ಮೃತಪಟ್ಟಿದೆ ಎಂದು ತಪ್ಪಾಗಿ ಘೋಷಿಸಲ್ಪಟ್ಟಿದ್ದ ನವಜಾತ ಶಿಶು ವಾರದ ಬಳಿಕ ಮೃತ್ಯು

Update: 2017-12-06 12:49 GMT

ಹೊಸದಿಲ್ಲಿ, ಡಿ.6: ಇಲ್ಲಿಯ ಖಾಸಗಿ ಆಸ್ಪತ್ರೆ ಮ್ಯಾಕ್ಸ್ ಹಾಸ್ಪಿಟಲ್‌ನ ವೈದ್ಯರು 'ಮೃತಪಟ್ಟಿದೆ' ಎಂದು ತಪ್ಪಾಗಿ ಘೋಷಿಸಿದ್ದ ನವಜಾತ ಶಿಶು ಸೋಂಕು ಮತ್ತು ಇತರ ವೈದ್ಯಕೀಯ ಸಮಸ್ಯೆಗಳಿಂದಾಗಿ ಮೃತಪಟ್ಟಿದೆ ಎಂದು ಕುಟುಂಬ ಸದಸ್ಯರೋರ್ವರು ಬುಧವಾರ ಇಲ್ಲಿ ತಿಳಿಸಿದರು.

ಮಾ.30ರಂದು ಮ್ಯಾಕ್ಸ್ ಆಸ್ಪತ್ರೆಯಲ್ಲಿ ಅವಧಿ ಪೂರ್ವ ಪ್ರಸವದಲ್ಲಿ ಜನಿಸಿದ್ದ ಈ ಗಂಡು ಶಿಶುವಿಗೆ ಕಳೆದೊಂದು ವಾರದಿಂದ ಪೀತಂಪುರದಲ್ಲಿಯ ಕ್ಲಿನಿಕ್‌ವೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಅಶೋಕ್ ಕುಮಾರ್ ಎನ್ನುವವರ ಪತ್ನಿ ವರ್ಷಾ ನ.30ರಂದು ಮ್ಯಾಕ್ಸ್ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನನ ನೀಡಿದ್ದರು. 23 ವಾರಗಳಿಗೆ ಜನಿಸಿದ್ದ ಈ ಮಕ್ಕಳ ಪೈಕಿ ಹೆಣ್ಣು ಶಿಶು ತಾಯಿಯ ಗರ್ಭದಲ್ಲಿಯೇ ಮೃತಪಟ್ಟಿತ್ತು. ಗಂಡು ಶಿಶು ಬದುಕಿತ್ತಾದರೂ ಒಂದು ಗಂಟೆಯ ಬಳಿಕ ಅದೂ ಸತ್ತಿದೆ ಎಂದು ಘೋಷಿಸಿದ್ದ ವೈದ್ಯರು  ಮಕ್ಕಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಪೋಷಕರಿಗೆ ಒಪ್ಪಿಸಿದ್ದರು. ಅಂತ್ಯ ಸಂಸ್ಕಾರಕ್ಕೆ ಒಯ್ಯುತ್ತಿದ್ದಾಗ ಗಂಡು ಮಗು ಉಸಿರಾಡುತ್ತಿರುವುದು ಬೆಳಕಿಗೆ ಬಂದಿತ್ತು.

ಮ್ಯಾಕ್ಸ್ ಆಸ್ಪತ್ರೆಯು ಪ್ಲಾಸ್ಟಿಕ್‌ನಲ್ಲಿ ಸುತ್ತಿದ್ದರಿಂದ ಮಗುವಿಗೆ ಸೋಂಕು ತಗುಲಿದೆ ಎಂದು ಕುಮಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ದಿಲ್ಲಿ ಸರಕಾರದ ತನಿಖಾ ಸಮಿತಿಯು ಮಂಗಳವಾರ ವರದಿ ಸಲ್ಲಿಸಿ, ಜೀವಂತ ಮಗುವನ್ನು ಮೃತಪಟ್ಟಿದೆ ಎಂದು ಘೋಷಿಸುವ ಮೂಲಕ ಆಸ್ಪತ್ರೆಯು ನಿರ್ಲಕ್ಷ್ಯತನವನ್ನು ಪ್ರದರ್ಶಿಸಿದೆ ಎಂದು ಹೇಳಿತ್ತು.

ಮ್ಯಾಕ್ಸ್ ಆಸ್ಪತ್ರೆಯು ಈಗಾಗಲೇ ನಿರ್ಲಕ್ಷದ ಆರೋಪದಲ್ಲಿ ತನ್ನಿಬ್ಬರು ವೈದ್ಯರನ್ನು ವಜಾಗೊಳಿಸಿದೆ. ಕುಮಾರ್ ಕುಟುಂಬ ಮತ್ತು ಬಂಧುಗಳು ಬುಧವಾರವೂ ಮ್ಯಾಕ್ಸ್ ಆಸ್ಪತ್ರೆಯೆದುರು ಪ್ರತಿಭಟನೆ ನಡೆಸಿದ್ದು, ಸೂಕ್ತ ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದು ಡಿಸಿಪಿ ಅಸ್ಲಂ ಖಾನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News