ಬಾಬರಿ ಮಸೀದಿ ಧ್ವಂಸ : ಶಿವಮೊಗ್ಗದಲ್ಲಿ ಪ್ರತಿಭಟನೆ

Update: 2017-12-06 11:04 GMT

ಶಿವಮೊಗ್ಗ, ಡಿ. 6: ಬಾಬರಿ ಮಸೀದಿ ಧ್ವಂಸಗೊಳಿಸಿ ಇಂದಿಗೆ 25 ವರ್ಷಗಳಾದ ಹಿನ್ನೆಲೆಯಲ್ಲಿ ಮಸೀದಿ ಪುನರ್ ನಿರ್ಮಾಣ ಮಾಡಬೇಕು ಹಾಗೂ ನಾಶಗೈದ ಆರೋಪಿಗಳ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ, ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಮನವಿ ಪತ್ರ ಅರ್ಪಿಸಿದವು.

ಕೌನ್ಸಿಲ್: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಸಲ್ಲಿಸಿದ ಮನವಿ ಪತ್ರದಲ್ಲಿ, '1992 ಡಿಸೆಂಬರ್ 6 ರಂದು ಹಿಂದೂ ಫ್ಯಾಸಿಸ್ಟ್ ಶಕ್ತಿಗಳು ಅಯೋಧ್ಯೆಯಲ್ಲಿದ್ದ ಸುಮಾರು 4 ಶತಮಾನಗಳಷ್ಟು ಹಳೇಯದಾದ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದವು. ಈ ಮೂಲಕ ಭಾರತ ಎತ್ತಿ ಹಿಡಿದುಕೊಂಡು ಬಂದಿದ್ದ ಆದರ್ಶ, ಮೌಲ್ಯಗಳನ್ನು ಕೂಡ ಧ್ವಂಸಗೊಳಿಸಿದ್ದವು.

ಮಸೀದಿ ಧ್ವಂಸದ ವೇಳೆ ಅಂದಿನ ಸರ್ಕಾರಗಳು ಮೂಕ ಪ್ರೇಕ್ಷಕವಾಗಿದ್ದವು. ಕಾನೂನುಗಳು ಬರೀ ಕಾಗದದ ಮೇಲಿನ ಬರಹವಾಗಿ ಉಳಿದಿತ್ತು. ನ್ಯಾಯಾಂಗದ ಪರಿಣಾಮ ಕೂಡ ಶೂನ್ಯವಾಗಿತ್ತು. ಬಾಬರಿ ಮಸೀದಿ ಧ್ವಂಸಗೊಂಡ ದಿನದಂದು ವಿಶ್ವದ ಮುಂದೆ ಭಾರತವು ನಾಚಿಕೆಯಿಂದ ತಲೆತಗ್ಗಿಸಿ ನಿಲ್ಲುವಂತಾಗಿತ್ತು' ಎಂದು ಸಮಿತಿ ಮನವಿಯಲ್ಲಿ ತಿಳಿಸಿದೆ.

ಈ ವಿಧ್ವಂಸಕ ಕೃತ್ಯದ ಪ್ರಮುಖ ಆರೋಪಿಗಳು ಆರ್.ಎಸ್.ಎಸ್. ಆಗಿದೆ. ಉಳಿದಂತೆ ವಿಶ್ವ ಹಿಂದೂ ಪರಿಷತ್, ಬಿಜೆಪಿ ಹಾಗೂ ಇತರೆ ಕೆಲ ಸಂಘಟನೆಗಳು ಸಮಾನ ಪಾಲುದಾರರಾಗಿವೆ. ಮಸೀದಿ ಧ್ವಂಸಗೊಂಡು 25 ವರ್ಷಗಳಾಗುತ್ತಾ ಬಂದಿದೆ. ಧ್ವಂಸಗೊಂಡ ಸ್ಥಳದಲ್ಲಿಯೇ ಮಸೀದಿ ನಿರ್ಮಾಣ ಮಾಡುವುದಾಗಿ ಸರ್ಕಾರ ನೀಡಿದ್ದ ಭರವಸೆ ಈಡೇರಿಲ್ಲ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ. ಮನವಿಯ ನೇತೃತ್ವವನ್ನು ಸಮಿತಿಯ ಅಧ್ಯಕ್ಷರಾದ ನಯಮುಲ್ಲಾಖಾನ್ ವಹಿಸಿದ್ದರು.

ಎಸ್‍ಡಿಪಿಐ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಸಲ್ಲಿಸಿದ ಮನವಿಯಲ್ಲಿ, 'ಬಾಬರಿ ಮಸೀದಿ ಧ್ವಂಸಗೊಂಡು 25 ವರ್ಷವಾಗುತ್ತಾ ಬಂದರೂ ಇಲ್ಲಿಯವರೆಗೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಜೊತೆಗೆ ಮಸೀದಿ ನಿರ್ಮಾಣ ಕಾರ್ಯವು ಪುನಾರಾರಂಭಗೊಂಡಿಲ್ಲ. ಇದು ನಿಜಕ್ಕೂ ಖೇದಕರ ಸಂಗತಿಯಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಸೀದಿ ಧ್ವಂಸಗೊಂಡ ನಂತರ ಕೆಲ ಕೋಮುವಾದಿ ಸಂಘಟನೆಗಳು ದೇಶದಲ್ಲಿ ಕೋಮು ಧೃವೀಕರಣ, ಹಿಂಸೆ, ದ್ವೇಷ ಹಬ್ಬಿಸುವ ಹಾಗೂ ಸಮಾಜ ವಿಭಜಿಸುವ ಕೆಲಸ ಮಾಡುತ್ತಿವೆ. ಈ ಮೂಲಕ ಹಿಂದೂ, ಮುಸ್ಲಿಂ, ದಲಿತ, ಆದಿವಾಸಿಗಳನ್ನು ಬಲಿಪಶುಗಳನ್ನಾಗಿಸುವ ಕೃತ್ಯ ನಡೆಸುತ್ತಿವೆ. ಇದು ನಿಜಕ್ಕೂ ಹೇಯ ಕೃತ್ಯವಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಬಾಬರಿ ಮಸೀದಿಯ ಪುನರ್ ನಿರ್ಮಾಣ ಹಾಗೂ ಧ್ವಂಸಗೊಳಿಸಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವವರೆಗೂ ದೇಶದಲ್ಲಿ ಜಾತ್ಯತೀತತೆಯ ಮರು ಸ್ಥಾಪನೆ ಸಾಧ್ಯವಿಲ್ಲ ಎಂಬುವುದನ್ನು ಅರಿತುಕೊಳ್ಳಬೇಕಾಗಿದೆ. ನ್ಯಾಯ ಸಿಗುವವರೆಗೂ ಜಾತ್ಯತೀತ ಸಂಘಟನೆಗಳು ನಿರಂತರ ಹೋರಾಟ ನಡೆಸಬೇಕಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಕಲೀಮುಲ್ಲಾ ಸೇರಿದಂತೆ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News