ಡಿಎಫ್‍ಓ ಚಂದ್ರಣ್ಣರ ವರ್ಗಾವಣೆಗೆ ಮಾದಿಗ ಮಹಾಸಭಾದ ಖಂಡನೆ

Update: 2017-12-11 11:41 GMT

ಚಿಕ್ಕಮಗಳೂರು, ಡಿ.11: ದಕ್ಷ ಹಾಗೂ ಜನಪರ ಕಾಳಜಿ ಹೊಂದಿರುವ ಡಿಎಫ್‍ಓ ಚಂದ್ರಣ್ಣ ಅವರನ್ನು ಏಕಾಏಕಿ ವರ್ಗಾವಣೆ ಮಾಡಿರುವ ಸರ್ಕಾರದ ಕ್ರಮವನ್ನು ಅಖಿಲ ಕರ್ನಾಟಕ ಮಾದಿಗ ಮಹಾಸಭಾ ಖಂಡಿಸುತ್ತದೆ. ಅಧಿಕಾರಿಯ ಈ ವರ್ಗಾವಣೆಯ ಹಿಂದೆ ಕೆಲವು ಪ್ರಭಾವಿ ಒತ್ತುವರಿದಾರರ ಕೈವಾಡವಿದೆ ಎಂದು ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷ ಆರ್. ರಮೇಶ್ ತಿಳಿಸಿದ್ದಾರೆ. 

ಅವರು ಸೋಮವಾರ ಈ ಕುರಿತು ಹೇಳಿಕೆ ನೀಡಿದ್ದು, ಮಸಗಲಿ ಮೀಸಲಿ ಅರಣ್ಯದಲ್ಲಿ 276 ಮಂದಿ ಕೆಲವು ಪ್ರಭಾವಿ ಕಾಫಿ ಬೆಳೆಗಾರರು 1830 ಎಕರೆ ಮೀಸಲು ಅರಣ್ಯವನ್ನು ಒತ್ತುವಾರಿ ಮಾಡಿದ್ದು, ಒತ್ತುವರಿ ಪ್ರದೇಶವನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಕಳೆದ ಏಪ್ರಿಲ್ ತಿಂಗಳಲ್ಲಿ ಅರಣ್ಯ ಇಲಾಖೆಗೆ ಆದೇಶ ನೀಡಿದೆ. ನ್ಯಾಯಾಲಯದ ಆದೇಶವನ್ನು ಅನುಷ್ಠಾನಗೊಳಿಸಲು ಮುಂದಾದ ಅಧಿಕಾರಿಗೆ ಪ್ರಭಾವಿ ಒತ್ತುವರಿದಾರರು ಸರ್ಕಾರದ ಮೇಲೆ ಒತ್ತಡ ತಂದು ವರ್ಗಾವಣೆ ಭಾಗ್ಯ ನೀಡಿದ್ದಾರೆಂದು ಆರೋಪಿಸಿದ್ದಾರೆ. 

ಮೀಸಲು ಅರಣ್ಯದಲ್ಲಿ ಒತ್ತುವರಿ ಮಾಡಿರುವ 276 ಜನರಲ್ಲಿ ಓರ್ವ ಒತ್ತುವರಿದಾರರಿಂದ 250 ಎಕರೆ ಕಾಫಿ ತೋಟವನ್ನು ಆಡಳಿತ ಪಕ್ಷದ ಪ್ರಭಾವಿ ಸಚಿವರೊಬ್ಬರು ಖರೀದಿಸಿದ್ದು, ಇವರ ಮೂಲಕ ಒತ್ತೀಚೆಗೆ ನರಸಿಂಹರಾಜಪುರಕ್ಕೆ ಭೇಟಿನೀಡಿದ್ದ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಡಿ.ಎಫ್.ಓ. ಚಂದ್ರಣ್ಣ ಅವರ ವರ್ಗಾವಣೆ ಮಾಡಿಸಲಾಗಿದೆ ಎಂದು ರಮೇಶ್ ತಿಳಿಸಿದ್ದಾರೆ. 

ಯಾವುದೇ ಅವ್ಯಹಾರದ ಆರೋಪಗಳಿಲ್ಲದೇ ಜನಪರ ಕಾಳಜಿಯಿಂದ ಕೆಲಸ ಮಾಡುತ್ತಿರುವ ಇಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಬಡವರ ಮತ್ತು ದಲಿತರ ಕುಟುಂಬಗಳಿಗೆ ನ್ಯಾಯ ದೊರಕಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. 

ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಅರಣ್ಯ ಅಧಿಕಾರಿಗಳ ಮೂಲಕ ಅನುಷ್ಠಾನಗೊಳಿಸಬೇಕಾದ ಸರ್ಕಾರ ಜನಪರ ಮತ್ತು ದಕ್ಷ ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯ ನೀಡುವುದು ಖಂಡನೀಯ ಎಂದು ತಿಳಿಸಿದ್ದು, ಕೂಡಲೇ ಈ ಅಧಿಕಾರಿಯ ವರ್ಗಾವಣೆ ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News