ಪತ್ರಿಕೋದ್ಯಮದ ದುರಂತ

Update: 2017-12-10 18:35 GMT

ಮಾನ್ಯರೆ, 

ಟ್ಯಾಬ್ಲಾಯಿಡ್ ಪತ್ರಿಕೆಗಳೆಂದರೆ ಪೀತ ಪತ್ರಿಕೋದ್ಯಮ ಎಂಬ ಕಳಂಕ ಅಂಟಿಕೊಂಡಿದ್ದ ಹೊತ್ತಿನಲ್ಲಿ ಪಿ. ಲಂಕೇಶ್ ಅವರು ‘ಲಂಕೇಶ್ ಪತ್ರಿಕೆ’ಯನ್ನು ಹೊರತಂದರು. ಟ್ಯಾಬ್ಲಾಯಿಡ್ ಪತ್ರಿಕೆಯೊಂದು ನಾಡಿನ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳಲ್ಲಿ ಹೇಗೆ ಪಾತ್ರವಹಿಸಬಹುದು ಎನ್ನುವುದನ್ನು ತಮ್ಮ ಪತ್ರಿಕೆಯ ಮೂಲಕ ತೋರಿಸಿಕೊಟ್ಟರು. ಅಷ್ಟೇ ಅಲ್ಲ, ಲಂಕೇಶ್ ಪತ್ರಿಕೆ ಹೊಸ ಪ್ರತಿಭಾವಂತ ಜಾಗೃತ ತಲೆಮಾರೊಂದನ್ನು ಬೆಳೆಸಿತು. ಭಾಷೆಯನ್ನು ತೀಕ್ಷ್ಣವಾಗಿ ಬಳಸುವ ಸಂದರ್ಭದಲ್ಲೂ ವಿವೇಕವನ್ನು ಕಳೆದುಕೊಳ್ಳಬಾರದು ಎನ್ನುವುದನ್ನು ಪಿ. ಲಂಕೇಶರ ಬರಹಗಳಿಂದ ಒಂದು ಪೀಳಿಗೆ ಕಲಿಯಿತು. ಅವರು ಯಾವತ್ತೂ ಪತ್ರಿಕೆಯ ಪ್ರಸಾರಕ್ಕಾಗಿ ರೋಚಕ ಭಾಷೆಯನ್ನು, ಶೈಲಿಯನ್ನು ಬಳಸಿದವರಲ್ಲ. ಜನರನ್ನು ರಂಜಿಸುವುದಕ್ಕಾಗಿ ಅವರು ಬರೆಯಲಿಲ್ಲ. ಹಾಗೆಂದು ಅವುಗಳು ಒಣ ವಿಚಾರಗಳೂ ಆಗಿರಲಿಲ್ಲ. ಸರಳ ಕನ್ನಡದಲ್ಲಿ, ಹೂವಿನಂತಹ ಭಾಷೆಯೊಂದನ್ನು ಅವರು ಪತ್ರಿಕೆಯ ಮೂಲಕ ರೂಪಿಸಿದರು. ಅವರ ವ್ಯಂಗ್ಯ ಯಾವತ್ತೂ ನಿಂದನೆಯ ಮಟ್ಟವನ್ನು ತಲುಪಲಿಲ್ಲ. ದುರದೃಷ್ಟವಶಾತ್, ಲಂಕೇಶ್‌ರನ್ನು ಮಾದರಿಯಾಗಿಟ್ಟುಕೊಂಡು ಪತ್ರಿಕೆ ಮಾಡಲು ಹೊರಟ ಕೆಲವರು ರೋಚಕತೆ, ಅಪರಾಧ, ರಂಜನೆ ಇವುಗಳ ಹಿಂದೆ ಬಿದ್ದರು. ಆತ್ಮರತಿ ಅದರ ಪ್ರಮುಖ ಗುಣವಾಯಿತು. ಜನರ ತಕ್ಷಣದ ಅಗತ್ಯವನ್ನು ಪೂರೈಸುವುದಷ್ಟೇ ಅದರ ಗುರಿಯಾಯಿತು. ಒಂದು ರೀತಿಯಲ್ಲಿ, ಭಾಷೆಯನ್ನು ವ್ಯಾಪಾರಕ್ಕಾಗಿ ದುಡಿಸಿಕೊಂಡರು. ಅದರಿಂದ ಪತ್ರಿಕೆಯ ಪ್ರಸಾರ ಹೆಚ್ಚಾಯಿತೇ ಹೊರತು, ಅದು ಸಮಾಜದ ಮೇಲೆ ಬೀರಿದ ಪರಿಣಾಮ, ಸಮಾಜದೊಳಗೆ ಉಂಟು ಮಾಡಿದ ಬದಲಾವಣೆ ಶೂನ್ಯ. ಅಪರಾಧಗಳನ್ನು ಮತ್ತು ಅಪರಾಧಿಗಳನ್ನು ನೆಚ್ಚಿಕೊಂಡು, ರೋಚಕತೆಯ ಹಿಂದೆ ಬಿದ್ದ ಪತ್ರಿಕೆಯೊಂದು ಹೇಗೆ ದುರಂತ ಕಾಣಬಹುದು ಎನ್ನುವುದಕ್ಕೆ ರವಿ ಬೆಳಗೆರೆ ಪ್ರಕರಣ ಒಂದು ಉದಾಹರಣೆಯಾಗಿದೆ. ಲಂಕೇಶ್ ಮತ್ತು ಬೆಳಗೆರೆಯನ್ನು ಇಟ್ಟುಕೊಂಡು ಹೊಸ ತಲೆಮಾರು ಕಲಿಯಬೇಕಾದುದು ತುಂಬಾ ಇದೆ. ಸುಳ್ಳುಗಳು ಕೆಲವು ಕಾಲ ಉಲ್ಕೆಯಂತೆ ಉರಿದು ನಮ್ಮನ್ನು ಬೆಚ್ಚಿ ಬೀಳಿಸಬಹುದು. ಆದರೆ ಅದರ ಆಯಸ್ಸು ಮುಗಿದ ಆನಂತರ ಉಳಿಯುವುದು ಬರಿದೇ ಕತ್ತಲು ಮಾತ್ರ.

- ಅರ್ಚನಾ ಪರಮೇಶ್ವರಯ್ಯ, ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News