ಜಗವ ನಡುಗಿಸಿದ ಆ ಹತ್ತು ದಿನ

Update: 2017-12-06 18:43 GMT

ಸೋವಿಯತ್ ರಶ್ಯಾದಲ್ಲಿ ನಡೆದ ಐತಿಹಾಸಿಕ ಜಗತ್ಪ್ರಸಿದ್ಧ ಅಕ್ಟೋಬರ್ ಕ್ರಾಂತಿಗೆ ಈಗ ನೂರರ ಸಂಭ್ರಮ. ಝಾರ್ ಚಕ್ರವರ್ತಿಯ ದಬ್ಬಾಳಿಕೆಯಿಂದ ರೋಸಿ ಹೋದ ಜನತೆ ಬೋಲ್ಶೆವಿಕ್ ನಾಯಕ ಲೆನಿನ್ ನೇತೃತ್ವದಲ್ಲಿ ಒಗ್ಗೂಡಿ ಹೋರಾಟದ ಮಾರ್ಗ ಹಿಡಿದು ಸಶಸ್ತ್ರ ದಂಗೆಯ ಮೂಲಕ ಹೊಸತೊಂದು ಆಡಳಿತವನ್ನು ಸೋವಿಯತ್‌ಗೆ ನೀಡಿದ ದಿನ. ಬಂಡವಾಳಶಾಹಿ ವ್ಯವಸ್ಥೆ ನಡುಗಿ ನಿಂತ ಸಂದರ್ಭ ಅದು. ಆ ಹೋರಾಟದ ಹಿನ್ನೆಲೆ ಮತ್ತು ಕೊನೆಯ ಹತ್ತು ದಿನಗಳ ಘಟನಾವಳಿಗಳನ್ನು ‘ಜಗವ ನಡುಗಿಸಿದ ಆ ಹತ್ತು ದಿನ’ ಕೃತಿಯಲ್ಲಿ ನೀಡಲಾಗಿದೆ. ಜಾನ್ ರೀಡ್ ಬರೆದಿರುವ ಕೃತಿಯನ್ನು ಡಾ. ಬಿ. ಆರ್. ಮಂಜುನಾಥ್ ಅವರು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಜಾನ್ ರೀಡ್ ಎಂಬ ಅಮೆರಿಕನ್ ಪತ್ರಕರ್ತ ಅಲ್ಲಿ ನಡೆದ ವಿದ್ಯಮಾನಗಳನ್ನು ಕಣ್ಣಾರೆ ಕಂಡು ತನ್ನ ‘ಟೆನ್ ಡೇಸ್ ದಟ್ ಶುಕ್ ದ ವರ್ಲ್ಡ್’ ಕೃತಿಯಲ್ಲಿ ಅಕ್ಷರ ರೂಪಕ್ಕಿಳಿಸಿದ್ದಾರೆ. ಅದರ ಸಂಕ್ಷಿಪ್ತ ರೂಪಾಂತರ ಈ ಕೃತಿ. ಒಬ್ಬ ವರದಿಗಾರ ಆಳದಲ್ಲಿ ಆ್ಯಕ್ಟಿವಿಸ್ಟ್ ಆಗಿದ್ದಾಗ ಜಾನ್ ರೀಡ್‌ನಂತಹ ಬರಹಗಾರ ಹುಟ್ಟಿಕೊಳ್ಳುತ್ತಾನೆ. ಆ ಬದ್ಧತೆಯೇ ಅವನಿಂದ ಈ ಕೃತಿಯನ್ನು ಬರೆಸಿದೆ. ಅಂದಿನ ದಿನಗಳ ವರದಿಯನ್ನು ಆತ ಯಾವುದೋ ಹೊಟೇಲ್ ಕೋಣೆಯಲ್ಲಿ ಕೂತು ಮಾಡಲಿಲ್ಲ. ಅವನು ರಸ್ತೆಯಲ್ಲಿ, ಯುದ್ಧಭೂಮಿಯಲ್ಲಿ, ಕಂದರಗಳಲ್ಲಿ ಇಳಿದು ವರದಿಯನ್ನು ಮಾಡಿದ. ನಾಲ್ಕು ಬಾರಿ ಮೃತ್ಯುವಿನ ಬಾಯಿಂದ ತಪ್ಪಿಸಿಕೊಂಡು ಬಂದ. ರಶ್ಯನ್ ಭಾಷೆಯೇ ಸರಿಯಾಗಿ ಬರದಿದ್ದ ರೀಡ್ ಬರೆದ ಕೃತಿಯನ್ನು ಸ್ವತಃ ಲೆನಿನ್ ಕೂಡ ಶ್ಲಾಘಿಸಿದ್ದಾರೆ. ಇದು ಕ್ರಾಂತಿಯ ಸಮಗ್ರ ಕಥನವನ್ನು ತೆರೆದಿಡುವುದಿಲ್ಲ. ಕೆಲವು ನಿರ್ದಿಷ್ಟ ಘಟನೆಗಳ ಸಂಗ್ರಹ ರೂಪಗಳನ್ನು ಪತ್ರಕರ್ತನಾಗಿ ರೀಡ್ ಕಟ್ಟಿಕೊಡುತ್ತಾನೆ. ಆದರೆ ಆ ಘಟನೆಗಳು ಒಟ್ಟು ಕ್ರಾಂತಿಯ ಸ್ವರೂಪವನ್ನು ನಮ್ಮಾಳಗೆ ತೆರೆದಿಡಲು ಯಶಸ್ವಿಯಾಗುತ್ತವೆ. ಈ ಕೃತಿಯಲ್ಲಿ ಒಟ್ಟು 12 ಅಧ್ಯಾಯಗಳಿವೆ. ಕ್ರಾಂತಿಗೆ ಮುಂಚಿನ ದಿನ, ಹಂಗಾಮಿ ಸರಕಾರದ ಪತನ, ವಿಮೋಚನಾ ಸಮಿತಿಯ ಕಾರ್ಯವೈಖರಿ, ಪ್ರತಿಕ್ರಾಂತಿ ಹೀಗೆ ಕ್ರಾಂತಿಯ ಹಂತಗಳನ್ನು ವಿವರಿಸುತ್ತಾ ವಿಜಯದ ಕ್ಷಣಗಳನ್ನು, ಹುತಾತ್ಮರಾದ ಕ್ರಾಂತಿಕಾರರನ್ನು ಭಾವುಕವಾಗಿ ಕಟ್ಟಿಕೊಡುತ್ತಾರೆ. ರಶ್ಯನ್ ಕ್ರಾಂತಿಯ ಉತ್ಕರ್ಷವನ್ನು ಮಾತ್ರ ಇದು ತೆರೆದಿಡುವುದರಿಂದ ಮತ್ತು ಅನಂತರ ವೈಫಲ್ಯಗಳನ್ನು ಮುಟ್ಟುವುದಿಲ್ಲವಾದುದರಿಂದ ಇದು ಕ್ರಾಂತಿಯ ಸಮಗ್ರ ದರ್ಶನವನ್ನು ಓದುಗರಿಗೆ ಮಾಡಿಸಲಾರದು ಎನ್ನುವುದು ಕೃತಿಯ ಕೊರತೆಯಾಗಿದೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಒಟ್ಟು ಪುಟಗಳು 232. ಮುಖಬೆಲೆ 180 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News