ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಅರ್ಜಿಗಳು ಎಷ್ಟು ಗೊತ್ತೇ?

Update: 2017-12-05 03:52 GMT

ಹೊಸದಿಲ್ಲಿ, ಡಿ.5: ಕೆಳಹಂತದ ನ್ಯಾಯಾಲಯಗಳಲ್ಲಿ ಸುಪ್ರೀಂಕೋರ್ಟ್ ವಿಧಿಸಿದ ಕಾಲಮಿತಿಯಲ್ಲಿ ನ್ಯಾಯಾಧೀಶರ ನೇಮಕಾತಿ ಆಗದಿರುವುದರಿಂದ ದೇಶಾದ್ಯಂತ ಶೇಕಡ 23ರಷ್ಟು ನ್ಯಾಯಾಧೀಶರ ಕೊರತೆ ಇದೆ ಹಾಗೂ 2.5 ಕೋಟಿ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ.

ದಿಲ್ಲಿ ಮೂಲದ ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬಹಿರಂಗವಾಗಿದೆ.
ಸರಾಸರಿ ನೇಮಕಾತಿ ಪ್ರಕ್ರಿಯೆ ಅವಧಿಯನ್ನು 10 ವರ್ಷಗಳ ಅವಧಿಗೆ 18 ರಾಜ್ಯಗಳಿಗೆ ಸಂಬಂಧಿಸಿದಂತೆ ಲೆಕ್ಕ ಹಾಕಲಾಗಿದೆ. ಮೂರು ಹಂತದ ನೇಮಕಾತಿ ಪ್ರಕ್ರಿಯೆಗೆ ಸರಾಸರಿ 326.7 ದಿನಗಳು ಕಿರಿಯ ನ್ಯಾಯಮೂರ್ತಿಗಳ ನೇಮಕಾತಿಗೆ ಬೇಕಾಗುತ್ತವೆ. ಸುಪ್ರೀಂಕೋರ್ಟ್ ಈ ಎಲ್ಲ ಪ್ರಕ್ರಿಯೆಯನ್ನು 273 ದಿನಗಳಲ್ಲಿ ಪೂರೈಸುವಂತೆ ಆದೇಶ ನೀಡಿತ್ತು.

ಎರಡು ಹಂತದ ನೇಮಕಾತಿ ವ್ಯವಸ್ಥೆಯನ್ನು ಜಾರಿಗೊಳಿಸಿಕೊಂಡು ನೇಮಕಾತಿ ಮಾಡುವ ರಾಜ್ಯಗಳು 196.3 ದಿನಗಳಲ್ಲಿ ಜಿಲ್ಲಾ ನ್ಯಾಯಾಧೀಶರ ಹುದ್ದೆಗಳನ್ನು ನೇಮಕ ಮಾಡುತ್ತಿವೆ. ಮೂರು ಹಂತದ ನೇಮಕಾತಿ ಪ್ರಕ್ರಿಯೆ ಅನುಸರಿಸುವ ರಾಜ್ಯಗಳಲ್ಲಿ ಸರಾಸರಿ 339.5 ದಿನಗಳ ಅವಧಿ ಬೇಕಾಗುತ್ತದೆ. ಎರಡೂ ವರ್ಗದಲ್ಲಿ ಕೂಡಾ ಸುಪ್ರೀಂಕೋರ್ಟ್ ನಿಗದಿಪಡಿಸಿದ 153 ದಿನ ಹಾಗೂ 273 ದಿನಗಳ ಕಾಲಮಿತಿಯಲ್ಲಿ ನೇಮಕಾತಿ ಆಗುತ್ತಿಲ್ಲ.

ಸುಪ್ರೀಂಕೋರ್ಟ್ ಆರಂಭಿಸಿರುವ ಸ್ವಯಂನಿರ್ಧಾರದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹಿನ್ನೆಲೆಯಲ್ಲಿ ವಿಧಿ ಸೆಂಟರ್‌ನ ಅಧ್ಯಯನ ವಿಶೇಷ ಮಹತ್ವ ಪಡೆದಿದೆ. ಕಾನೂನು ಸಚಿವಾಲಯ ಕಳೆದ ವರ್ಷದ ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್‌ನ ಪ್ರಧಾನ ಕಾರ್ಯದರ್ಶಿಗೆ ಬರೆದ ಪತ್ರದ ಹಿನ್ನೆಲೆಯಲ್ಲಿ ಈ ವಿಚಾರಣೆ ನಡೆಯುತ್ತಿದೆ. ಈ ಪತ್ರದಲ್ಲಿ ಕೇಂದ್ರೀಯ ಆಯ್ಕೆ ವ್ಯವಸ್ಥೆಯನ್ನು ದೇಶಾದ್ಯಂತ ಕೆಳಹಂತದ ನ್ಯಾಯಾಧೀಶರ ನೇಮಕಾತಿಗೆ ಜಾರಿಗೊಳಿಸಲು ಅನುಮತಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News