ನಾಗಪುರದ ಸಂವಿಧಾನವನ್ನು ಹೇರುವುದನ್ನು ಸಹಿಸಲು ಸಾಧ್ಯವಿಲ್ಲ: ಡಾ.ಪುರುಷೋತ್ತಮ ಬಿಳಿಮಲೆ

Update: 2017-12-07 05:25 GMT

ಬೆಳಗಾವಿ, ಡಿ.7: ದೇಶದ ಸ್ಥಿತಿ ಬದಲಾಯಿಸಲು, ಸಮಾಜದಲ್ಲಿ ಬದಲಾವಣೆ ತರಬೇಕಾದರೆ ನಮಗೆ ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನವೇ ಬೇಕು. ಅಂಬೇಡ್ಕರ್ ಅವರ ಸಂವಿಧಾನ ಬಿಟ್ಟು ನಾಗಪುರದ ಸಂವಿಧಾನವನ್ನು ಹೇರುವುದನ್ನು ಸಹಿಸಲು ಸಾಧ್ಯವಿಲ್ಲ. ಸಂವಿಧಾನದ ನಿಯಂತ್ರಣ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಹೊಸದಿಲ್ಲಿಯಲ್ಲಿ ಇರಬೇಕೇ ಹೊರತು ನಾಗಪುರದಲ್ಲಿ ಹಿಂದೂತ್ವವಾದಿಗಳ ಕೈಯಲ್ಲಿ ಅಲ್ಲ ಎಂದು ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಇಲ್ಲಿನ ಬುದ್ದ, ಬಸವ, ಅಂಬೇಡ್ಕರ್ ಶಾಂತಿಧಾಮದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು.

 ಡಾ.ಅಂಬೇಡ್ಕರ್ ನೀಡಿರುವ ಸಂವಿಧಾನವನ್ನು ಬದಲಾಯಿಸುವ ಪ್ರಯತ್ನಗಳನ್ನು ವಿಫಲಗೊಳಿಸಬೇಕು. ಸಂವಿಧಾನ ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ವಿದ್ಯೆ ಮತ್ತು ಪ್ರಶ್ನಿಸುವ, ಮನೋಭಾವ ಬಾರದಿದ್ದರೆ ಸಮಾಜದಲ್ಲಿ ಬದಲಾವಣೆ ಸಾಧ್ಯವಿಲ್ಲ. ಜಾತಕ, ಜ್ಯೋತಿಷ್ಯಗಳು ಭವಿಷ್ಯವನ್ನು  ಹಾಳು ಮಾಡುತ್ತಿದ್ದು, ಈ ಬಗ್ಗೆ ಜಾಗೃತರಾಗಬೇಕು. ಶೋಷಿತರು, ಬಡವರು, ಜನಸಾಮಾನ್ಯರನ್ನು ಮತ್ತೆ ಹಿಂದಕ್ಕೆ ಒಯ್ಯುವ ಹುನ್ನಾರಗಳನ್ನು ತಡೆಯಬೇಕು ಎಂದವರು ಕರೆ ನೀಡಿದರು.

 ಪ್ರಶ್ನೆ ಮಾಡುವ ಮತ್ತು ಉತ್ತರ ಕಂಡುಕೊಳ್ಳುವ ಪ್ರಕ್ರಿಯೆಗಳನ್ನು ಪ್ರೇರೆಪಿಸಲು ಬ್ರಾಹ್ಮಣರು ಶಾಸ್ತ್ರಗಳನ್ನು ಸೃಷ್ಟಿಸಿದರು. ಆದರೆ ಬ್ರಾಹ್ಮಣೇತರ ನಡುವೆ ಈ ಶಾಸ್ತ್ರಗಳನ್ನು  ಪ್ರಚಾರಗೊಳಿಸಲು ವಿಫಲವಾದರು. ಹಾಗಾಗೀ ಭಾರತದ ಬಹುಸಂಖ್ಯಾತ, ಶೇ.90ರಷ್ಟು ಜನ ಪ್ರಶ್ನೆ ಕೇಳಲಾಗದ ಸ್ಥಿತಿಯಲ್ಲೇ ಉಳಿದು ಮೌಢ್ಯಗಳಲ್ಲಿ ಮುಳುಗಿದರು ಎಂದು ಡಾ.ಪುರುಷೋತ್ತಮ ಬಿಳಿಮಲೆ ವಿಶ್ಲೇಷಿಸಿದರು.

'ಪದ್ಮಾವತಿ' ಸಿನೆಮಾ ವಿಚಾರವಾಗಿ ಮಾತನಾಡಿದ ಅವರು, 'ಪದ್ಮಾವತಿ' ಬದುಕಿದ್ದ ಕಾಲಕ್ಕೂ ಅಲ್ಲಾವುದ್ದೀನ್ ಖಿಲ್ಜಿ ಬದುಕಿದ್ದ ಕಾಲಕ್ಕೂ 260 ವರ್ಷಗಳ ಅಂತರ ಇದೆ. ಆದರೆ ರಜಪೂತ ಸಮುದಾಯವರು ಪದ್ಮಾವತಿಗೆ ಅನ್ಯಾಯವಾಗಿದೆ ಎಂದು ಗಲಾಟೆ ಮಾಡಿದರು. ಬಿಜೆಪಿ ಆಡಳಿತವಿರುವ 5 ಸರ್ಕಾರಗಳು ಪದ್ಮಾವತಿ ಸಿನಿಮಾವನ್ನು ವಿಕ್ಷೀಸದೇ ಬ್ಯಾನ್ ಮಾಡಿದವು. ಇದೇ ರಜಪೂತರು ತಮ್ಮ ಮನೆಯಲ್ಲಿ ಹೆಣ್ಣು ಮಕ್ಕಳನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಪ್ರಾಧ್ಯಾಪಕ ಡಾ. ಬಿಳಿಮಲೆ ಹೇಳಿದರು.

ಪದ್ಮಾವತಿ ಸಿನಿಮಾದಲ್ಲಿ  ಖಿಲ್ಜಿಯನ್ನು ಯಾಕೆ ನಾಯಕನಂತೆ ಚಿತ್ರಿಸಿದ್ದೀರಿ ಎಂದು ಮುಸ್ಲಿಮರು ಕೇಳಬೇಕಿತ್ತು. ಆದರೆ ಅವರು ಕೇಳಲಿಲ್ಲ. ಹಾಗಾಗಿ ಪ್ರಶ್ನೆ ಕೇಳಬೇಕಾದವರು ಪ್ರಶ್ನೆ ಕೇಳದೆ ಇರುವುದರಿಂದ ಈ ದೇಶ ಮೂಢನಂಬಿಕೆಗಳ ತವರಾಗಿದೆ ಎಂದು ಡಾ.ಪುರುಷೋತ್ತಮ ಹೇಳಿದರು.

ದೇಶದ ಮಿಡಿಯಾಗಳು ಜನರಲ್ಲಿ ಮೂಢನಂಬಿಕೆಗಳನ್ನು ಬಿತ್ತುವ ಸಂಸ್ಥೆಗಳಾಗಿವೆ.  ಭವಿಷ್ಯ ಹೇಳುತ್ತ  ಕುಳಿತುಕೊಳ್ಳುವಂತವರು ದರಿದ್ರರು. ಅವರಿಂದಲೇ ದೇಶದಲ್ಲಿ ಮೌಢ್ಯಗಳು  ಹೆಚ್ಚಾಗುತ್ತಿದೆ ಎಂದವರು ಜರಿದರು.

ಜಾತಕ, ಪಂಚಾಂಗಗಳು ತಂದೆ-ತಾಯಿ, ಅಣ್ಣ-ತಮ್ಮಂದಿರ ಮಧ್ಯೆ ಕಂದಕ ಸೃಷ್ಟಿಸುತ್ತಿವೆ. ಶೇ.94ರಷ್ಟು ಜನರನ್ನು ಜಾತಕಗಳು ನಾಶ ಮಾಡಿವೆ.  ಜಾತಕದಲ್ಲಿ ನಿಮ್ಮ ಮಗನಿಗೆ ವಿದ್ಯಾಯೋಗವಿಲ್ಲ ಎಂದು ಸ್ವಾಮೀಜಿಯೊಬ್ಬರು ನಮ್ಮ ಅಪ್ಪನಿಗೆ ತಿಳಿಸಿದ್ದರು. ಆದರೆ ನಾನು ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜೆ.ಎನ್.ಯು. ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಜನರು ಮೂಢನಂಬಿಕೆಗಳಿಂದ ಹೊರಬಂದು ಜಾಗೃತರಾಗಬೇಕು ಎಂದು ಡಾ.ಬಿಳಿಮಲೆ ಕರೆ ನೀಡಿದರು.

ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ, ಬಸವಬೆಳವಿಯ ಶರಣದೇವರು, ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬಹುಭಾಷಾ ನಟ ಪ್ರಕಾಶ ರೈ, ಬೈಲೂರು, ಅಥಣಿ, ಬೆಳವಿ ಶ್ರೀಮಠದ ಸ್ವಾಮೀಜಿ, ಶಾಸಕ ಸತೀಶ ಜಾರಕಿಹೊಳಿ, ನಗಾರಿ ಬಾರಿಸುವ ಮೂಲಕ  ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಕೆ.ನೀಲಾ ಮಾತನಾಡಿದರು.

ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ವಿಲ್ಪ್ರೆಡ್ ಡಿಸೋಜ ಪ್ರಾಸ್ತಾವಿಕ ಮಾತನಾಡಿದರು. ಸತೀಶಕುಮಾರ ಕೆ.ಎಸ್. ಸ್ವಾಗತಿಸಿದರು. ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ, ಹೈಕೋರ್ಟ್ ವಕೀಲ ಅನಂತ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ಮಂಡ್ಯದ ಮುನ್ನಡೆ ಮಹಿಳಾ ನಗಾರಿ ತಂಡದವರು ನಗಾರಿ ಬಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News