿಂದ ಕೂಡಿದ ಸಮೂಹ ಬದುಕಿನ ಮಹತ್ವವನ್ನು ಸಾರಿದರು.

ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಬುದ್ಧಿಜೀವಿಗಳು ವ್ಯವಸ್ಥೆಯ ಗುಲಾಮರಾಗಿರುತ್ತಾರೆ ಎಂದು ಕಾರ್ಲ್ ಮಾರ್ಕ್ಸ್ 19ನೇ ಶತಮಾನದಲ್ಲಿ ಕಠೋರ ಸತ್ಯದ ದರ್ಶನ ಮಾಡಿಸಿದ್ದಾರೆ. ಇದೇ ಅಭಿಪ್ರಾಯವನ್ನು ಬಸವಣ್ಣನವರು 12ನೇ ಶತಮಾನದಲ್ಲೇ ವ್ಯಕ್ತಪಡಿಸಿದ್ದು ಅವರ ದಿವ್ಯ ಪ್ರತಿಭೆಗೆ ಸಾಕ್ಷಿಯಾಗಿದೆ. ಬಂಡವಾಳಶಾಹಿ ಯುಗ ಇನ್ನೂ ಕಣ್ಣುಬಿಡುವ ಮೊದಲೇ ಅದರ ಕ್ರೌರ್ಯವನ್ನು ಬಸವಣ್ಣನವರು ಕಂಡುಹಿಡಿದದ್ದು ಎಂಥವರನ್ನೂ ವಿಸ್ಮಯಗೊಳಿಸುವಂಥದ್ದು. ‘‘ವೇದಶಾಸ್ತ್ರ ಆಗಮಂಗಳನೋದಿದವರು ಹಿರಿಯರೆ? ಕವಿ, ಗಮಕಿ, ವಾದಿ, ವಾಗ್ಮಿಗಳು ಹಿರಿಯರೆ?’’ ಎಂದು ಬಸವಣ್ಣನವರು ಪ್ರಶ್ನಿಸುವಲ್ಲಿ ಅವರ ಸತ್ಯದ ನಿಲವು, ಮಹಾಜ್ಞಾನ ಮತ್ತು ವೀರಗುಣ ಎದ್ದುಕಾಣುತ್ತದೆ. ವೇದ ಪಂಡಿತರು, ಶಾಸ್ತ್ರಜ್ಞರು, ಆಗಮ ಪಂಡಿತರು, ಆಸ್ಥಾನದ ಕವಿಗಳು, ಅವರ ಕಾವ್ಯಗಳನ್ನು ರಾಗಬದ್ಧವಾಗಿ ಓದುವ ಗಮಕಿಗಳು, ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಮುಂತಾದ ಮತಗಳ ಬಗ್ಗೆ ವಾದ ಮಂಡಿಸುವ ವಾದಿಗಳು, ವಾಕ್ ಚಾತುರ್ಯದ ವಾಗ್ಮಿಗಳು ಉಳ್ಳವರ ಪರವಾಗಿ ಇರುವರೊ ಅಥವಾ ಬಡವರ ಪರವಾಗಿ ಇರುವರೊ ಎಂಬ ಪ್ರಶ್ನೆಯನ್ನು ಬಸವಣ್ಣನವರು ಸೂಚ್ಯವಾಗಿ ಎತ್ತಿದ್ದಾರೆ.

***

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News