ಕಾಂಗ್ರೆಸ್ ಪಕ್ಷ ಸೇರಲು ಬಿಜೆಪಿಯ ನಾನಾ ಪಟೋಲೆ ನಿರ್ಧಾರ ?

Update: 2017-12-10 05:13 GMT

ಮುಂಬೈ, ಡಿ. 10: ಬಿಜೆಪಿ ಸಂಸದರಾಗಿದ್ದ ನಾನಾ ಪಟೋಲೆ ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿದ್ದಾರೆ. ಆದರೆ ಇದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಯನ್ನು ಕೆರಳಿಸಿದೆ.

ಪಟೋಲೆ ಅವರು ಸಂಸದರಾಗಿದ್ದ ಭಂಡಾರಾ-ಗೊಂಡಿಯಾ ಲೋಕಸಭಾ ಕ್ಷೇತ್ರ ಎನ್‌ಸಿಪಿ- ಕಾಂಗ್ರೆಸ್ ಸೀಟು ಹೊಂದಾಣಿಕೆಯಲ್ಲಿ ಎನ್‌ಸಿಪಿಗೆ ಮೀಸಲಾದ ಕ್ಷೇತ್ರವಾಗಿರುವುದು ಸಮಸ್ಯೆಗೆ ಮೂಲ ಕಾರಣ.

ಈ ಬಗ್ಗೆ ಕಾಂಗ್ರೆಸ್ ಮುಖಂಡರ ಜತೆ ಮಾತುಕತೆ ನಡೆಸಲಾಗುವುದು ಎಂದು ಎನ್‌ಸಿಪಿ ಮುಖ್ಯಸ್ಥ ಸುನೀಲ್ ತಟ್ಕರೆ ಹೇಳಿದ್ದಾರೆ. ಇದು ಎನ್‌ಸಿಪಿ ಮುಖಂಡ ಪ್ರಫುಲ್ ಪಟೇಲ್ ಅವರ ತವರು ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಎನ್‌ಸಿಪಿ ಪ್ರತಿಪಾದಿಸಿದೆ. 2014ರ ಲೋಕಸಭಾ ಚುನಾವಣೆಗೆ ಮುನ್ನ ಪ್ರಫುಲ್ ಪಟೇಲ್ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದರು.

ಪಟೋಲೆ ಶುಕ್ರವಾರ ಬಿಜೆಪಿ ತೊರೆದಿದ್ದು, ಕಾಂಗ್ರೆಸ್ ಸೇರ್ಪಡೆಗಾಗಿ ಪಕ್ಷದ ಮುಖಂಡರ ಜತೆ ಸಂಪರ್ಕದಲ್ಲಿದ್ದಾರೆ. ಪಟೋಲೆ ಈಗಾಗಲೇ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಮುಂಬರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ. ಎನ್‌ಸಿಪಿ ಕೂಡಾ ತಮ್ಮ ಉಮೇದುವಾರಿಕೆಯನ್ನು ಬೆಂಬಲಿಸಬೇಕು ಎಂದು ಅವರು ಕೋರಿದ್ದಾರೆ.

ಎನ್‌ಸಿಪಿ 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎನ್‌ಸಿಪಿ ಸ್ಥಾನ ಹೊಂದಾಣಿಕೆ ಮಾಡಿಕೊಂಡಿದ್ದು, ಕಾಂಗ್ರೆಸ್ ಎರಡು ಹಾಗೂ ಎನ್‌ಸಿಪಿ ನಾಲ್ಕು ಸ್ಥಾನ ಗೆದ್ದಿದ್ದವು. ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮುರಿದು ಉಭಯ ಪಕ್ಷಗಳು ಹೀನಾಯ ಸೋಲು ಅನುಭವಿಸಿದ್ದವು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೈತ್ರಿಗೆ ನಿರ್ಧರಿಸಿವೆ.

ಪಟೋಲೆ 2008ರಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದರು. 2014ರ ಚುನಾವಣೆ ವೇಳೆ ಬಿಜೆಪಿ ಅವರನ್ನು ಭಂಡಾರಾ- ಗೊಂದಿಯಾ ಕ್ಷೇತ್ರದಿಂದ ಕಣಕ್ಕೆ ಇಳಿಸಿತ್ತು. ಎನ್‌ಸಿಪಿ ಮುಖಂಡ ಪ್ರಫುಲ್ ಪಟೇಲ್ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News