ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಗೌಳಿಗರ ಸಮುದಾಯದ ಒತ್ತಾಯ

Update: 2017-12-11 12:37 GMT

ಚಿಕ್ಕಮಗಳೂರು, ಡಿ.11: ತರೀಕೆರೆ ತಾಲ್ಲೂಕಿನ ಗೌಳಿಗರ ಕ್ಯಾಂಪ್‍ಗೆ ಕುಡಿಯುವ ನೀರು, ರಸ್ತೆ, ಬೀದಿ ದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಸ್ಥಳೀಯ ನಿವಾಸಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಅವರು ಸೋಮವಾರ ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಅವರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದ ಗೌಳಿಗ ಸಮುದಾಯದವರು ತಲತಲಾಂತರದಿಂದ ನಮ್ಮ ಸಮಾಜದ 30 ಕುಟುಂಬಗಳು ಕ್ಯಾಂಪ್‍ನಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿವೆ ಎಂದರು.

ಹೈನುಗಾರಿಕೆ ಮತ್ತು ವ್ಯವಸಾಯ ಮಾಡಿ ಬದುಕುತ್ತಿರುವ ತಮ್ಮ ಕುಟುಂಬಗಳ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ದಾಖಲಾಗಿವೆ ಎಂದ ಅವರು ತಮ್ಮ ಕ್ಯಾಂಪ್‍ನಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿದೀಪ, ಶೌಚಾಲಯ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಬಸ್ ಸಂಚಾರದ ವ್ಯವಸ್ಥೆ ಇಲ್ಲ ಎಂದು ಅಳಲು ತೋಡಿಕೊಂಡರು.

ಮೂಲಭೂತ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದರೆ ನೀವು ವಾಸಿಸುವ ಪ್ರದೇಶ ಲಕ್ಕವಳ್ಳಿ ಮೀಸಲು ಅರಣ್ಯಕ್ಕೆ ಸೇರಿರುವುದರಿಂದಾಗಿ ಸೌಲಭ್ಯ ಒದಗಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದಿರುವುದರಿಂದಾಗಿ ನಮ್ಮ ಬದುಕು ದುಸ್ತರವಾಗಿದೆ. ರಾತ್ರಿ ವೇಳೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಬಸ್ ಸಂಚಾರ ಇಲ್ಲದಿರುವುದರಿಂದಾಗಿ ನಮ್ಮ ಮಕ್ಕಳು 5 ಕಿಲೋಮೀಟರ್ ದೂರ ನಡೆದೇ ಸಾಗುತ್ತಿದ್ದಾರೆ ಎಂದು ಹೇಳಿದರು.

ಅರಣ್ಯವಾಸಿಗಳಾದ ನಾವು ತಲತಲಾಂತರದಿಂದ ವಾಸಿಸುತ್ತಿರುವ ಮನೆ ಮತ್ತು ಕೃಷಿ ಮಾಡುತ್ತಿರುವ ಭೂಮಿಯನ್ನು ಸಕ್ರಮಗೊಳಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಇಲ್ಲದಿದ್ದಲ್ಲಿ ಕಂದಾಯ ಇಲಾಖೆಯಿಂದ ವರ್ಗಾವಣೆಗೊಂಡಿರುವ ಸಿದ್ದರಹಳ್ಳಿಯ ಸ.ನಂ.26ರ ಪ್ರದೇಶದಲ್ಲಿ ನಮಗೆ ಬದಲಿ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಆ ಜಾಗದಲ್ಲಿ ನಮಗೆ ಮನೆ ಕಟ್ಟಿಕೊಳ್ಳಲು ಅನುಮತಿ ನೀಡಬೇಕು, ಕೃಷಿಗೆ ಭೂಮಿ ಒದಗಿಸಬೇಕು ಎಂದು ಮನವಿ ಮಾಡಿದರು.ಗೌಳಿಗ ಸಮುದಾಯದ ಶಶಿಕುಮಾರ್, ಸಾಮೂಜಿ, ಗಂಗಾಧರ್, ಚಲ್ವಕುಮಾರ್, ಮಂಜುನಾಥ್, ಜಾನು, ಬಾಗು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News